Sheikh Hasina: ಶೇಖ್ ಹಸೀನಾರನ್ನು ಢಾಕಾಗೆ ಕಳಿಸಿ; ಭಾರತಕ್ಕೆ ಬಾಂಗ್ಲಾದೇಶ ಒತ್ತಾಯ
ಬಾಂಗ್ಲಾದೇಶದಲ್ಲಿ ದಂಗೆ ನಡೆದ ಸಂದರ್ಭದಲ್ಲಿ ದೇಶ ಬಿಟ್ಟು ಪಲಾಯನ ಮಾಡಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಸದ್ಯ ಭಾರತದಲ್ಲಿ ವಾಸಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಮಧ್ಯಂತರ ಸರ್ಕಾರ ಭಾರತಕ್ಕೆ ರಾಜತಾಂತ್ರಿಕ ಸಂದೇಶ ಕಳಿಸಿದ್ದು, ಶೇಖ್ ಹಸೀನಾರನ್ನು ಢಾಕಾಗೆ ವಾಪಸ್ ಕಳಿಸುವಂತೆ ಒತ್ತಾಯಿಸಿದೆ.
2024ರ ಆಗಸ್ಟ್ 5ರಂದು ಬಾಂಗ್ಲಾದೇಶದಲ್ಲಿ ಜನಾಕ್ರೋಶ ತೀವ್ರವಾಗುತ್ತಿದ್ದಂತೆ 77 ವರ್ಷದ ಶೇಖ್ ಹಸೀನಾ ಅಲ್ಲಿಂದ ಪಲಾಯನ ಮಾಡಿದ್ದರು. 16 ವರ್ಷ ಪ್ರಧಾನಿಯಾಗಿದ್ದ ಅವರ ಆಡಳಿತ ಅಲ್ಲಿಗೆ ಅಂತ್ಯವಾಗಿತ್ತು. ಭಾರತಕ್ಕೆ ಆಗಮಿಸಿದ ಶೇಖ್ ಹಸೀನಾಗೆ ಕೇಂದ್ರ ಸರ್ಕಾರ ಆತಿಥ್ಯ ನೀಡಿದೆ. ಭಾರತದಿಂದ ಇಂಗ್ಲೆಂಡ್‌ಗೆ ತೆರಳಲು ಉದ್ದೇಶಿಸಿದ್ದ ಶೇಖ್ ಹಸೀನಾಗೆ ರಾಜತಾಂತ್ರಿಕ ಸಮಸ್ಯೆಗಳು ಅಡ್ಡಿಪಡಿಸಿದ್ದು, ಸದ್ಯ ದೆಹಲಿಯಲ್ಲೇ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ಶೇಖ್ ಹಸೀನಾ ಸರ್ಕಾರ ಬಾಂಗ್ಲಾದೇಶದಲ್ಲಿ ನರಮೇಧ ನಡೆಸಿದೆ ಎಂದು ಆರೋಪಿಸಲಾಗಿದ್ದು, ಢಾಕಾದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT) ಶೇಖ್ ಹಸೀನಾ ಸೇರಿದಂತೆ ಅವರ ಸರ್ಕಾರದಲ್ಲಿದ್ದ ಮಂತ್ರಿಗಳು, ಸಲಹೆಗಾರರು ಸೇರಿದಂತೆ ಹಲವರ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದೆ.
ಬಾಂಗ್ಲಾದ ವಿದೇಶಾಂತ ವ್ಯವಹಾರಗಳ ಸಲಹೆಗಾರ ತೌಹಿದ್ ಹೊಸೈನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಶೇಖ್ ಹಸೀನಾರನ್ನು ತನಿಖೆ ಮಾಡಬೇಕಿರುವ ಕಾರಣ ಅವರನ್ನು ಢಾಕಾಗೆ ವಾಪಸ್ ಕಳಿಸಬೇಕು ಎಂದು ನಾವು ಭಾರತ ಸರ್ಕಾರಕ್ಕೆ ರಾಜತಾಂತ್ರಿಕ ಸಂದೇಶ ಕಳಿಸಿದ್ದೇವೆ" ಎಂದು ಹೇಳಿದ್ದಾರೆ.
