ಕೇರಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ
ತಿರುವನಂತಪುರಂ, ಆಗಸ್ಟ್ 17: ಕೇರಳದಲ್ಲಿ ಮತ್ತೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದ್ದು ರೈಲಿನ ಗಾಜುಗಳು ಪುಡಿಪುಡಿಯಾಗಿವೆ.
ಕೇರಳದ ಕೋಝಿಕ್ಕೋಡ್ ಜಿಲ್ಲೆಯ ವಟಕಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ಘಟನೆ ವರದಿಯಾಗಿದೆ. ರೈಲಿನ ಸಿ-8 ಕೋಚ್‌ನ ಗಾಜುಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೂರು ದಿನಗಳ ಹಿಂದೆ ಕಣ್ಣೂರಿನಲ್ಲಿ ಇನ್ನೆರಡು ರೈಲುಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಕಣ್ಣೂರು ಜಿಲ್ಲೆಯಲ್ಲಿ ಭಾನುವಾರ ಮಂಗಳೂರು-ಚೆನ್ನೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ನೇತ್ರಾವತಿ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಆಗ ಕಲ್ಲು ತೂರಾಟದಲ್ಲಿ ಎಸಿ ಬೋಗಿಗಳ ಕಿಟಕಿ ಗಾಜುಗಳು ಜಖಂಗೊಂಡಿದ್ದವು.
ಕೇಂದ್ರ ರೈಲ್ವೇ ಸಚಿವಾಲಯವು ಕೇರಳಕ್ಕೆ ಇನ್ನೂ ಒಂದು ವಂದೇ ಭಾರತವನ್ನು ಮಂಜೂರು ಮಾಡಬೇಕು ಎಂಬ ವರದಿಗಳಿರುವಾಗಲೇ ಈ ಘಟನೆ ನಡೆದಿದೆ. ಕಾಸರಗೋಡು ಮತ್ತು ತಿರುವನಂತಪುರಂ ನಡುವೆ ವಂದೇ ಭಾರತ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 25 ರಂದು ಪ್ರಾರಂಭಿಸಿದರು. ವಂದೇ ಭಾರತ್ ಪ್ರಾರಂಭವಾದ ಕೂಡಲೇ ಅದರ ವಿರುದ್ಧ ಕಲ್ಲು ತೂರಾಟದ ಪ್ರಕರಣ ವರದಿಯಾಗಿದೆ.
ವೇಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ಪ್ರಕರಣಗಳು ಹೆಚ್ಚುತ್ತಿರುವುದು ರೈಲು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿವೆ. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ವ್ಯಕ್ತಿಯೊಬ್ಬ ಕಲ್ಲು ಹೊಡೆದ ಪರಿಣಾಮ ಗಾಜಿನ ಕಿಟಕಿಗೆ ಹಾನಿಯಾಗಿತ್ತು. ಬಾನ್‌ಮೋರ್ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಈ ಸಂಬಂಧ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ಈ ಘಟನೆಗೂ ಮುನ್ನ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆದು ಕೋಚ್‌ನ ಕಿಟಕಿ ಒಡೆದು ಹೋಗಿತ್ತು. ಈ ವೇಳೆ ರೈಲು ಗೋರಖ್‌ಪುರದಿಂದ ಲಖನೌಗೆ ತೆರಳುತ್ತಿತ್ತು. ಬಾರಾಬಂಕಿಯ ಸಫೇದಾಬಾದ್ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ರೈಲು 10:40 ಕ್ಕೆ ಲಕ್ನೋ ತಲುಪಿತು. ಪ್ರಧಾನಿ ನರೇಂದ್ರ ಮೋದಿಯವರು ರೈಲ್ವೇ ನಿಲ್ದಾಣಗಳ ಸೌಂದರ್ಯೀಕರಣದ ವರ್ಚುವಲ್ ಕಾರ್ಯಕ್ರಮ ನಡೆಯುತ್ತಿರುವಾಗ ಈ ಘಟನೆ ನಡೆದಿತ್ತು.












Click it and Unblock the Notifications