ಬಿಜೆಪಿ VS ಕಾಂಗ್ರೆಸ್: ನಕ್ಸಲರ ನಾಡಿನಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವೇನು?
ಪಂಚರಾಜ್ಯ ಎಲೆಕ್ಷನ್‌ನ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದು, ಛತ್ತೀಸ್‌ಗಢ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಪಕ್ಕಾ ಆಗಿದೆ. ಹೀಗಿದ್ದಾಗಲೇ, ಇಲ್ಲಿ ಮತ್ತೆ ಕಾಂಗ್ರೆಸ್ ಗೆಲ್ಲಲು ಕಾರಣ ಏನು? ಅನ್ನೋ ಚರ್ಚೆ ಜೋರಾಗಿದೆ. ಹಾಗಾದರೆ ಛತ್ತೀಸ್‌ಗಢದ ಅಖಾಡದಲ್ಲಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತೊಮ್ಮೆ ಗೆಲುವಿನ ನಗೆ ಬೀರುತ್ತಿರುವುದು ಹೇಗೆ?
ಅಷ್ಟಕ್ಕೂ ಎನ್‌ಡಿಟಿವಿ ಸಮೀಕ್ಷೆ ಪ್ರಕಾರ ಛತ್ತೀಸ್‌ಗಢ ಮತದಾರರು ಮತ್ತೊಮ್ಮೆ ಕಾಂಗ್ರೆಸ್ ಕೈಹಿಡಿಯಲು ಕಾರಣ ಹಲವು. ಆದರೆ ಪ್ರಮುಖವಾಗಿ ಬುಡಕಟ್ಟು ಸಮುದಾಯದ ಸ್ಥಿತಿಗತಿ ಹಾಗೂ ಮಾವೋವಾದಿ ಸ್ಥಿತಿ ನಿಭಾಯಿಸುವ ವಿಚಾರದಲ್ಲಿ, ಆಡಳಿತಾರೂಢ ಕಾಂಗ್ರೆಸ್‌ಗೆ ಜೈ ಎಂದಿದ್ದಾರಂತೆ ಮತದಾರರು. ಏಕೆಂದ್ರೆ ಛತ್ತೀಸ್‌ಗಢ ರಾಜ್ಯದಲ್ಲಿ ಬುಡಕಟ್ಟು ಸಮುದಾಯ ಶೇ. 30ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಬಸ್ತಾರ್ ಸೇರಿದಂತೆ ಸುರ್ಗುಜಾ ಪ್ರದೇಶದಲ್ಲೂ ಬುಡಕಟ್ಟು ಸಮುದಾಯದವರು ಹೆಚ್ಚಾಗಿ ವಾಸವಿದ್ದಾರೆ. ಇದೆಲ್ಲಾ ಕಾಂಗ್ರೆಸ್‌ಗೆ ಪ್ಲಸ್ ಆಗಿ ನಿಲ್ಲಲಿದೆ ಅಂತಾ ಹೇಳಲಾಗುತ್ತಿದೆ.

ಮೀಸಲು ಇಲ್ಲದಿದ್ದರೂ ಭರ್ಜರಿ ಗೆಲುವು!
2018ರ ವಿಧಾನಸಭೆ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷದಿಂದ ಬುಡಕಟ್ಟು ಸಮುದಾಯದ ಹಲವು ಶಾಸಕರು ಆಯ್ಕೆಯಾಗಿ ಬಂದರು. ಹಾಗೇ ಬುಡಕಟ್ಟು ಸಮುದಾಯ ಮುಖಂಡರು & ನಾಯಕರಿಗೆ ಕಾಂಗ್ರೆಸ್ ಸಾಕಷ್ಟು ಅವಕಾಶ ನೀಡಿತ್ತು. ಹೀಗೆ ಬುಡಕಟ್ಟು ಸಮುದಾಯ, ಕಾಂಗ್ರೆಸ್ ಪರವಾಗಿ ಬಲವಾಗಿ ನಿಂತಿತ್ತು ಎನ್ನಲಾಗಿದೆ. ಇನ್ನು 90 ಸದಸ್ಯರ ಬಲ ಇರುವ ಛತ್ತೀಸ್‌ಗಢ ವಿಧಾನಸಭೆಯಲ್ಲಿ ಒಟ್ಟು 29 ಬುಡಕಟ್ಟು ಸಮುದಾಯದ ಶಾಸಕರು ಇದ್ದಾರೆ.
ಮಾವೋವಾದಿಗಳ ನಿಭಾಯಿಸಿದ ರೀತಿ
ಭೂಪೇಶ್ ಬಘೇಲ್ ಸರ್ಕಾರವು ಮಾವೋವಾದಿಗಳ ಜೊತೆಗೆ ವ್ಯವಹರಿಸಿದ ರೀತಿ ಬಗ್ಗೆಯೂ ಛತ್ತೀಸ್‌ಗಢ ಮತದಾರರು ಧನಾತ್ಮಕ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಹಾಗೇ ರಸ್ತೆಗಳ ಅಭಿವೃದ್ಧಿ, ಸರ್ಕಾರಿ ಶಾಲೆಗಳು, ಆಸ್ಪತ್ರೆ, ವಿದ್ಯುತ್, ಕುಡಿವ ನೀರು ಪೂರೈಕೆ ಬಗ್ಗೆ ಕೂಡ ಛತ್ತೀಸ್‌ಗಢ ಮತದಾರರು ತೃಪ್ತರಾಗಿದ್ದಾರೆ ಎನ್ನಲಾಗಿದೆ. ಹೇಗೆಂದರೆ ಗಿರಿ ಶಿಖರದ ರಾಜ್ಯ, ಛತ್ತೀಸ್‌ಗಢದಲ್ಲಿ ಈ ಅಭಿವೃದ್ಧಿಯು ಜನರನ್ನು ಸೆಳೆದಿದೆ ಎನ್ನುತ್ತಿವೆ ಸಮೀಕ್ಷೆಗಳು.

