Maharashtra Election 2024: 3 ಪಕ್ಷ, 6 ಖಾತೆ ದೇವೇಂದ್ರ ಫಡ್ನವೀಸ್‌ಗೆ ಸವಾಲು
ಮುಂಬೈ, ಡಿಸೆಂಬರ್ 07: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ 2024ರ ಬಳಿಕ 'ಮಹಾಯತಿ' ಮೈತ್ರಿಕೂಟದ ಹೊಸ ಸರ್ಕಾರ ರಚನೆಯಾಗಿದೆ. ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಇನ್ನೂ ಸಹ ಸಂಪುಟ ವಿಸ್ತರಣೆಯಾಗಿಲ್ಲ. ಉಪ ಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ, ಅಜಿತ್ ಪವಾರ್‌ಗೆ ಖಾತೆ ಹಂಚಿಕೆಯಾಗಿಲ್ಲ. ಖಾತೆ ಹಂಚಿಕೆಗೆ ದೇವೇಂದ್ರ ಫಡ್ನವೀಸ್ ಮುಂದೆ ಸವಾಲು ಎದುರಾಗಿದೆ. ಮಹಾಯತಿ ಮೈತ್ರಿಕೂಟದ ನಾಯಕರು ಒಟ್ಟಾಗಿ ಕುಳಿತು ಈ ಸಮಸ್ಯೆ ಪರಿಹರಿಸಬೇಕಿದೆ.
ಡಿಸೆಂಬರ್ 5ರ ಗುರುವಾರ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಮಹಾಯತಿ ಮೈತ್ರಿಕೂಟ ಸರ್ಕಾರ ರಚನೆಗೆ ಸಹಕಾರ ನೀಡಿದ ಏಕನಾಥ್ ಶಿಂಧೆ, ಅಜಿತ್ ಪವಾರ್ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ. ಆದರೆ ಇನ್ನೂ ಸಹ ಖಾತೆ ಹಂಚಿಕೆ ಮಾಡಿಲ್ಲ.

'ಮಹಾಯತಿ' ಮೈತ್ರಿಕೂಟದಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ವಿದೆ. ಮೂರು ಪಕ್ಷಗಳು ಖಾತೆಗಳ ಹಂಚಿಕೆ ವಿಚಾರದಲ್ಲಿ ಪಟ್ಟು ಸಡಿಲಿಸುತ್ತಿಲ್ಲ. ಆದ್ದರಿಂದ ಖಾತೆ ಹಂಚಿಕೆ ಕಗ್ಗಂಟಾಗಿದೆ.
3 ಪಕ್ಷ, 6 ಖಾತೆಗಳು: ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂಪುಟದಲ್ಲಿ 6 ಖಾತೆಗಳಿಗೆ ಭಾರೀ ಬೇಡಿಕೆ ಇದೆ. ಇವುಗಳಲ್ಲಿ ಗೃಹ, ಹಣಕಾಸು, ನಗರಾಭಿವೃದ್ಧಿ, ಕಂದಾಯ, ವಸತಿ, ನೀರಾವರಿ ಸೇರಿವೆ. ಇವುಗಳ ಹಂಚಿಕೆಗೆ ಇರುವ ಬೇಡಿಕೆಯಿಂದಾಗಿಯೇ ಖಾತೆ ಹಂಚಿಕೆ ಇನ್ನೂ ಆಗಿಲ್ಲ. ಗೃಹ ಖಾತೆ ಬೇಕು ಎಂದು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬೇಡಿಕೆ ಇಟ್ಟಿದ್ದಾರೆ. ಹಿಂದಿನ ಅವಧಿಯಲ್ಲಿ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ಆದ್ದರಿಂದ ಸಾಮಾನ್ಯ ಖಾತೆಗೆ ಅವರು ಒಪ್ಪಿಗೆ ನೀಡುವುದಿಲ್ಲ.
