Ram Mandir Firing: ಅಯೋಧ್ಯೆ ರಾಮ ಮಂದಿರದಲ್ಲಿ ಗುಂಡಿನ ಸದ್ದು, ಯೋಧ ಸಾವು
ಲಕ್ನೋ, ಜೂನ್. 19: ವೈಭವಯುತವಾಗಿ ಆರಂಭಗೊಂಡಿರುವ ರಾಮ ಮಂದಿರದಲ್ಲಿ ಗುಂಡಿನ ಸದ್ದು ಮೊಳಗಿದೆ. ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಎಸ್‌ಎಫ್ ಯೋಧ ಗುಂಡಿಗೆ ಬಲಿಯಾಗಿದ್ದಾರೆ. ಬುಧವಾರ ಬೆಳಗ್ಗೆ 5.25ಕ್ಕೆ ಈ ಘಟನೆ ನಡೆದಿದೆ.
ಈ ವರ್ಷದ ಆರಂಭದಲ್ಲಿ ರಾಮ ಲಲ್ಲನ ಪ್ರಾಣಪ್ರತಿಷ್ಠಾಪನೆ ನಡೆದಿದ್ದು, ರಾಮ ಮಂದಿರಕ್ಕೆ ನೂರಾರು ಜನ ಭೇಟಿ ನೀಡುತ್ತಿದ್ದಾರೆ. ಇಂತಹ ಸಮಯದಲ್ಲಿ ಗುಂಡಿನ ಸದ್ದು, ಯೋಧನ ಸಾವು ನಡೆದಿದ್ದು, ಭಕ್ತರಲ್ಲಿ ಆತಂಕ ಮೂಡಿದೆ. ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಸೈನಿಕನ ಹೆಸರು ಶತ್ರುಘ್ನ ವಿಶ್ವಕರ್ಮ. 25 ವರ್ಷದ ಶತ್ರುಘ್ನ ಅಂಬೇಡ್ಕರ್ ನಗರದ ನಿವಾಸಿ ಎಂದು ವರದಿಯಾಗಿದೆ.

ಬುಧವಾರ ಬೆಳಗ್ಗೆ ರಾಮಮಂದಿರದಲ್ಲಿ ಏಕಾಏಕಿ ಗುಂಡಿನ ಸದ್ದು ಕೇಳಿಬಂದಿದ್ದು, ಸಹ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಘಟನಾ ಸ್ಥಳದಲ್ಲಿ ಯೋಧ ಶತ್ರುಘ್ನ ವಿಶ್ವಕರ್ಮ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಗಾಯಗೊಂಡ ಯೋಧನನ್ನು ಟ್ರಾಮಾ ಸೆಂಟರ್ ಗೆ ರವಾನಿಸಲಾಗಿದೆ. ಆದರೆ ಅಲ್ಲಿನ ವೈದ್ಯರು ಯೋಧ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಇತ್ತೀಚೆಗಷ್ಟೇ ಉದ್ಘಾಟನೆಯಾಗಿರುವ ರಾಮ ಮಂದಿರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಎಸ್‌ಎಫ್ ಯೋಧನ ಸಾವು ಅಯೋಧ್ಯೆ ದೇಗುಲ ಸಂಕೀರ್ಣದಲ್ಲಿ ಸಂಚಲನ ಮೂಡಿಸಿದೆ. ಘಟನಾ ಸ್ಥಳಕ್ಕೆ ಐಜಿ ಮತ್ತು ಎಸ್‌ಪಿ ಆಗಮಿಸಿ, ಘಟನಾ ಸ್ಥಳದಲ್ಲಿ ಸೂಕ್ಷ್ಮ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳವನ್ನು ಫೋರೆನ್ಸಿಕ್ ತಂಡ ಕೂಡ ಪರಿಶೀಲನೆ ನಡೆಸಿತು. ಪ್ರಾಥಮಿಕ ತನಿಖೆಯಲ್ಲಿ ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಯೋಧ ಶತ್ರುಘ್ನ ವಿಶ್ವಕರ್ಮ ಅವರ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ.
ಶತ್ರುಘ್ನ ವಿಶ್ವಕರ್ಮ ಕುಟುಂಬ ಸ್ಥಿತಿ
ಯೋಧ ಶತ್ರುಘ್ನ ವಿಶ್ವಕರ್ಮ 2019 ರ ಬ್ಯಾಚ್‌ನವರು. ಅಂಬೇಡ್ಕರ್ ನಗರದ ಸಮ್ಮನಪುರ ಪೊಲೀಸ್ ಠಾಣೆಯ ಕಾಜಪುರ ಗ್ರಾಮದ ನಿವಾಸಿಯಾಗಿದ್ದ ಅವರನ್ನು ಎಸ್‌ಎಸ್‌ಎಫ್‌ನಲ್ಲಿ ಕೆಲಸಕ್ಕೆ ನಿಯೋಜಿಸಲಾಗಿದೆ. ರಾಮ ಮಂದಿರ ದೇಗುಲದ ಹೆಚ್ಚಿನ ಭದ್ರತೆಗಾಗಿ ಅವರನ್ನು ನಿಯೋಜಿಸಲಾಗಿದೆ. ದೇವಸ್ಥಾನದ ಭದ್ರತೆಗಾಗಿ ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಎಸ್‌ಎಸ್‌ಎಫ್ ಪಡೆಯನ್ನು ರಚಿಸಿತ್ತು.

