Rajasthan election 2023: ಬಿಜೆಪಿಯ ಪ್ರತಿತಂತ್ರ ಮೀರಿ ಕರ್ನಾಟಕ ರೀತಿಯಲ್ಲಿ ರಾಜಸ್ಥಾನ ಗೆಲ್ಲುವುದೇ ಕಾಂಗ್ರೆಸ್?
ಜೈಪುರ, ನವೆಂಬರ್ 30: ಲೋಕಸಭಾ ಚುನಾವಣೆ ಸೆಮಿಫೈನ್ ಎಂದೇ ಪರಿಗಣಿಸಲ್ಪಟ್ಟಿರುವ ಪಂಚರಾಜ್ಯಗಳ ಚುನಾವಣೆಯಲ್ಲಿ ರಾಜಸ್ಥಾನ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿಯ ರಾಜ್ಯವಾಗಿ ಮಾರ್ಪಟ್ಟಿದೆ.
ರಾಜಸ್ಥಾನದಲ್ಲಿ ಒಮ್ಮೆ ಅಧಿಕಾರಕ್ಕೆ ಬಂದ ಪಕ್ಷ ಮತ್ತೊಮ್ಮೆ ಬಂದ ಉದಾಹರಣೆ ಇಲ್ಲ. ಆದರೂ ಆಡಳಿತರೂಢ ಕಾಂಗ್ರೆಸ್ ಈ ಭಾರಿ ಈ ಸಂಪ್ರದಾಯವನ್ನು ಮುರಿಯಲು ಹೊರಟಿದೆ. ಕರ್ನಾಟಕ ಮಾದರಿ ಕಾಂಗ್ರೆಸ್ ಗ್ಯಾರಂಟಿಗಳ ಅಸ್ತ್ರ ಪ್ರಯೋಗಿಸಿದೆ. ಆದರೆ ಕಾಂಗ್ರೆಸ್‌ಗೆ ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಒಂದು ವೇಳೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಪಕ್ಷಕ್ಕೆ ಬಹುದೊಡ್ಡ ಮುನ್ನಡೆ ಸಾಧಿಸಿದಂತಾಗುತ್ತದೆ. ಬಿಜೆಪಿ ಬಂದರೆ ಅದು ಕರ್ನಾಟಕದ ಮಾದರಿ ಇಲ್ಲಿ ನಡೆಯಲ್ಲ ಎಂಬ ಸಂದೇಶ ರವಾನೆಯಾಗಲಿದೆ. ರಾಜಸ್ಥಾನದಲ್ಲಿ ಆಡಳಿತ ಪಕ್ಷವಾದ ಕಾಂಗ್ರೆಸ್‌ಗೆ ಆಡಳಿತ ವಿರೋಧಿ ಅಲೆ ದೊಡ್ಡದಾಗಿಯೇ ಇದೆ. ಆದರೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪರ ಜನರ ಒಲವು ಇದೆ.
ಇನ್ನೂ ಸರ್ಕಾರಕ್ಕೆ ಮುಜುಗರವಾಗಿದ್ದ ಸಚಿನ್ ಪೈಲಟ್ ಕೂಡ ಚುನಾವಣೆ ಬಂದ ಮೇಲೆ ಸುಮ್ಮನಾಗಿ ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ. ಇನ್ನು ಪಕ್ಷದಿಂದ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಗೆ ಪಕ್ಷ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಹೀಗಾಗಿ ಇದು ಜನರನ್ನು ಮತ್ತೆ ಕಾಂಗ್ರೆಸ್ ಆಯ್ಕೆ ಮಾಡುವಂತೆ ಮಾಡಿದೆಯೇ ಎಂಬುದು ಡಿಸೆಂಬರ್ 3ರಂದು ತಿಳಿಯಲಿದೆ.
ಇನ್ನು ಬಿಜೆಪಿ ಸಾಕಷ್ಟು ಪ್ರಚಾರ ಯಾತ್ರೆಗಳನ್ನು ನಡೆಸಿದ್ದು, ಹಲವಾರು ಭರವಸೆಗಳನ್ನು ನೀಡಿದೆ. ಪಕ್ಷವು ಯಾವುದೇ ಭರವಸೆಗಳನ್ನು ನೀಡಿದ್ದರೂ ಒಳ ಕಿತ್ತಾಟಗಳು ಜೋರಾಗಿದೆ. ರಾಜ್ಯದಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ ಅವರ ವರ್ಚಸ್ಸು ಬಹಳ ದೊಡ್ಡದಿದೆ. ಚುನಾವಣೆಯನ್ನು ನಿರ್ಣಯಿಸುವ ಮತದಾರ ಸಮುದಾಯಗಳು ಇವರ ಪರವಾಗಿವೆ.
