ದೆಹಲಿ ರೈಲು ನಿಲ್ದಾಣದಲ್ಲಿ ಭಾರೀ ಜನದಟ್ಟಣೆ: ಕಾಲ್ತುಳಿತ ಭೀತಿ
ನವದೆಹಲಿ, ಮಾರ್ಚ್ 24: ಹಲವು ರೈಲುಗಳ ನಿರ್ಗಮನ ವಿಳಂಬದ ಕಾರಣ ನವದೆಹಲಿ ರೈಲು ನಿಲ್ದಾಣದಲ್ಲಿ ಹೆಚ್ಚು ಸಂಖ್ಯೆಯ ಪ್ರಯಾಣಿಕರ ದಟ್ಟಣೆ ಕಂಡುಬಂದಿತ್ತು. ಭಾನುವಾರದ ಈ ಜನದಟ್ಟಣೆ ಕಾಲ್ತುಳಿತಕ್ಕೆ ಕಾರಣವಾಗಲಿದೆಯೇ? ಎಂಬ ಆತಂಕ ಎದುರಾಗಿತ್ತು. ಫೆಬ್ರವರಿ 15ರಂದು ನವದೆಹಲಿಯ ರೈಲು ನಿಲ್ದಾಣದಲ್ಲಿ ಉತ್ತರ ಪ್ರದೇಶದ ಮಹಾಕುಂಭ ಮೇಳದ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 18 ಪ್ರಯಾಣಿಕರು ಸಾವನ್ನಪ್ಪಿದ್ದರು.
ಭಾನುವಾರ ನವದೆಹಲಿಯ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆಯ ಕಾರಣ ಹಲವು ಕಾಲ ಗೊಂದಲ ಉಂಟಾಯಿತು. ಆದರೆ ಪೊಲೀಸರು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಯಂತ್ರಣ ಮಾಡಿದರು. ಕಾಲ್ತುಳಿತದಂತಹ ಯಾವುದೇ ಘಟನೆಗಳು ನಡೆದಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ತೆರಳಿದರು.

ಪೊಲೀಸರ ಮಾಹಿತಿ ಪ್ರಕಾರ ನವದೆಹಲಿಯ ರೈಲು ನಿಲ್ದಾಣದ 12 ಮತ್ತು 13ನೇ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಸೇರಿದ್ದರು. ಇದನ್ನು ಗಮನಿಸಿದ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾದರು. ಕಾಲ್ತುಳಿತದಂತಹ ಘಟನೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸಿದರು.
ಏಕೆ ಇಷ್ಟೊಂದು ಜನದಟ್ಟಣೆ?: ಮೂಲಗಳ ಮಾಹಿತಿ ಪ್ರಕಾರ ಶಿವಗಂಗಾ ಎಕ್ಸ್‌ಪ್ರೆಸ್, ಸ್ವಾತಂತ್ರ್ಯ ಸೇನಾನಿ ಎಕ್ಸ್‌ಪ್ರೆಸ್, ಜಮ್ಮು ರಾಜಧಾನಿ ಎಕ್ಸ್‌ಪ್ರೆಸ್, ಲಖನೌ ಮೇಲ್ ಮತ್ತು ಮಗಧ್ ಎಕ್ಸ್‌ಪ್ರೆಸ್ ರೈಲುಗಳ ನಿರ್ಗಮನ ವಿಳಂಬಗೊಂಡಿತು.
ಇದರಿಂದಾಗಿ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಆದ್ದರಿಂದ ನಿಲ್ದಾಣದ 12 ಮತ್ತು 13ನೇ ಪ್ಲಾಟ್‌ಫಾರ್ಮ್‌ಗಳಲ್ಲಿ ಜನಸಂದಣಿ ಅಧಿಕವಾಯಿತು. ಪ್ಲಾಟ್‌ಫಾರ್ಮ್ ಪರಿಸ್ಥಿತಿ ಕುರಿತು ಪೊಲೀಸರು ಸಿಸಿಟಿವಿ ಮೂಲಕ ನಿಗಾವಹಿಸಿದ್ದರು. ಜನದಟ್ಟಣೆ ಅಧಿಕವಾಗುತ್ತಿದ್ದಂತೆಯೇ ಕಾರ್ಯಾಚರಣೆಯನ್ನು ಆರಂಭಿಸಿದರು.
ಎರಡು ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯವಾದ ರಕ್ಷಣಾ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ನವದೆಹಲಿಯ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಬಳಿಕ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆಯನ್ನು ನಡೆಸಿದ್ದರು. ದೇಶದ ಅತಿ ಹೆಚ್ಚು ಜನದಟ್ಟಣೆಯ 60 ನಿಲ್ದಾಣಗಳನ್ನು ಗುರುತಿಸಲಾಗಿತ್ತು. ನಿಲ್ದಾಣದಲ್ಲಿ ಜನಸಂದಣಿ ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆಯನ್ನು ಸಚಿವರು ನೀಡಿದ್ದರು.