ದುರಂತ ಘಟನೆ ನಡೆಯುವ ಮುನ್ನ ಮೃತ ಶತ್ರುಘ್ನ ವಿಶ್ವಕರ್ಮ ಮೊಬೈಲ್ ನೋಡುತ್ತಿದ್ದ ಎಂದು ಮೃತ ಯೋಧನ ಸಹೋದ್ಯೋಗಿಗಳು ತಿಳಿಸಿದ್ದಾರೆ. ಕೆಲವು ದಿನಗಳಿಂದ ಯಾವುದೋ ಚಿಂತೆಯಲ್ಲಿದ್ದರು ಎಂದು ವರದಿಯಾಗಿದ್ದು, ಪೊಲೀಸರು ಮೃತರ ಮೊಬೈಲ್ ಅನ್ನು ಕೂಡ ವಶಕ್ಕೆ ತೆಗೆದುಕೊಂಡು ಪರಿಶೀಲನೆಗೆ ಕಳುಹಿಸಿದ್ದಾರೆ.
ಮೃತ ಯೋಧನ ಸಾವಿನ ಬಗ್ಗೆ ಕುಟುಂಬಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತನ ಕುಟುಂಬಸ್ಥರು ಸ್ಥಳಕ್ಕೆ ತಲುಪಿದ್ದಾರೆ. ಕುಟುಂಬದ ಸ್ಥಿತಿ ಹದಗೆಟ್ಟಿದ್ದು, ಯೋಧ ಶತ್ರುಘ್ನ ವಿಶ್ವಕರ್ಮರನ್ನು ಕಳೆದುಕೊಂಡು ತೀವ್ರ ನೋವಿನಲ್ಲಿದೆ. ಜೊತೆಗೆ ಪೊಲೀಸ್ ವಿಚಾರಣೆಗೆ ಸಹಕಾರ ನೀಡುತ್ತಿದ್ದಾರೆ.
ಮೂರು ತಿಂಗಳ ಹಿಂದೆಯೂ ಯೋಧನ ಮೇಲೆ ಗುಂಡಿನ ದಾಳಿ
ಇನ್ನು, ಮೂರು ತಿಂಗಳ ಹಿಂದೆಯೂ ರಾಮಮಂದಿರದ ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧ ಮೃತಪಟ್ಟಿದ್ದರು. ಅವರು ಕೂಡ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದರು. ಮೃತ ಯೋಧನೇ ತನ್ನ ರೈಫಲ್‌ನಿಂದ ತಪ್ಪಾಗಿ ಗುಂಡು ಹಾರಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಬಂದೂಕನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರಿಗರ್ ಪ್ರೆಸ್ ಆಗಿ ಸೈನಿಕನಿಗೆ ಗುಂಡು ತಗುಲಿ ಮೃತಪಟ್ಟಿದ್ದರು.












Click it and Unblock the Notifications