ಆದರೆ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಬದಿಗೆ ಸರಿಸಿದ ಬಳಿಕ ಆದ ಬಹುದೊಡ್ಡ ನಷ್ಟದಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು. ಈ ಮಾದರಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಒಳ ಬೇಗುದಿಗಳಲ್ಲಿ ಕೊನೆಗೆ ರಾಜ್ಯಕ್ಕೆ ಜಯ ಸಿಕ್ಕಂತೆ ಮತ್ತೆ ಯಡಿಯೂರಪ್ಪ ಅವರ ಬಳಿಗೆ ಬರಬೇಕಾಯಿತು. ಆ ರೀತಿಯಲ್ಲಿ ರಾಜಸ್ಥಾನದಲ್ಲಿ ಎರಡನೇ ಪಟ್ಟಿಯಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ ಅವರಿಗೆ ಟಿಕೆಟ್ ನೀಡಿ ಬಚಾವಾಗಿದೆ.
ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಸ್ ಸಂತೋಷ್ ಅವರ ನಡುವೆ ಉಂಟಾಗಿದ್ದ ತಿಕ್ಕಾಟದಂತೆ ರಾಜಸ್ಥಾನದಲ್ಲೂ ಮಾಜಿ ಸಿಎಂ ವಸುಂಧರಾ ರಾಜೇ ಹಾಗೂ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನಡುವೆ ವೈಮನಸ್ಸು ಇದೆ. ಈ ನಿಟ್ಟಿನಲ್ಲಿ ಬಿಜೆಪಿ ಇದು ಹೊಡೆತ ನೀಡಬಹುದಾಗಿದೆ. ಈಗಾಗಲೇ ರಾಜ್ಯದಲ್ಲಿ ಚುನಾವಣೆ ಮುಗಿದ್ದಿದ್ದು, ಎಕ್ಸಿಟ್ ಪೋಲ್ ಹಾಗೂ ಚುನಾವಣಾ ಫಲಿತಾಂಶಗಳನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ.
ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಜೋಡಿ ರಾಜಸ್ಥಾನದಲ್ಲಿ ಮಾಡಿರುವ ಪ್ರಚಾರವೂ ದೊಡ್ಡದಿದೆ. ಹೀಗಾಗಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಒಂದು ವೇಳೆ ರಾಜಸ್ಥಾನದಲ್ಲಿ ಬಿಜೆಪಿ ಗೆದ್ದರೆ ಅದರ ನೇರ ಕ್ರೆಡಿಟ್ ನರೇಂದ್ರ ಮೋದಿಗೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಏಕೆಂದರೆ ದೇಶದ ಯಾವುದೇ ಮೂಲೆಯ ಪಕ್ಷದ ಕಾರ್ಯದ ಅಂತಿಮ ಕ್ರೆಡಿಟ್ ಸಲ್ಲುವುದು ಅಲ್ಲಿಗೆ.
ಹೀಗಾಗಿ ಬಿಜೆಪಿ ಗೆಲುವಿನ ಹಾದಿ ನೋಡುತ್ತಿದೆ. ಬಿಜೆಪಿ ಟಿಕೆಟ್ ನೀಡುವುದರಲ್ಲಿ ಹಲವಾರು ಎಚ್ಚರಿಕೆಗಳನ್ನು ವಹಿಸಿದ್ದರೂ ಅಲ್ಲಲ್ಲಿ ಎಡವಟ್ಟುಗಳನ್ನು ಮಾಡಿರುವುದರಲ್ಲಿ ಸಂದೇಹವಿಲ್ಲ. ರಾಜ್ಯದ ಸ್ಥಳೀಯ ನಾಯಕರಿಗೆ ಮಹತ್ವ ನೀಡಿದೇ ಏಕಮುಖ ನಿರ್ಧಾರಗಳು ಬಿಜೆಪಿ ಮುಳುವಾದ ಉದಾಹರಣೆ ಕರ್ನಾಟಕದಲ್ಲಿ ಇದೆ. ಆದ್ದರಿಂದ ಕೊನೆ ಕ್ಷಣದಲ್ಲಿ ಲೋಕಸಭಾ ಚುನಾವಣೆ ಮೇಲೂ ಇದು ಪರಿಣಾಮ ಬೀರುವುದರಿಂದ ಎಚ್ಚರಿಕೆ ವಹಿಸಲಾಗಿದೆ. ಹೀಗಾಗಿ ಡಿಸೆಂಬರ್ 3 ರವರೆಗೆ ಕಾದು ನೋಡಬೇಕಿದೆ.












Click it and Unblock the Notifications