ಇದರ ಭಾಗವಾಗಿ ಜನದಟ್ಟಣೆ ಅಧಿಕವಾಗಿರುವ ರೈಲು ನಿಲ್ದಾಣದಲ್ಲಿ ಯಾವ ಪ್ರಯಾಣಿಕರ ಬಳಿ ಕನ್ಫರ್ಮ್ ಟಿಕೆಟ್ ಇದೆಯೋ ಅವರು ಮಾತ್ರ ಫ್ಲಾಟ್ ಫಾರ್ಮ್ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ನಿಲ್ದಾಣದ ಹೊರಗೆ ವೈಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗಾಗಿ ಕಾಯುವ ಸ್ಥಳವನ್ನು ನಿರ್ಮಾಣ ಮಾಡಲಿದೆ.
ಖಚಿತ ಟಿಕೆಟ್ ಹೊಂದಿರುವವರು ಪ್ಲಾಟ್‌ಫಾರ್ಮ್ ಪ್ರವೇಶ ಮಾಡುವ ಕುರಿತು ನಿಯಂತ್ರಣ ಮಾಡಲು ಅಧಿಕಾರಿಗಳು ಸಂಪೂರ್ಣ ಹಿಡಿತವನ್ನು ಹೊಂದಿರುತ್ತಾರೆ. ಅಲ್ಲದೇ ಅವರ ರೈಲು ಫ್ಲಾಟ್ ಫಾರ್ಮ್‌ಗೆ ಬಂದ ಬಳಿಕ ಪ್ರಯಾಣಿಕರನ್ನು ಅಲ್ಲಿಗೆ ತೆರಳಲು ಅನುಕೂಲ ಮಾಡಿಕೊಡಲಾಗುತ್ತಿದೆ. ಪ್ರಾಯೋಗಿಕವಾಗಿ ಈ ಯೋಜನೆಯನ್ನು ಇಲಾಖೆ ಜಾರಿಗೊಳಿಸಿದೆ.
ಸಿಟಿಟಿವಿಗಳ ಮೂಲಕ ಪ್ಲಾಟ್‌ಫಾರ್ಮ್ ಜನಸಂದಣಿ ಕುರಿತು ಕಣ್ಗಾವಲು ವಹಿಸಲಾಗುತ್ತಿದೆ. ಪ್ರಯಾಣಕರ ಸಂಖ್ಯೆ ಹೆಚ್ಚಾದಾಗ ಅದನ್ನು ಕಡಿಮೆ ಮಾಡಲು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ, ಅವರಿಗೆ ವಿಶೇಷ ಗುರುತಿನ ಚೀಟಿಯನ್ನು ನೀಡಲಾಗಿದೆ.
ರೈಲು ನಿಲ್ದಾಣದ ನಿರ್ದೇಶಕರಾಗಿ ಹಿರಿಯ ಅಧಿಕಾರಿಯನ್ನು ನೇಮಿಸಲಾಗಿದೆ. ಅವರು ನಿಲ್ದಾಣದ ಪ್ರಯಾಣಿಕರ ಸಂಖ್ಯೆ ಕುರಿತು ನಿರಂತರ ನಿಗಾವಹಿಸಿ, ನಿಯೋಜನೆಗೊಂಡ ಸಿಬ್ಬಂದಿಗೆ ಸೂಕ್ತ ಸೂಚನೆ ನೀಡುತ್ತಾರೆ. ಟಿಕೆಟ್ ಹಂಚಿಕೆಯ ಮೇಲೆ ಸಹ ಅಧಿಕಾರಿ ಹಿಡಿತವನ್ನು ಹೊಂದಿದ್ದು, ಜನಸಂದಣಿ ಕಡಿಮೆ ಮಾಡಲು ಅವರು ತುರ್ತು ಕ್ರಮವನ್ನು ಕೈಗೊಳ್ಳುತ್ತಾರೆ.
ಫೆಬ್ರವರಿ 15ರಂದು ನವದೆಹಲಿಯ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 18 ಪ್ರಯಾಣಿಕರು ಸಾವನ್ನಪ್ಪಿದ್ದರು. ಮರಣ ಹೊಂದಿದವರು, ಗಾಯಗೊಂಡ ಪ್ರಕರಣದ 33 ಸಂತ್ರಸ್ತ ಕುಟುಂಬಗಳಿಗೆ ಒಟ್ಟು 2.01 ಕೋಟಿ ಪರಿಹಾರವನ್ನು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.












Click it and Unblock the Notifications