Vinesh Phogat: ಬಿಜೆಪಿ ಸಂಸದ ಬ್ರಿಜ್ ಭೂಷಣ್ ರಕ್ಷಿಸಲು ಸರ್ಕಾರ ಯತ್ನ: ಕುಸ್ತಿಪಟು ವಿನೇಶ್ ಫೋಗಟ್ ಬಿಚ್ಚಿಟ್ಟ ಸ್ಫೋಟಕ ಸತ್ಯ
ನವದೆಹಲಿ, ಜೂನ್ 12: ಉತ್ತರ ಪ್ರದೇಶದ ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಿನೇಶ್ ಫೋಗಟ್ ಭಾನುವಾರ ಆರೋಪಿಸಿದ್ದಾರೆ. ಡಬ್ಲ್ಯುಎಫ್‌ಐ ಮುಖ್ಯಸ್ಥರನ್ನು ಶೀಘ್ರದಲ್ಲೇ ಬಂಧಿಸಲಾಗುವುದಿಲ್ಲ ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ಅಂದಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಜೂನ್ 7 ರಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಜೂನ್ 15 ರೊಳಗೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆ ನಂತರ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.

ಏಪ್ರಿಲ್ 23 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಂಗ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ಆರಂಭಿಸಿರುವ ಕುಸ್ತಿಪಟುಗಳು ಸಿಂಗ್ ಅವರ ಬಂಧನಕ್ಕೆ ಒತ್ತಾಯಿಸುತ್ತಿದ್ದಾರೆ.
ಮುಂಬರುವ ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಸಿಂಗ್ ಅವರ ಕುಟುಂಬದ ಸದಸ್ಯರು ಅಥವಾ ಸಹಚರರು ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂಬುದೂ ಸೇರಿದಂತೆ ಹಲವಾರು ಕುಸ್ತಿಪಟುಗಳ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ.

ಆದಾಗ್ಯೂ, ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಫೋಗಟ್ ನೇತೃತ್ವದ ಕುಸ್ತಿಪಟುಗಳು ಸಿಂಗ್ ಅವರನ್ನು ಕಂಬಿ ಹಿಂದೆ ಹಾಕದ ಹೊರತು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.
ಒಲಂಪಿಕ್ಸ್ ಪದಕ ವಿಜೇತೆ ಫೋಗಟ್ ಭಾನುವಾರ ಪಂಜಾಬ್‌ನಲ್ಲಿ ಪ್ರತಿಭಟನಾ ನಿರತ ರೈತರೊಂದಿಗೆ ಸೇರಿಕೊಂಡು ಹರ್ಯಾಣದ ಖಟ್ಕರ್ ಟೋಲ್ ಪ್ಲಾಜಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕುಸ್ತಿಪಟುಗಳು ನಡೆಸಿದ ಸಭೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, 'ಅವರು ಕೆಲವು ಪ್ರಸ್ತಾಪಗಳನ್ನು ನೀಡಿದ್ದರು. ಆದರೆ ಬ್ರಿಜ್ ಭೂಷಣ್ ಬಂಧನವನ್ನು ಹೊರತುಪಡಿಸಿ ಎಲ್ಲವೂ ನಡೆಯುತ್ತಿದೆ' ಎಂದು ಫೋಗಟ್ ಹೇಳಿದರು.
'ನೀವು ಅಮಿತ್ ಶಾ ಅವರನ್ನು ಕೇಳಬೇಕು. ಅವರನ್ನು (ಡಬ್ಲ್ಯುಎಫ್‌ಐ ಮುಖ್ಯಸ್ಥ) ಏಕೆ ಬಂಧಿಸುತ್ತಿಲ್ಲವೆಂದು. ಅವರು ಅಂತಹ ಶಕ್ತಿಶಾಲಿ ವ್ಯಕ್ತಿಯಾಗಿದ್ದು, ಸರ್ಕಾರವು ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಆದ್ದರಿಂದ ಅವರನ್ನು ಬಂಧಿಸುವುದು ಸುಲಭವಲ್ಲ. ಆದರೆ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ' ಎಂಬುದಾಗಿಯೂ ಪೋಗಾಟ್ ತಿಳಿಸಿದರು.
ಪ್ರತಿಭಟನೆ ಯಾವಾಗ ಕೊನೆಗೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಫೋಗಟ್ ಹೇಳಿದ್ದಾರೆ.
'ನಮ್ಮ ಪ್ರತಿಭಟನೆ ಎಷ್ಟು ದಿನ ಉಳಿಯುತ್ತದೆ ಎಂದು ನಾನು ನಿಮಗೆ ಹೇಳಲಾರೆ. ಅವರನ್ನು ಬಂಧಿಸಿದ ದಿನ ನಾವು ನಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುತ್ತೇವೆ. ಆದರೆ ನ್ಯಾಯವು ತಡವಾಗಿ ಬಂದರೆ, ಏನು ಪ್ರಯೋಜನ' ಎಂದು ಪೋಗಟ್ ಪ್ರಶ್ನಿಸಿದರು.
'ನಮ್ಮ ಹೋರಾಟ ಮುಂದೊಂದು ದಿನ ಕೊನೆಗೊಳ್ಳಬಹುದು. ಆದರೆ ದೇಶದ ಹಿರಿಯ ನಾಗರಿಕರು ಇನ್ನೂ ಹೋರಾಡುತ್ತಿದ್ದಾರೆ. ನಾವು ಅವರೊಂದಿಗೆ ಇದ್ದೇವೆ. ಆದ್ದರಿಂದ ಈ ಭೂಮಿಯಲ್ಲಿ ಕೆಲವು ಹೋರಾಟಗಳು ಕೊನೆಗೊಳ್ಳುವುದಿಲ್ಲ. ಜನರು ಹುತಾತ್ಮರಾಗುತ್ತಿದ್ದಾರೆ, ಜನರು ದುಃಖದಲ್ಲಿದ್ದಾರೆ. ನಿರುದ್ಯೋಗ ಯುವಕರನ್ನು ಭಾದಿಸುತ್ತಿದೆ. ಈ ಎಲ್ಲ ವಿಚಾರಗಳ ಬಗ್ಗೆ ಸರಕಾರ ಯೋಚಿಸಬೇಕು' ಎಂದೂ ಅವರು ಹೇಳಿದರು.
'ಇಷ್ಟು ಜನರು ಧ್ವನಿ ಎತ್ತಲು ಮುಂದೆ ಬಂದರೆ, ಅದನ್ನು ಸರ್ಕಾರ ಕೇಳಬೇಕು. ಸರ್ಕಾರ ಅವರನ್ನು ನಿರ್ಲಕ್ಷಿಸಬಾರದು' ಎಂದೂ ತಿಳಿಸಿದೆ.
ದೇಶದಲ್ಲಿ ಪ್ರಜಾಪ್ರಭುತ್ವದ ಬದಲು ರಾಜಪ್ರಭುತ್ವವನ್ನು ಅನುಸರಿಸಲಾಗುತ್ತಿದೆ ಎಂದು ನೀವು ಭಾವಿಸುತ್ತೀರಾ ಎಂದು ಕೇಳಿದಾಗ, 'ಅದರಲ್ಲಿ ಯಾವುದೇ ಸಂದೇಹವಿಲ್ಲ' ಎಂದು ಅವರು ಉತ್ತರಿಸಿದರು.












Click it and Unblock the Notifications