ನವೆಂಬರ್ 28ರಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದಾಗಲೂ ಅವರು ಗೃಹ ಖಾತೆ ಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಗೃಹ ಖಾತೆ ಬಿಜೆಪಿ ಬಳಿಯೇ ಇರಲಿದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದರು. ಈಗ ಉಪ ಮುಖ್ಯಮಂತ್ರಿಯಾಗಿ ಸಂಪುಟ ಸೇರಿಸುವ ಶಿಂಧೆ ಮತ್ತೊಮ್ಮೆ ಗೃಹ ಖಾತೆಗಾಗಿ ಬೇಡಿಕೆ ಮುಂದಿಟ್ಟಿದ್ದಾರೆ.
ಅಜಿತ್ ಪವಾರ್ ಸಹ ಈ ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದರು. ಈಗ ಮಹಾಯತಿ ಸರ್ಕಾರ ರಚನೆಗೆ ಬೆಂಬಲ ನೀಡಿದ್ದಾರೆ. ಆದ್ದರಿಂದ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ. ಆದರೆ ಈಗ ಅವರಿಗೆ ಸಹ ಪ್ರಮುಖ ಖಾತೆಯನ್ನು ನೀಡಬೇಕಿದೆ. ಮೂರು ಪಕ್ಷಗಳ ಪ್ರಮುಖ ನಾಯಕರು ಚರ್ಚಿಸಿ ಖಾತೆ ಹಂಚಿಕೆ ಅಂತಿಮಗೊಳಿಸಬೇಕಿದೆ. ಚುನಾವಣೆಯಲ್ಲಿ ಬಿಜೆಪಿ 132 ಸೀಟು ಗೆದ್ದಿರುವ ಕಾರಣ ಆ ಪಕ್ಷ ಸಹ ಪ್ರಮುಖ ಖಾತೆ ಬಿಟ್ಟುಕೊಡಲು ಒಪ್ಪುತ್ತಿಲ್ಲ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ 145. ಬಿಜೆಪಿ ಚುನಾವಣೆಯಲ್ಲಿ 132 ಸೀಟು ಗೆದ್ದಿತ್ತು. 'ಮಹಾಯತಿ' ಮೈತ್ರಿಕೂಟದ ಸರ್ಕಾರ ರಚನೆಯಾಗಿದ್ದು, ಮೈತ್ರಿಕೂಟ ಒಟ್ಟು 230 ಶಾಸಕರ ಬಲವನ್ನು ಹೊಂದಿದೆ.
ಮೈತ್ರಿಕೂಟದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟುಗಳನ್ನು ಹೊಂದಿವೆ. ಆದ್ದರಿಂದ ಪ್ರಬಲ ಖಾತೆಗಳು ಯಾರಿಗೆ ಸಿಗಬೇಕು? ಎಂಬ ಚರ್ಚೆ ಇನ್ನೂ ನಡೆಯುತ್ತಿದ್ದು, ಹಂಚಿಕೆ ಅಂತಿಮಗೊಂಡಿಲ್ಲ.
ಏಕನಾಥ್ ಶಿಂಧೆ ದೇವೇಂದ್ರ ಫಡ್ನವೀಸ್ ಸಂಪುಟ ಸೇರುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಬಿಜೆಪಿ ನಾಯಕರ ಸಂಧಾನ ಸಭೆ ಬಳಿಕ ಅವರು ಅಂತಿಮ ಕ್ಷಣದಲ್ಲಿ ಸಂಪುಟ ಸೇರಲು ಒಪ್ಪಿದರು. ಆಗಲೂ ಅವರು ಗೃಹ, ನಗರಾಭಿವೃದ್ಧಿ ಖಾತೆಗೆ ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ಇದೆ.
ಎನ್‌ಸಿಪಿಯ ಅಜಿತ್ ಪವಾರ್ ಹಣಕಾಸು, ವಸತಿ ಖಾತೆಗಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ. ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದಾಗಲೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿದ್ದರು. ಈಗ ಫಡ್ನವೀಸ್ ಸಂಪುಟದಲ್ಲಿಯೂ ಅವರು ಮುಂದುವರೆದಿದ್ದಾರೆ.












Click it and Unblock the Notifications