ಎಐಸಿಸಿ ಅಧ್ಯಕ್ಷರೇ 'ಕೈಗೊಂಬೆ' ಎಂಬ ಆರೋಪಕ್ಕೆ ರಾಹುಲ್ ಗಾಂಧಿ ತಿರುಗೇಟು
ಬೆಂಗಳೂರು, ಅಕ್ಟೋಬರ್ 8: ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ) ಪಕ್ಷದ ನೂತನ ಅಧ್ಯಕ್ಷರಾಗಿ ಯಾರೇ ಆಯ್ಕೆಯಾಗಲಿ, ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಸಂಘಟನೆಯನ್ನು ಮುನ್ನೆಡೆಸುವ ಸ್ವತಂತ್ರವನ್ನು ಹೊಂದಿರುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ತಮ್ಮ ಪಕ್ಷದ 'ಭಾರತ್ ಜೋಡೋ ಯಾತ್ರೆ'ಯ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಇಬ್ಬರೂ ನಾಮನಿರ್ದೇಶಿತರು ಸ್ಥಾನವನ್ನು ಹೊಂದಿದ್ದಾರೆ ಎಂದರು. ಅವರು ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದಾರೆ. 'ರಿಮೋಟ್ ಕಂಟ್ರೋಲ್' ಎಂದು ಕರೆಯುವುದು ಅವರಿಬ್ಬರನ್ನೂ ಅವಮಾನಿಸಿದಂತೆ ಆಗುತ್ತದೆ," ಎಂದು ರಾಹುಲ್ ಗಾಂಧಿ ಹೇಳಿದರು.
ದೇಶದಲ್ಲಿ 22 ವರ್ಷಗಳ ನಂತರದಲ್ಲಿ ಮೊದಲ ಬಾರಿಗೆ ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಇಬ್ಬರು ಅಭ್ಯರ್ಥಿಗಳಾಗಿ ಸ್ಪರ್ಧೆಗೆ ಇಳಿದಿದ್ದು, ಅಕ್ಟೋಬರ್ 19ರಂದು ಈ ಸಂಬಂಧ ಮತ ಎಣಿಕೆ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಬಗ್ಗೆ ರಾಹುಲ್ ಗಾಂಧಿ ಏನು ಹೇಳಿದರು? ಟೀಕಾಕಾರರಿಗೆ ಹೇಗೆ ತಿರುಗೇಟು ಕೊಟ್ಟರು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಎಐಸಿಸಿ ಸ್ಪರ್ಧೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್
ಭಾರತದಲ್ಲಿ ಬರೋಬ್ಬರಿ 26 ವರ್ಷಗಳ ನಂತರದಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ನಾಯಕರಿಗೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರ ಸ್ಥಾನ ಒಲಿದು ಬರುತ್ತಿದೆ. ಕರ್ನಾಟಕದ ಮಲ್ಲಿಕಾರ್ಜುನ್ ಖರ್ಗೆ ಅಥವಾ ಕೇರಳದ ಶಶಿ ತರೂರ್ ನಡುವೆೆ ಪೈಪೋಟಿ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಚುನಾವಣೆಗೆ ಹೈಕಮಾಂಡ್ ಬೆಂಬಲಿತ ಅಭ್ಯರ್ಥಿ ಆಗಿ ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧಿಸಿದರೆ, ಕೇರಳದ ಶಶಿ ತರೂರ್ ಪ್ರತಿಸ್ಪರ್ಧಿ ಆಗಿ ಕಣಕ್ಕೆ ಇಳಿದಿದ್ದಾರೆ. ಇಬ್ಬರು ಅಭ್ಯರ್ಥಿಗಳು ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯು ಅಕ್ಟೋಬರ್ 17ರಂದು ನಡೆಯಲಿದ್ದು, ಫಲಿತಾಂಶವು ಅಕ್ಟೋಬರ್ 19ರಂದು ಹೊರ ಬೀಳಲಿದೆ. ಒಟ್ಟು 9100 ಕಾಂಗ್ರೆಸ್ ನಾಯಕರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದು, ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.

