Priyanka Gandhi: ಇಂದಿರಾ ಗಾಂಧಿ ಮೊಮ್ಮಗಳ ಹೊಸ ಅಧ್ಯಾಯ.. ಕಾಂಗ್ರೆಸ್‌ಗೆ ಹೇಗೆ ಸಹಾಯ?
ನವದೆಹಲಿ, ಜೂನ್. 18: ಇಷ್ಟು ದಿನ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡದೆ ಇದ್ದ ಇಂದಿರಾ ಗಾಂಧಿ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಈಗ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಕೇರಳದ ವಯನಾಡ್‌ನಿಂದ ಚುನಾವಣೆಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದು, ಹಲವು ವರ್ಷಗಳಿಂದ ಇದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಪ್ರಿಯಾಂಕಾ ಗಾಂಧಿ ಕೇರಳದ ವಯನಾಡ್‌ನಿಂದ ಚುನಾವಣೆಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿದೆ. ಲೋಕಸಭೆ ಚುನಾವಣೆಯಲ್ಲಿ ವಯನಾಡ್ ಮತ್ತು ರಾಯ್‌ಬರೇಲಿಯಿಂದ ಗೆದ್ದಿರುವ ರಾಹುಲ್ ಗಾಂಧಿ, ನಾಲ್ಕು ಅವಧಿಗೆ ಸೋನಿಯಾ ಗಾಂಧಿ ಪ್ರತಿನಿಧಿಸಿದ್ದ ಗಾಂಧಿ ಕುಟುಂಬದ ಭದ್ರಕೋಟೆಯಾದ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ.

2019 ರ ಚುನಾವಣೆಯ ನಂತರ ಪ್ರಿಯಾಂಕಾ ಗಾಂಧಿಯವರ ಚೊಚ್ಚಲ ಚುನಾವಣಾ ಸ್ಫರ್ಧೆ ಬಗ್ಗೆ ಊಹಾಪೋಹಗಳಿದ್ದರೂ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಲ್ಲವನ್ನು ನೀರಾಕರಿಸಿದ್ದರು. ಆದರೆ, ಈ ಬಾರಿ ಪ್ರಿಯಾಂಕಾ ಗಾಂಧಿ ಈಗ ಚುನಾವಣಾ ಕಣಕ್ಕೆ ಇಳಿಯಲು ಒಪ್ಪಿಕೊಂಡಿರುವುದು ಕಾಂಗ್ರೆಸ್‌ಗೆ ವಯನಾಡ್‌ನ ಮಹತ್ವವನ್ನು ತೋರಿಸುತ್ತದೆ.
ರಾಹುಲ್ ಗಾಂಧಿ ಮಾಡಿದ ಭಾಷಣದಲ್ಲಿ ಇದು ಸ್ಪಷ್ಟವಾಗಿದೆ. "ವಯನಾಡಿನ ಜನರು ನನಗೆ ಅತ್ಯಂತ ಕಷ್ಟದ ಸಮಯದಲ್ಲಿ ಹೋರಾಡಲು ಬೆಂಬಲ, ಶಕ್ತಿಯನ್ನು ನೀಡಿದರು. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ" ಎಂದು ರಾಹುಲ್ ಗಾಂಧಿ 2019 ರ ಲೋಕಸಭೆ ಚುನಾವಣೆಯನ್ನು ನೆನಪಿಸಿಕೊಂಡಿದ್ದಾರೆ.
2019 ರಲ್ಲಿ, ರಾಹುಲ್ ಗಾಂಧಿ ಅವರು ಬಿಜೆಪಿಯ ಸ್ಮೃತಿ ಇರಾನಿ ಎದುರು ಅಮೇಥಿಯನ್ನು ಕಳೆದುಕೊಂಡಾಗಲೂ ವಯನಾಡ್ ಕ್ಷೇತ್ರವನ್ನು ಗೆದ್ದರು. ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ 2024 ರಲ್ಲಿ ವಯನಾಡ್ ಕ್ಷೇತ್ರವನ್ನು ಮತ್ತೆ ಗೆದ್ದಿದ್ದಾರೆ. ಸಿಪಿಐ-ಎಂ ಅಭ್ಯರ್ಥಿ ಅನ್ನಿ ರಾಜಾ ಅವರನ್ನು 3,64,422 ಮತಗಳಿಂದ ಸೋಲಿಸಿದ್ದಾರೆ.