ಕಳೆದ ಐದು ವರ್ಷಗಳ ಕಾಂಗ್ರೆಸ್ ಸಾಧನೆ ಬಗ್ಗೆ ಛತ್ತೀಸ್‌ಗಢದ ಶೇಕಡಾ 79 ರಷ್ಟು ಜನ ತೃಪ್ತಿ ಹೊಂದಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದ್ರೆ ಶೇಕಡಾ 10 ರಷ್ಟು ಮಂದಿ ಮಾತ್ರ ಸಂಪೂರ್ಣ ಅತೃಪ್ತರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದೇ ಸ್ಟ್ರಾಟಜಿಯಲ್ಲಿ & ಅಭಿವೃದ್ಧಿ ವೇಗದ ಹಿನ್ನೆಲೆ ಛತ್ತೀಸ್‌ಗಢ ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ ಬೀಳುವ ನಿರೀಕ್ಷೆ ಇದೆ ಅಂತಾ ಹೇಳುತ್ತಿವೆ ಸಮೀಕ್ಷೆಗಳು.
ಯಾವ ಸಮೀಕ್ಷೆ ಏನು ಹೇಳುತ್ತೆ?
ಛತ್ತೀಸ್‌ಗಢ ರಾಜ್ಯದಲ್ಲಿ ಹಲವು ಚುನಾವಣೋತ್ತರ ಸಮೀಕ್ಷೆಗಳು ಜನರಿಂದ ಮಾಹಿತಿ ಸಂಗ್ರಹ ಮಾಡಿವೆ. ಈ ಪೈಕಿ ಎಬಿಪಿ & ಸಿ-ವೋಟರ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 41 ರಿಂದ 53 ಸ್ಥಾನ ಪಡೆಯಬಹುದು ಎನ್ನಲಾಗಿದೆ. ಬಿಜೆಪಿ 36ರಿಂದ 48 ಸ್ಥಾನ ಗೆಲ್ಲಬಹುದು ಅಂತಾ ಹೇಳಿದ್ದರೆ, ಇತರರು 0-4 ಸ್ಥಾನ ಗೆಲ್ಲಬಹುದು ಅಂತಿದೆ ಎಬಿಪಿ, ಸಿ-ವೋಟರ್ ಸಮೀಕ್ಷೆ. 'ಜನ್ ಕಿ ಬಾತ್' ಸಮೀಕ್ಷೆ ಪ್ರಕಾರ ಕಾಂಗ್ರೆಸ್ 42 ರಿಂದ 53 ಸ್ಥಾನಗಳ ಪಡೆಯಬಹುದು ಎನ್ನಲಾಗಿದೆ. ಬಿಜೆಪಿ 34ರಿಂದ 45 ಸ್ಥಾನ ಗೆಲ್ಲಬಹುದು ಅಂತಾ ಹೇಳಿದ್ದರೆ ಇತರರು 0-3 ಸ್ಥಾನ ಗೆಲ್ಲಬಹುದು ಅಂತಾ ಹೇಳಲಾಗಿದೆ.
ಇಂಡಿಯಾ ಟುಡೇ & ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 40ರಿಂದ 50 ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆ ಮೂಡಿದ್ದರೆ, ಬಿಜೆಪಿ 36-46 ಸ್ಥಾನ & ಇತರರು 1-5 ಸ್ಥಾನದಲ್ಲಿ ಜಯ ಗಳಿಸಬಹುದು ಎನ್ನಲಾಗಿದೆ. ಟಿವಿ5 ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ 54ರಿಂದ 66 ಸ್ಥಾನ, ಬಿಜೆಪಿಗೆ 29-39 ಸ್ಥಾನ ಮತ್ತು ಇತರರಿಗೆ ಸ್ಥಾನ ಸಿಗಲ್ಲ ಎನ್ನಲಾಗಿದೆ. ಈ ಮೂಲಕ ಛತ್ತೀಸ್‌ಗಢ ರಾಜ್ಯದಲ್ಲಿ ಗೆಲುವು ಯಾರಿಗೆ ಅನ್ನೋದು ಭಾರಿ ಕುತೂಹಲ ಕೆರಳಿಸಿದೆ. ಎಲ್ಲಾ ಪ್ರಶ್ನೆಗೆ ಉತ್ತರ ಡಿಸೆಂಬರ್ 3 ರಂದು ಪಕ್ಕಾ ಉತ್ತರ ಸಿಗಲಿದೆ, ಯಾಕಂದ್ರೆ ಅಂದೇ ಚುನಾವಣಾ ಫಲಿತಾಂಶ ಅಧಿಕೃತವಾಗಿ ಹೊರಬೀಳಲಿದೆ.












Click it and Unblock the Notifications