ರಾಹುಲ್ ಗಾಂಧಿ ಮಾತಿನಲ್ಲಿ ಒಗ್ಗಟ್ಟಿನ ಮಂತ್ರ
ಕಾಂಗ್ರೆಸ್ ಪಕ್ಷದ ನಿಲುವನ್ನು ವಿವರಿಸುತ್ತಾ ಮಾತನಾಡಿದ ರಾಹುಲ್ ಗಾಂಧಿ, "ನಮ್ಮದು ಫ್ಯಾಸಿಸ್ಟ್ ಪಕ್ಷವಲ್ಲ. ನಾವು ಅಭಿಪ್ರಾಯಗಳನ್ನು ಮತ್ತು ಚರ್ಚೆಯಲ್ಲಿ ನಂಬಿಕೆ ಹೊಂದಿದ್ದೇವೆ. ನಾವು ವಿಭಿನ್ನ ದೃಷ್ಟಿಕೋನಗಳನ್ನು ಸ್ವಾಗತಿಸುತ್ತೇವೆ. ಭವಿಷ್ಯದಲ್ಲಿ ಚುನಾವಣೆಗಳನ್ನು ಗೆಲ್ಲಲು ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ನಮಗೆ ತಿಳಿದಿದೆ," ಎಂದು ಹೇಳಿದರು. ಇದೇ ವೇಳೆ ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು. ಬಿಜೆಪಿಯವರು ಪ್ರಚಾರ ಮಾಡುತ್ತಿರುವ ರೀತಿಯ ರಾಜಕೀಯದಿಂದ ಭಾರತದ ಜನರು ಬೇಸತ್ತಿದ್ದಾರೆ, ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ರೋಸಿ ಹೋಗಿದ್ದಾರೆ ಎಂದು ಹೇಳಿದರು.

ಭಾರತದ ಒಕ್ಕೂಟ ವ್ಯವಸ್ಥೆ ಬಗ್ಗೆ ರಾಹುಲ್ ಗಾಂಧಿ ಉಲ್ಲೇಖ
ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ಇದರರ್ಥ ನಮ್ಮ ಎಲ್ಲಾ ಭಾಷೆಗಳು, ರಾಜ್ಯಗಳು ಮತ್ತು ಸಂಪ್ರದಾಯಗಳು ಸಮಾನವಾದ ಪ್ರಮುಖ ಸ್ಥಳವನ್ನು ಹೊಂದಿವೆ. ಅದು ನಮ್ಮ ದೇಶದ ಸ್ವಭಾವವನ್ನು ತೋರಿಸುತ್ತದೆ. ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರ ಹರಡುವುದು ದೇಶ ವಿರೋಧಿ ಕೃತ್ಯವಾಗಿರುತ್ತದೆ. ದ್ವೇಷ ಮತ್ತು ಹಿಂಸೆಯನ್ನು ಹರಡುವ ಯಾರೊಂದಿಗಾದರೂ ನಾವು ಹೋರಾಡುತ್ತೇವೆ," ಎಂದು ರಾಹುಲ್ ಗಾಂಧಿ ಹೇಳಿದರು.

ಬಿಜೆಪಿ ವಿರುದ್ಧ ದ್ವೇಷ ಹರಡುವ ಆರೋಪ ಮಾಡಿದ ರಾಹುಲ್ ಗಾಂಧಿ
"ಬಿಜೆಪಿ ಏಕವಚನದಲ್ಲಿ ರಾಷ್ಟ್ರವನ್ನು ವಿಭಜಿಸುತ್ತಿದ್ದು, ಈ ರಾಷ್ಟ್ರದಲ್ಲಿ ದ್ವೇಷವನ್ನು ಹರಡುತ್ತಿದೆ ಎಂದು ರಾಹುಲ್ ಗಾಂಧಿ ದೂಷಿಸಿದರು. ದ್ವೇಷವನ್ನು ಹರಡುವುದರ ಮೂಲಕ ರಾಷ್ಟ್ರಕ್ಕೆ ಯಾವುದೇ ರೀತಿ ಸಹಾಯ ಮಾಡುವುದಕ್ಕೆ ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು 'ಭಾರತ್ ಜೋಡೋ ಯಾತ್ರೆ' ಮಾಡುತ್ತಿದ್ದೇವೆ. ನಾನ ಮಾತ್ರ ಈ 'ಭಾರತ್ ಜೋಡೋ ಯಾತ್ರೆ' ಅನ್ನು ಮಾಡುತ್ತಿಲ್ಲ. ಅಥವಾ ನನಗಾಗಿ ಮಾತ್ರ ಈ 'ಭಾರತ್ ಜೋಡೋ ಯಾತ್ರೆ' ಅನ್ನು ನಡೆಸುತ್ತಿಲ್ಲ. ಬದಲಿಗೆ ಲಕ್ಷ ಲಕ್ಷ ಜನರು ಈ 'ಭಾರತ್ ಜೋಡೋ ಯಾತ್ರೆ'ಯಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ," ಎಂದು ರಾಹುಲ್ ಗಾಂಧಿ ಹೇಳಿದರು.












Click it and Unblock the Notifications