ಉತ್ತರ ಮತ್ತು ದಕ್ಷಿಣದಲ್ಲಿ ಕಾಂಗ್ರೆಸ್ ಬೆಳೆಯಲು ಸಹಾಯ?
ವಯನಾಡ್ ಕಾಂಗ್ರೆಸ್ ಭದ್ರಕೋಟೆಯಾಗಿರುವ ಕಾರಣ, ಪ್ರಿಯಾಂಕಾ ಗಾಂಧಿ ಭರ್ಜರಿ ಜಯ ಸಾಧಿಸುವ ನಿರೀಕ್ಷೆಯಿದೆ. ಇಂದಿರಾ ಗಾಂಧಿ ಮೊಮ್ಮಕ್ಕಳ ಈ ಪ್ಲ್ಯಾನ್ ಉತ್ತರ ಮತ್ತು ದಕ್ಷಿಣ ಎರಡರಲ್ಲೂ ಗಾಂಧಿ ಕುಟುಂಬದ ಪ್ರತಿನಿಧಿಗಳನ್ನು ನೀಡುತ್ತದೆ. ಇದರಿಂದ ಕಾಂಗ್ರೆಸ್ ಎರಡೂ ಭಾಗಗಳಲ್ಲು ಬೆಳೆಯಲು ಸಹಾಯವಾಗಲಿದೆ.
ಉತ್ತರ ಭಾರತದಲ್ಲಿ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಕೆಲವು ಸ್ಥಾನಗಳನ್ನು ಭದ್ರ ಮಾಡಿಕೊಂಡಿದೆ. ಆದರೆ, ಸಮರ್ಥ ನಾಯಕರಿಲ್ಲದೆ ಸೊರಗುತ್ತಿದೆ. ಈ ಜಾಗವನ್ನು ತುಂಬಲು ರಾಹುಲ್ ಗಾಂಧಿ ಅಲ್ಲಿಗೆ ಹೋಗುವುದು ಸಹಾಯಕವಾಗಲಿದೆ. ಇದೇ ವೇಳೆ ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ವ್ಯಾಪ್ತಿ ವಿಸ್ತರಿಸುತ್ತಿದ್ದು ಅದಕ್ಕೆ ಕಡಿವಾಣ ಹಾಕುವ ಕಾಂಗ್ರೆಸ್ ಯೋಜನೆ ಭಾಗವಾಗಿ ಪ್ರಿಯಾಂಕಾ ಗಾಂಧಿ ಇಲ್ಲಿರುವುದು ಅವಶ್ಯಕ ಎಂಬುದು ಕಾಂಗ್ರೆಸ್ ಯೋಜನೆ.
ರಾಹುಲ್ ಗಾಂಧಿ ಕುಟುಂಬಕ್ಕೆ ವಯನಾಡು ಬಹಳ ಮಹತ್ವದ್ದು. ರಾಹುಲ್ ಗಾಂಧಿ ಕೈ ಹಿಡಿದ ಕ್ಷೇತ್ರವಿದು. ಇನ್ನು, ತಮಿಳುನಾಡಿನಲ್ಲಿ ಅವರಿಗೆ ನೇರ ಪ್ರಾತಿನಿಧ್ಯವಿಲ್ಲ, ಕರ್ನಾಟಕದಲ್ಲಿ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಇದೆ. ಕೇರಳದಲ್ಲಿ ಬಿಜೆಪಿಯ ಮತಗಳ ಪ್ರಮಾಣವೂ ಹೆಚ್ಚುತ್ತಿರುವ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ಅವರ ಚುನಾವಣಾ ಸ್ಪರ್ಧೆ ಎಂದರೆ ಕಾಂಗ್ರೆಸ್ ನೇರವಾಗಿ ಚುನಾವಣಾ ಕಣಕ್ಕೆ ಕೈ ಹಾಕುತ್ತಿರುವುದು ಸ್ಪಷ್ಟವಾಗಿದೆ.
ಪ್ರಿಯಾಂಕಾ ಗಾಂಧಿ ವಯನಾಡಿನಿಂದ ಕಣಕ್ಕೆ ಇಳಿಯುವುದು ಗಾಂಧಿ ಕುಟುಂಬವು ದಕ್ಷಿಣ ಭಾರತವನ್ನು ಕಡೆಗಣಿಸಿದೆ ಎಂಬ ಟೀಕೆಯಿಂದಲೂ ಕಾಂಗ್ರೆಸ್ ಅನ್ನು ರಕ್ಷಿಸುತ್ತದೆ. ಜೊತೆಗೆ ಇನ್ನೊಂದು ಪ್ರಮುಖ ವಿಷಯವೆಂದರೆ ಲೋಕಸಭೆಯಲ್ಲಿ ಪ್ರತಿಪಕ್ಷದ ದನಿಯನ್ನು ಕೂಡ ಹೆಚ್ಚಿಸುವ ಒಂದು ಮಹತ್ವದ ನಡೆ ಇದು.












Click it and Unblock the Notifications