Jharkhand Election: ಡಾನಾ ಚಂಡಮಾರುತಕ್ಕಿಂತ ಹೇಮಂತ್ ಸೊರೇನ್ ಸರ್ಕಾರ ಅಪಾಯಕಾರಿ; ಶಿವರಾಜ್ ಸಿಂಗ್ ಚೌಹಾಣ್
ಜಾರ್ಖಂಡ್ ವಿಧಾನಸಭಾ ಚುನಾವಣೆ ಅಖಾಡ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಶುರುವಾಗಿದೆ. ಆಡಳಿತಾರೂಢ ಜೆಎಂಎಂ ಪಕ್ಷದ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದು ಹಲವು ಆರೋಪಗಳನ್ನು ಮಾಡುತ್ತಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಈ ಸರ್ಕಾರ 'ಡಾನಾ ಚಂಡಮಾರುತಕ್ಕಿಂತ ಮಾರಕ' ಎಂದು ಹೇಳಿದ್ದು, ಇವರು ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅನಾಹುತ ಸಂಭವಿಸಲಿದೆ ಎಂದು ಹೇಳಿದ್ದಾರೆ.
ರಾಂಚಿಯ ಹರ್ಮು ಮೈದಾನದಲ್ಲಿ ಹತಿಯಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನವೀನ್ ಜೈಸ್ವಾಲ್ ಪರ ಪ್ರಚಾರ ಮಾಡಲು ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಐದು ವರ್ಷಗಳಲ್ಲಿ ಹೇಮಂತ್ ಸೊರೇನ್ ಸರ್ಕಾರವು, ಭ್ರಷ್ಟಾಚಾರ, ಲೂಟಿಯಲ್ಲಿ ತೊಡಗಿದ್ದು, ಈಗಾಗಲೇ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಹಾನಿ ಮಾಡಿದೆ ಎಂದು ಆರೋಪಿಸಿದರು.

ಡಾನಾ ಚಂಡಮಾರುತಕ್ಕಿಂತ ಮಾರಕ
ಹೇಮಂತ್ ಸೊರೇನ್ ಅವರ ನೇತೃತ್ವದ ರಾಜ್ಯ ಸರ್ಕಾರ ಡಾನಾ ಚಂಡಮಾರುತಕ್ಕಿಂತ ಮಾರಕವಾಗಿದೆ. ಎರಡು ದಿನಗಳ ಬಳಿಕ ಚಂಡಮಾರುತ ಕಣ್ಮರೆಯಾಗುತ್ತದೆ. ಆದರೆ ಹೇಮಂತ್ ಸೊರೇನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ವಿನಾಶವನ್ನು ಉಂಟು ಮಾಡಲಿದೆ ಎಂದು ಹೇಳಿದರು.
ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು ನವೆಂಬರ್ 20 ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಭ್ರಷ್ಟ ಸರ್ಕಾರವನ್ನು ಬೇರು ಸಹಿತ ಕಿತ್ತೊಗೆಯುವ ಸಮಯ ಬಂದಿದೆ ಎಂದು ಹೇಳಿದರು.
ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟವನ್ನು ಸೋಲಿಸಿ ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಮತ್ತೊಂದು ಕಡೆ ಇಂಡಿಯಾ ಒಕ್ಕೂಟದ ಜೊತೆ ಕೈ ಜೋಡಿಸಿರುವ ಜೆಎಂಎಂ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ.
2.60 ಕೋಟಿ ಮತದಾರರು
ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ 81 ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ. ಈ ಬಾರಿ 2.60 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. 11.84 ಲಕ್ಷ ಮತದಾರರು ಮೊದಲ ಬಾರಿಗೆ ಮತ ಹಾಕಲು ಸಜ್ಜಾಗಿದ್ದಾರೆ. 1.13 ಲಕ್ಷ ವಿಕಲಚೇತನರು, ತೃತೀಯ ಲಿಂಗ ವ್ಯಕ್ತಿಗಳು ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮತ ಚಲಾಯಿಸಲಿದ್ದಾರೆ. 2019ರಲ್ಲಿ ರಾಜ್ಯದಲ್ಲಿ 2.23 ಕೋಟಿ ಮತದಾರರು ಇದ್ದರೆ, ಈ ಬಾರಿ ಮತದಾರರ ಸಂಖ್ಯೆ 37 ಲಕ್ಷ ಹೆಚ್ಚಾಗಿದೆ.
2019ರ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ 47 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬಂದಿದೆ. ಜೆಎಂಎಮ 30 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 16 ಮತ್ತು ಆರ್ ಜೆಡಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 25, ಜೆವಿಎಂ-ಪಿ ಮೂರು, ಎಜೆಎಸ್‌ಯು ಪಕ್ಷ 2 ಮತ್ತು ಸಿಪಿಐ-ಎಂಎಲ್ ಮತ್ತು ಎನ್‌ಸಿಪಿ ತಲಾ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು.












Click it and Unblock the Notifications