Rajya Sabha elections: ಗುಜರಾತ್‌ನಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್
ಅಹಮದಾಬಾದ್, ಜುಲೈ. 10: ಗುಜರಾತ್‌ನಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಬಿಜೆಪಿ ಗುಜರಾತ್ ಘಟಕದ ಅಧ್ಯಕ್ಷ ಸಿ ಆರ್ ಪಾಟೀಲ್ ಅವರು ಜೈಶಂಕರ್ ಅವರೊಂದಿಗೆ ರಾಜ್ಯ ವಿಧಾನಸಭೆ ಸಂಕೀರ್ಣಕ್ಕೆ ತೆರಳಿ ಅಲ್ಲಿ ಚುನಾವಣಾಧಿಕಾರಿ ರೀಟಾ ಮೆಹ್ತಾ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಜುಲೈ 13 ಕೊನೆಯ ದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಜುಲೈ 17 ಕೊನೆಯ ದಿನವಾಗಿದೆ. ಅಗತ್ಯ ಬಿದ್ದರೆ ಜುಲೈ 24 ರಂದು ಮತದಾನ ನಡೆಯಲಿದೆ. ನಾಲ್ಕು ವರ್ಷಗಳ ಹಿಂದೆ, ವಿದೇಶಾಂಗ ಸಚಿವ ಜೈಶಂಕರ್ ಅವರು ಗುಜರಾತ್‌ನಿಂದ ರಾಜ್ಯಸಭೆಗೆ ಮೊದಲ ಬಾರಿಗೆ ನಾಮಪತ್ರ ಸಲ್ಲಿಸಿದ್ದರು.

ಗುಜರಾತ್‌ನ 11 ರಾಜ್ಯಸಭಾ ಸ್ಥಾನಗಳಲ್ಲಿ ಪ್ರಸ್ತುತ ಎಂಟು ಸ್ಥಾನಗಳು ಬಿಜೆಪಿ ಮತ್ತು ಉಳಿದವು ಕಾಂಗ್ರೆಸ್‌ನ ಕೈಯಲ್ಲಿವೆ. ಬಿಜೆಪಿ ಹೊಂದಿರುವ ಎಂಟು ಸ್ಥಾನಗಳ ಪೈಕಿ ಎಸ್ ಜೈಶಂಕರ್, ಜುಗಲ್ಜಿ ಠಾಕೂರ್ ಮತ್ತು ದಿನೇಶ್ ಅನವಾಡಿಯಾ ಅವರ ಅವಧಿ ಆಗಸ್ಟ್ 18 ರಂದು ಕೊನೆಗೊಳ್ಳಲಿದೆ. ಈ ಮೂರು ಸ್ಥಾನಗಳಿಗೆ ಪ್ರಸ್ತುತ ಚುನಾವಣೆ ನಡೆಯಲಿದೆ.
182 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಸಾಕಷ್ಟು ಶಾಸಕರನ್ನು ಹೊಂದಿಲ್ಲದ ಕಾರಣ ಗುಜರಾತ್‌ನಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಮಾಹಿತಿ ನೀಡಿದೆ.

ಕಳೆದ ವರ್ಷದ ಕೊನೆಯಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ದಾಖಲೆ ಬರೆದಿದ್ದು, ಬರೋಬ್ಬರಿ 156 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಪಡೆಯುವ ಮೂಲಕ ಗುಜರಾತ್ ರಾಜ್ಯ ರಚನೆಯಾದ ನಂತರ ಅದರ ಅತ್ಯಂತ ಕಳಪೆ ಪ್ರದರ್ಶನ ತೋರಿಸಿದೆ. ಈಗ ಮತ್ತೆ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದೆ.












Click it and Unblock the Notifications