'ದಿ ಕೇರಳ ಸ್ಟೋರಿ' ತಂಡದ ಸದಸ್ಯರಿಗೆ ಬೆದರಿಕೆ: ಭದ್ರತೆ ಒದಗಿಸಿದ ಮುಂಬೈ ಪೊಲೀಸರು
ಮುಂಬೈ, ಮೇ.09: ವಿವಾದಿತ ಹಿಂದಿ ಸಿನಿಮಾ 'ದಿ ಕೇರಳ ಸ್ಟೋರಿ' ಚಿತ್ರದ ಸಿಬ್ಬಂದಿಯೊಬ್ಬರಿಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಸಂದೇಶ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸಿನಿಮಾಗೆ ಈಗಾಗಲೇ ಹಲವು ಕಡೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಚಿತ್ರಕ್ಕೆ ನಿಷೇದ ವಿಧಿಸಲಾಗಿದೆ. ತಮಿಳುನಾಡಿನಲ್ಲಿ ಅಘೋಷಿತ ಬ್ಯಾನ್ ಮಾಡಲಾಗಿದೆ.
ಪೊಲೀಸರ ಪ್ರಕಾರ, 'ದಿ ಕೇರಳ ಸ್ಟೋರಿ' ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್, ಸಿಬ್ಬಂದಿಯೊಬ್ಬರಿಗೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. "ಚಿತ್ರದಲ್ಲಿ ಒಳ್ಳೆಯ ವಿಷಯವನ್ನು ತೋರಿಸಿಲ್ಲ ಎಂದು ಕಿಡಿಕಾರಿರುವ ವ್ಯಕ್ತಿ, ತಮ್ಮ ತಂಡದ ಸದಸ್ಯರಿಗೆ ಮನೆಯಿಂದ ಒಬ್ಬಂಟಿಯಾಗಿ ಹೊರಬರದಂತೆ ಸಂದೇಶ ನೀಡಿ ಬೆದರಿಕೆ ಹಾಕಿದ್ದಾರೆ" ಎಂದು ಸುದೀಪ್ತೋ ಸೇನ್ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಬ್ಬಂದಿಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಆದರೆ ಲಿಖಿತ ದೂರನ್ನು ಸ್ವೀಕರಿಸದ ಕಾರಣ ಎಫ್‌ಐಆರ್ ದಾಖಲಿಸಿಲ್ಲ.
ಇನ್ನು, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರವು ಮೇ 8 ರಂದು ರಾಜ್ಯದಲ್ಲಿ "ದ್ವೇಷ ಮತ್ತು ಹಿಂಸಾಚಾರ"ದ ಘಟನೆಗಳನ್ನು ತಪ್ಪಿಸಲು ಮತ್ತು ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಬೇಕು ಎಂದು ಹೇಳಿ 'ದಿ ಕೇರಳ ಸ್ಟೋರಿ' ಚಲನಚಿತ್ರವನ್ನು ನಿಷೇಧಿಸಿದೆ. ಕೇರಳ ನಂತರ ಪಶ್ಚಿಮ ಬಂಗಾಳವು ಚಲನಚಿತ್ರವನ್ನು ನಿಷೇಧಿಸಿದ ಇನ್ನೊಂದು ರಾಜ್ಯವಾಗಿದೆ.
ಚಿತ್ರದ ಸುತ್ತ ರಾಜಕೀಯ ವಿವಾದಗಳು ಹೆಚ್ಚಾದ ಬೆನ್ನಲ್ಲೇ, ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ. ಚಿತ್ರವನ್ನು ನಿಷೇಧಿಸುವ ನಿರ್ಧಾರದ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಪಶ್ಚಿಮ ಬಂಗಾಳ ಸರ್ಕಾರವು ಕೇರಳ ಸ್ಟೋರಿ ಚಲನಚಿತ್ರವನ್ನು ನಿಷೇಧಿಸಲು ನಿರ್ಧರಿಸಿದೆ. ದ್ವೇಷದಲ್ಲಿ ದ್ವೇಷ ಮತ್ತು ಹಿಂಸಾಚಾರದ ಯಾವುದೇ ಘಟನೆಯನ್ನು ತಪ್ಪಿಸಲು ಮತ್ತು ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದಿದ್ದಾರೆ.

ಚಿತ್ರ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಥಿಯೇಟರ್‌ಗಳಿಂದ ಚಿತ್ರ ತೆಗೆಯುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೂಚಿಸಿದ್ದಾರೆ. ಚಿತ್ರ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿದ ಚಿತ್ರದ ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ, ನಿರ್ಧಾರದ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಚಿತ್ರ ನಿರ್ಮಾಪಕ ವಿಪುಲ್ ಶಾ, "ಅವರು ಚಿತ್ರವನ್ನು ಬ್ಯಾನ್ ಮಾಡಿದ್ದರೆ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಏನು ಸಾಧ್ಯವೋ ಅದನ್ನು ನಾವು ಮಾಡುತ್ತೇವೆ" ಎಂದಿದ್ದಾರೆ.
ಸುದೀಪ್ತೋ ಸೇನ್ ನಿರ್ದೇಶನದ ಮತ್ತು ವಿಪುಲ್ ಅಮೃತ್‌ಲಾಲ್ ಶಾ ನಿರ್ಮಿಸಿದ ಈ ಚಲನಚಿತ್ರಕ್ಕೆ ಕೇರಳದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಂದ ತೀವ್ರವಾಗ್ದಾಳಿ ನಡೆಸಿದ್ದು, ಚಿತ್ರವು "ಆರ್‌ಎಸ್‌ಎಸ್ ಅಜೆಂಡಾ" ಎಂದು ಕರೆದಿದ್ದಾರೆ. 'ದಿ ಕೇರಳ ಸ್ಟೋರಿ' ಅದಾ ಶರ್ಮಾ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕೇರಳದಿಂದ 32,000 ಮಹಿಳೆಯರು ನಾಪತ್ತೆಯಾಗಿದ್ದಾರೆ ಮತ್ತು ಇವರೆಲ್ಲಾ ಭಯೋತ್ಪಾದಕ ಗುಂಪು ಐಸಿಸ್‌ಗೆ ಸೇರಿದ್ದಾರೆ ಎಂದು ಚಿತ್ರದ ಟ್ರೇಲರ್ ಹೇಳಿಕೊಂಡ ನಂತರ ಚಿತ್ರದ ಸುತ್ತ ಭಾರಿ ವಿವಾದ ಸ್ಫೋಟಗೊಂಡಿದೆ. ಆದರೆ, ಪ್ರತಿಭಟನೆಯ ಹಿನ್ನೆಲೆಯಲ್ಲಿ, ಟ್ರೇಲರ್‌ನಲ್ಲಿನ ವಿವಾದಾತ್ಮಕ ವಿಷಯವನ್ನು ಹಿಂತೆಗೆದುಕೊಳ್ಳಲಾಯಿತು. ಅದರ ಟ್ರೇಲರ್ ವಿವರಣೆಯನ್ನು ಕೇರಳದ 32,000 ಮಹಿಳೆಯರಿಂದ ಕೇರಳದ ಮೂವರು ಮಹಿಳೆಯರ ಕಥೆಯಾಗಿ ಬದಲಾಯಿತು.












Click it and Unblock the Notifications