ಶೇಖ್ ಹಸೀನಾರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಲು ಅನುಕೂಲವಾಗುವಂತೆ ವಿದೇಶಾಂಗ ಸಚಿವಾಲಯಕ್ಕೆ ಪತ್ರವನ್ನು ಕಳಿಸಿದೆ. ಸದ್ಯ ಇದೇ ಪ್ರಕ್ರಿಯೆ ನಡೆಯುತ್ತಿದೆ ಎಂದು ಬಾಂಗ್ಲಾದೇಶ ಗೃಹ ಇಲಾಖೆ ಸಲಹೆಗಾರ ಜಹಾಂಗೀರ್ ಆಲಂ ಮಾಹಿತಿ ನೀಡಿದ್ದಾರೆ.
ಮೂರು ವಾರಗಳ ಹಿಂದೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಬಾಂಗ್ಲಾದೇಶಕ್ಕೆ ಭೇಟಿ ಸರ್ಕಾರದ ಮುಖ್ಯ ಸಲಹೆಗಾರ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರ ಜೊತೆ ಮಾತುಕತೆ ನಡೆಸಿದ್ದರು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದಾಳಿಯ ವಿಚಾರವನ್ನು ಭಾರತ ಬಾಂಗ್ಲಾದೇಶ ನಾಯಕರ ಜೊತೆ ಪ್ರಸ್ತಾಪಿಸಿತ್ತು.
ಶೇಕ್ ಹಸೀನಾ ಭಾರತದಲ್ಲಿ ಇರುವ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಲಾಗಿದೆ ಎಂದು ಮುಖ್ಯ ಸಲಹೆಗಾರರ ಕಚೇರಿಯ ಹೇಳಿಕೆ ಸ್ಪಷ್ಟಪಡಿಸಿದೆ. ಶೇಖ್ ಹಸೀನಾ ಭಾರತದಿಂದಲೇ ಹೇಳಿಕೆ ನೀಡುತ್ತಿರುವುದು ಬಾಂಗ್ಲಾದೇಶ ಜನತೆಯ ಆತಂಕಕ್ಕೆ ಕಾರಣವಾಗಿದೆ, ಆಕೆಯ ಹೇಳಿಕೆಗಳು ದೇಶದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಬಾಂಗ್ಲಾದೇಶ ಸಚಿವಾಲಯ ಆತಂಕ ವ್ಯಕ್ತಪಡಿಸಿತ್ತು.
ಭಾರತದ ವಿದೇಶಾಂಗ ಕಾರ್ಯದರ್ಶಿ ಭೇಟಿ ನೀಡುವ ಮೊದಲು ಶೇಖ್ ಹಸೀನಾ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಮತ್ತು ಮುಹಮ್ಮದ್ ಯೂನಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಲಂಡನ್‌ನಲ್ಲಿ ಅವಾಮಿ ಲೀಗ್ ಬೆಂಬಲಿಗರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಬಾಂಗ್ಲಾದೇಶದಲ್ಲಿ ನಡೆದ ದಂಗೆಗೆ ಮುಹಮ್ಮದ್ ಯೂನಸ್ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಮುಖ್ಯವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಇಸ್ಕಾನ್ ದೇವಸ್ಥಾನ ಸೇರಿದಂತೆ ಹಲವು ಮಂದಿರಗಳನ್ನು ಧ್ವಂಸಗೊಳಿಸಲಾಗಿದೆ. ಕ್ರಿಶ್ಚಿಯನ್ ಸಮುದಾಯದ ಜನರ ಮೇಲೂ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ.












Click it and Unblock the Notifications