HD Kumaraswamy: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ತಮ್ಮ ವಿರುದ್ಧದ ಡಿ ನೋಟಿಫಿಕೇಶನ್ ಪ್ರಕರಣದ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಕೋರಿ ಎಚ್.ಡಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆ, 1988 ರ 2018 ರ ತಿದ್ದುಪಡಿಯ ಅಡಿಯಲ್ಲಿ ವಿನಾಯಿತಿ ನೀಡುವಂತೆ ಕೋರಿ ಎಚ್.ಡಿ ಕುಮಾರಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಮೂಲಕ ಅವರ ವಿರುದ್ಧದ ಪ್ರಕರಣಗಳಲ್ಲಿ ವಿಚಾರಣೆ ಮುಂದುವರೆಸುವಂತೆ ಸೂಚನೆ ಕೊಟ್ಟಿದೆ.

ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠವು, ಕಾನೂನು ಜಾರಿಯಾಗುವ ಮೊದಲೇ ನಡೆದಿರುವ ಆಪಾದಿತ ಕೃತ್ಯಕ್ಕೆ ನಂತರ ಮಾಡಿರುವ ತಿದ್ದುಪಡಿಯನ್ನು ಪೂರ್ವಾನ್ವಯವಾಗಿ ಅನ್ವಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ಎಚ್.ಡಿ ಕುಮಾರಸ್ವಾಮಿ ಅವರ ವಾದವನ್ನು ತಿರಸ್ಕರಿಸಿದೆ.
ಏನಿದು ಡಿ ನೋಟಿಫಿಕೇಶನ್ ಪ್ರಕರಣ?
ಬನಶಂಕರಿಯ ಹಲಗಿ ವಡೇರಹಳ್ಳಿ ಗ್ರಾಮದಲ್ಲಿ 1997 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡ 2 ಎಕರೆ 24 ಗುಂಟೆ ಜಮೀನನ್ನು ಡಿ-ನೋಟಿಫಿಕೇಶನ್ ಮಾಡಿರುವ ಆರೋಪದ ಮೇಲೆ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ. 2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಭೂಮಿಯನ್ನು ಡಿ-ನೋಟಿಫಿಕೇಶನ್ ಮಾಡಲು ಆದೇಶಿಸಿದರು. 2010ರಲ್ಲಿ ಇದೇ ಜಾಗವನ್ನು 4.14 ಕೋಟಿ ರೂಪಾಯಿಗೆ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ದಾಖಲೆಗಳ ಸಮೇತ ಮಹದೇವಸ್ವಾಮಿ 2012ರಲ್ಲಿ ನೀಡಿದ್ದ ಖಾಸಗಿ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಭಾರತೀಯ ದಂಡ ಸಂಹಿತೆ, ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಕರ್ನಾಟಕ ಭೂ (ವರ್ಗಾವಣೆ ನಿರ್ಬಂಧ) ಕಾಯ್ದೆಯಡಿ ತನಿಖೆ ನಡೆಸಿದ್ದಾರೆ. ಎಚ್.ಡಿ ಕುಮಾರಸ್ವಾಮಿ ತಮ್ಮ ಮೇಲೆ ಪ್ರಕರಣ ದಾಖಲಿಸಿರುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು, ಆದರೆ 2015ರಲ್ಲಿ ಅವರ ಅರ್ಜಿಯನ್ನು ವಜಾಗೊಳಿಸಲಾಗಿತ್ತು. 2016ರಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿ ತನಿಖೆ ಮುಂದುವರೆಸಲು ಅವಕಾಶ ಮಾಡಿಕೊಟ್ಟಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ನ್ಯಾಯಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿದ್ದ ದೂರುದಾರ ಮಹಾದೇವಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸಚಿವ ಎಚ್‌ಡಿಕೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾ ಮಾಡುವ ಮೂಲಕ ಪ್ರಕರಣದ ತನಿಖೆಯನ್ನು ಮುಂದುವರೆಸಲು ಅವಕಾಶ ಮಾಡಿಕೊಟ್ಟಂತಾಗಿದೆ.












Click it and Unblock the Notifications