ಸಾಧು-ಸಂತರ ಕೊಡುಗೆ ಈ ದೇಶಕ್ಕಿಲ್ಲವಾ? ಅವರಿಗೇಕೆ ಭಾರತ ರತ್ನ ಇಲ್ಲ?: ರಾಮ್ ದೇವ್
ಸಮಾಜಕ್ಕೆ ಅದ್ಭುತವಾದ ಕೊಡುಗೆ ನೀಡಿದ ಹೊರತಾಗಿಯೂ ಭಾರತ ಸ್ವತಂತ್ರಗೊಂಡ ಎಪ್ಪತ್ತು ವರ್ಷಗಳಲ್ಲಿ ಯಾರೊಬ್ಬ ಸಾಧುವಿಗೂ ಯಾವುದೇ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿಲ್ಲ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಸರಕಾರದ ಬಗ್ಗೆ ನಿಮಗಿರುವ ದ್ವೇಷದಿಂದ ಹೀಗೆ ಹೇಳುತ್ತಿದ್ದೀರಾ ಎಂಬ ಪ್ರಶ್ನೆಗೆ, ನಾನು ಅದನ್ನು ಹೇಳಲು ಸಾಧ್ಯವಿಲ್ಲ. ಸರಳವಾಗಿ ಆ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.
ಪತಂಜಲಿ ಬ್ರ್ಯಾಂಡ್ ನ ಹುಟ್ಟು ಹಾಕಿದ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ರಾಮ್ ದೇವ್, ನಾನು ರಾಜಕಾರಣದಿಂದ ದೂರ ಉಳಿದಿದ್ದೇನೆ ಎಂದು ಇತ್ತೀಚೆಗೆ ಹೇಳಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಲೋಕಸಭೆ ಚುನಾವಣೆಗೆ ಪ್ರಚಾರ ನಡೆಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ನಾನು ಏಕೆ ಮಾಡಬೇಕು ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಈಗಾಗಲೇ ಭಾರತ ರತ್ನ ಬಂದವರ ದೇಶ ಕಟ್ಟುವ ಕೆಲಸದ ಬಗ್ಗೆ ನನಗೆ ಅಪಾರ ಗೌರವ ಇದೆ. ಆದರೆ ಕೇಸರಿ ಧರಿಸಿದ ಒಬ್ಬರೇ ಒಬ್ಬರು ಸನ್ಯಾಸಿಗೆ ದೇಶದ ಅತ್ಯುನ್ನತ ಗೌರವ ದೊರೆಯದಿರುವುದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ಈ ವರೆಗೆ ಸನ್ಯಾಸಿಯೊಬ್ಬರಿಗೆ ಏಕೆ ಭಾರತ ರತ್ನ ಬಂದಿಲ್ಲ. ಮಹರ್ಷಿ ದಯಾನಂದ ಅಥವಾ ಸ್ವಾಮಿ ವಿವೇಕಾನಂದ ಅವರು ದೇಶಕ್ಕೆ ನೀಡಿದ ಕೊಡುಗೆ ಯಾವ ರಾಜಕೀಯ ನಾಯಕರು ಅಥವಾ ಕ್ರೀಡಾಳುವಿಗಿಂತ ಕಡಿಮೆ ಇಲ್ಲ ಎಂದು ಹೇಳಿದ್ದಾರೆ.

ಮದರ್ ತೆರೇಸಾಗೆ ಈ ಪ್ರಶಸ್ತಿ ನೀಡಿದ್ದಾರೆ. ಅವರು ಕ್ರಿಶ್ಚಿಯನ್, ಆದರೆ ಹಿಂದೂ ಎಂಬ ಕಾರಣಕ್ಕೆ ಬೇರೆ ಸನ್ಯಾಸಿಗಳಿಗೆ ನೀಡಿಲ್ಲ. ಈ ದೇಶದಲ್ಲಿ ಹಿಂದೂ ಆಗಿರುವುದು ಅಪರಾಧವಾ ಎಂದು ರಾಮ್ ದೇವ್ ಪ್ರಶ್ನೆ ಮಾಡಿದ್ದಾರೆ. ಯಾರೆಲ್ಲ ಸಂತರು ಅಪಾರ ಕೊಡುಗೆ ನೀಡಿದ್ದಾರೋ ಅವರೆಲ್ಲರಿಗೂ ಭಾರತ ರತ್ನ ಸಿಗಲೇಬೇಕು ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೇರಿದಂರೆ ಕರ್ನಾಟಕ ಕಾಂಗ್ರೆಸ್ ನ ಹಲವು ನಾಯಕರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಘೋಷಿಸುವಂತೆ ಒತ್ತಾಯಿಸಿದ್ದರು. 111ನೇ ವರ್ಷದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಜನವರಿ 21ರಂದು (ಕಳೆದ ವಾರ) ಶಿವೈಕ್ಯರಾದರು.











Click it and Unblock the Notifications