Veena George: ವಯನಾಡಿಗೆ ಭೇಟಿ ನೀಡುವಾಗ ಅಪಘಾತಕ್ಕೆ ಒಳಗಾದ ಆರೋಗ್ಯ ಸಚಿವೆ ವೀಣಾ ಜಾರ್ಜ್
ತಿರುವನಂತಪುರಂ, ಜುಲೈ. 31: ಕೇರಳದ ವಯನಾಡಿನಲ್ಲಿ ನಡೆದಿರುವ ಭೂಕುಸಿತಕ್ಕೆ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ. ಈಗಾಗಲೇ ಸಾವಿನ ಸಂಖ್ಯೆ 163 ಕ್ಕೆ ಏರಿಕೆಯಾಗಿದೆ. ಇದೆ ವೇಳೆಯಲ್ಲಿ ಪ್ರವಾಹ ಪೀಡಿತ ಸ್ಥಳಕ್ಕೆ ತೆರಳುತ್ತಿದ್ದ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಅಪಘಾತಕ್ಕೀಡಾಗಿದ್ದಾರೆ.
ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಕಾರು ಜುಲೈ 31 ರಂದು ಬೆಳಗ್ಗೆ ರಸ್ತೆ ಅಪಘಾತಕ್ಕೆ ಒಳಗಾಗಿದೆ. ಅಪಘಾತದಲ್ಲಿ ಸಣ್ಣಪುಟ್ಟ ಗಾಯಗೊಂಡಿರುವ ಆರೋಗ್ಯ ಸಚಿವೆ ಮಲಪ್ಪುರಂನ ಮಂಜೇರಿಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದಾರೆ.

ಭೂಕುಸಿತ ಪೀಡಿತ ವಯನಾಡ್‌ಗೆ ತೆರಳುತ್ತಿದ್ದ ಸಚಿವೆ ವೀಣಾ ಜಾರ್ಜ್ ಮಂಜೇರಿಯ ಚೆಟ್ಟಿಯಂಗಡಿ ಎಂಬಲ್ಲಿ ಬೆಳಗ್ಗೆ 7:30ರ ಸುಮಾರಿಗೆ ಅವರ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಎದುರಿಗೆ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನವನ್ನು ತಿರುಗಿಸಿದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಕೂಟರ್‌ನಲ್ಲಿದ್ದವರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ವಯನಾಡು ಭೂಕುಸಿತ
ಜುಲೈ 30 ರಂದು ವಯನಾಡ್‌ನ ಗುಡ್ಡಗಾಡು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯ ಕಾರಣ ಸರಣಿ ಭೂಕುಸಿತ ಉಂಟಾಗಿದೆ. ರಕ್ಷಣಾ ಕಾರ್ಯಾಚರಣೆಗೆ ವಯನಾಡಿನಲ್ಲಿ ಭಾರತೀಯ ಸೇನೆ, ಎನ್‌ಡಿಆರ್‌ಎಫ್ ಮತ್ತು ಇತರ ತುರ್ತು ಸೇವಾ ಸಿಬ್ಬಂದಿ ಇಳಿದಿದ್ದಾರೆ. ಈವರೆಗೂ 163 ಮಂದಿಯ ಮೃತದೇಹ ಪತ್ತೆಯಾಗಿದೆ. ನೂರಾರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಎರಡು ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದ ಒಂದು ದಿನದ ನಂತರ, ಬುಧವಾರದಂದು ಕೇರಳದ ಪ್ರತ್ಯೇಕ ಸ್ಥಳಗಳಲ್ಲಿ 'ಭಾರೀಯಿಂದ ಅತಿ ಹೆಚ್ಚು ಮಳೆ' ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಸುಮಾರು 163 ಜೀವಗಳನ್ನು ಬಲಿ ತೆಗೆದುಕೊಂಡಿರುವ ಈ ಭೂಕುಸಿತದಲ್ಲಿ 128 ಮಂದಿ ಗಾಯಗೊಂಡಿದ್ದಾರೆ, ನೂರಾರು ಜನರು ಇನ್ನೂ ಕಾಣೆಯಾಗಿದ್ದಾರೆ. ಆಗಸ್ಟ್ 1 ಮತ್ತು 2 ರಂದು ಭಾರಿಯಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. "ಜುಲೈ 31 ರಂದು ಕೇರಳದ ಮೇಲೆ 30-40 ವೇಗದಿಂದ 50 ಕಿಮೀ ವೇಗದಲ್ಲಿ ಪ್ರಬಲವಾದ ಮೇಲ್ಮೈ ಮಾರುತಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ" ಎಂದು ಹವಾಮಾನ ಇಲಾಖೆ ಹೇಳಿದೆ.
ಮಂಗಳವಾರದ ಎರಡು ಭಾರಿ ಭೂಕುಸಿತದಲ್ಲಿ ಮೆಪ್ಪಾಡಿ ಪಂಚಾಯತ್‌ನ ವೆಳ್ಳರಿಮಲ ಗ್ರಾಮದ ಮುಂಡಕ್ಕೈ ಮತ್ತು ಚೂರಮಲ ಪ್ರದೇಶಗಳು ಕೊಚ್ಚಿ ಹೋಗಿವೆ. ದುರಂತದ ಪರಿಣಾಮವಾಗಿ, ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಬುಧವಾರ ರಜೆ ಘೋಷಿಸಲಾಗಿದೆ. ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ವಯನಾಡ್, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಇಡುಕ್ಕಿ, ಎರ್ನಾಕುಲಂ, ಆಲಪ್ಪುಳ ಮತ್ತು ಪತ್ತನಂತಿಟ್ಟ ಎಂಬ 11 ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ.












Click it and Unblock the Notifications