Gautam Adani: ಸರಳವಾಗಿ ಮದುವೆಯಾಗಲಿರುವ ಗೌತಮ್ ಅದಾನಿ ಪುತ್ರ ಜೀತ್ ಅದಾನಿ; ಹುಡುಗಿ ಯಾರು?
ದೇಶದ ಶ್ರೀಮಂತ ಕೈಗಾರಿಕೋದ್ಯಮಿ ಗೌತಮ್ ಅದಾನಿ ತಮ್ಮ ಮಗನ ಮದುವೆ ಬಗ್ಗೆ ಹರಡುತ್ತಿರುವ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅದಾನಿ ಪುತ್ರ ಜೀತ್ ಅದಾನಿ ಅದ್ದೂರಿಯಾಗಿ ಮದುವೆಯಾಗುತ್ತಾರೆ ಎನ್ನುವ ವದಂತಿಗಳು ಹರಡಿದ್ದವು, ಇದಕ್ಕೆ ಸ್ಪಷ್ಟನೆ ನೀಡಿರುವ ಅದಾನಿ, ಮಗನ ಮದುವೆ ಸರಳ ಮತ್ತು ಸಾಂಪ್ರದಾಯಿಕ ಸಮಾರಂಭವಾಗಿರಲಿದೆ ಎಂದು ಹೇಳಿದ್ದಾರೆ.
ಮಂಗಳವಾರ ಮಹಾ ಕುಂಭ ಮೇಳದಲ್ಲಿ ಭಾಗವಹಿಸಲು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದ ಗೌತಮ್ ಅದಾನಿ ಮಾಧ್ಯಮಗಳ ಜೊತೆ ಮಾತನಾಡಿದರು. ಮಗನ ವಿವಾಹ ಸೆಲೆಬ್ರಿಟಗಳಿಂದ ತುಂಬಿದ ಮಹಾ ಕುಂಭದಂತೆ ನಡೆಯುತ್ತದೆಯೇ ಎಂದು ಪ್ರಶ್ನೆ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಖಂಡಿತವಾಗಿಯೂ ಆ ರೀತಿ ನಡೆಯುವುದಿಲ್ಲ ಎಂದರು.

ಫೆಬ್ರವರಿ 7ರಂದು ಮದುವೆ
ಗೌತಮ್ ಅದಾನಿ ಮಗ ಜೀತ್ ಅದಾನಿ ಸೂರತ್ ಮೂಲದ ವಜ್ರ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ ದಿವಾ ಶಾ ಅವರನ್ನು ವರಿಸಲಿದ್ದಾರೆ. ಫೆಬ್ರವರಿ 7 ರಂದು ಅಹಮಾದಾಬಾದ್‌ನಲ್ಲಿ ಮದುವೆ ನಡೆಯಲಿದೆ. ಅದಾನಿ ಮಗನ ವಿವಾಹಕ್ಕೆ ಜಗತ್ತಿನ ಪ್ರಮುಖ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆ ಎನ್ನುವ ವದಂತಿಗಳಿಗೆ ಅವರು ತೆರೆ ಎಳೆದಿದ್ದಾರೆ.
ಅದ್ದೂರಿ ವಿವಾಹ ಎನ್ನುವ ವದಂತಿ
ಜೀತ್ ಅದಾನಿ ಮದುವೆಗೆ ಜಗತ್ತಿನ ಪ್ರಮುಖ ತಾರೆಯರು, ಸೆಲೆಬ್ರಿಟಿಗಳು ಬರುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಅಂದಾಜಿಸಿದ್ದರು. ಎಲಾನ್ ಮಸ್ಕ್, ಮಾರ್ಕ್ ಜುಕರ್ ಬರ್ಗ್, ಡೇನಿಯಲ್ ಕ್ರೇಗ್, ಟೇಲರ್ ಸ್ವಿಫ್ಟ್, ರಾಫೆಲ್ ನಡಾಲ್, ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಸೇರಿದಂತೆ ಹಲವರ ಹೆಸರುಗಳು ಹರಿದಾಡಿದ್ದವು.
ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಜೀತ್ ಅದಾನಿ ಅವರ ಮದುವೆ ನಡೆಯಲಿದ್ದು, ಇಲ್ಲಿ ನಡೆಯಬೇಕಿದ್ದ ಭಾರತ- ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವರದಿಗಳು ಹರಿದಾಡಿವೆ. ಅದಾನಿ ತಮ್ಮ ಮಗನ ಮದುವೆಗಾಗಿ 10 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. ಆದರೆ ಇವೆಲ್ಲಾ ಸತ್ಯಕ್ಕೆ ದೂರವಾದ ವರದಿಗಳಾಗಿವೆ ಎಂದು ಅದಾನಿ ಅವರೇ ಸ್ಪಷ್ಟನೆ ನೀಡಿದ್ದಾರೆ.
ಸರಳವಾಗಿ ಮದುವೆ
ಪ್ರಯಾಗ್ ರಾಜ್‌ನ ತ್ರಿವೇಣಿ ಸಂಗಮದಲ್ಲಿ ತಮ್ಮ ಕುಟುಂಬದ ಸದಸ್ಯರ ಜೊತೆ ಗಂಗಾ ಆರತಿ ಬಳಿಕ ಮಾತನಾಡಿದ ಗೌತಮ್ ಅದಾನಿ, ನಾನು ಯಾವಾಗಲು ಸರಳವಾಗಿರಲು ಇಷ್ಟಪಡುತ್ತೇನೆ, ಗಂಗಾ ಮಾತೆಯ ಆಶೀರ್ವಾದ ಪಡೆಯಲು ಜೀತ್ ಕೂಡ ಇಲ್ಲಿದ್ದಾರೆ. ಮಗನ ಮದುವೆ ಸರಳವಾಗಿ ನಡೆಯಲಿದ್ದು ಕುಟುಂಬದ ಕಾರ್ಯಕ್ರಮವಾಗಿರಲಿದೆ ಎಂದು ಹೇಳಿದ್ದಾರೆ.
ಮಹಾಪ್ರಸಾದ ವಿತರಣೆ
ಮಹಾ ಕುಂಭ ಮೇಳದಲ್ಲಿ ಅದಾನಿ ಸಮೂಹವು ಪ್ರತಿದಿನ ಒಂದು ಲಕ್ಷ ಭಕ್ತರಿಗೆ ಮಹಾ ಪ್ರಸಾದ ವಿತರಿಸುವ ಇಸ್ಕಾನ್ ಕಾರ್ಯಕ್ರಮಕ್ಕೆ ಕೈಜೋಡಿಸಿದೆ. ಇಸ್ಕಾಮ್ - ಅದಾನಿ ಫೌಂಡೇಶನ್ ಜಂಟಿಯಾಗಿ ಮಹಾ ಪ್ರಸಾದ ವಿತರಣೆ ಕಾರ್ಯ ಮಾಡುತ್ತಿದ್ದು, ಮಂಗಳವಾರ ಅದಾನಿ ಅಡುಗೆ ಮಾಡುವ ಸ್ಥಳಕ್ಕೆ ತೆರಳಿದ್ದರು. ತಾವೂ ಕೂಡ ಪ್ರಸಾದ ವಿತರಣೆ ಮಾಡಿದರು.
ಗೋರಖ್‌ಪುರದ ಪ್ರಸಿದ್ಧ ಗೀತಾ ಪ್ರೆಸ್ ಮುದ್ರಿಸಿದ ಒಂದು ಕೋಟಿ ಪ್ರಾರ್ಥನಾ ಪುಸ್ತಕಗಳನ್ನು ಅದಾನಿ ಉಚಿತವಾಗಿ ಹಂಚಿದರು. ಧರ್ಮದ ಸೇವೆ ದೇಶದ ಸೇವೆ ಎಂದು ಅವರು ತಾವು ಮಾಡುತ್ತಿರುವ ಕೆಲಸ ತೃಪ್ತಿ ತಂದಿದೆ ಎಂದು ಹೇಳಿದ್ದಾರೆ.












Click it and Unblock the Notifications