Monsoon Session: ಮೋದಿ ಸರ್ಕಾರದ ಮಸೂದೆಗೆ ರಾಷ್ಟ್ರಪತಿ ಅಂಕಿತ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಸಕ್ತ ಅವಧಿಯ ಕೊನೇ ಮುಂಗಾರು ಅಧಿವೇಶನ ಇಡೀ ದೇಶದ ಗಮನ ಸೆಳೆದಿತ್ತು. ಆದರೆ ಮಣಿಪುರ ಹಿಂಸಾಚಾರದ ಗದ್ದಲವೇ ಇಡೀ ಅಧಿವೇಶನವನ್ನ ಆವರಿಸಿ ಮುಕ್ತಾಯಗೊಂಡಿದೆ. ಇದೇ ಅಧಿವೇಶನದಲ್ಲಿ ಮಹತ್ವದ ಮಸೂದೆಗಳನ್ನ ಮೋದಿ ಸರ್ಕಾರ ಅಂಗೀಕರಿಸಿದ್ದು, ಅದಕ್ಕೆ ರಾಷ್ಟ್ರಪತಿಗಳು ಈಗ ಅಂಕಿತ ಹಾಕಿದ್ದಾರೆ.
ನಿನ್ನೆ ಸಂಸತ್ ಅಧಿವೇಶನ ಮುಕ್ತಾಯವಾಗಿತ್ತು. ಮುಂಗಾರು ಅಧಿವೇಶನ ಭಾರಿ ಕುತೂಹಲ ಕೆರಳಿಸಿ, ಅವಿಶ್ವಾಸ ನಿರ್ಣಯ ವಿಚಾರ ಸಖತ್ ಸದ್ದು ಮಾಡಿತ್ತು. ಪ್ರಧಾನಿ ಮೋದಿ ತಮ್ಮ ಸರ್ಕಾರದ ವಿರುದ್ಧದ ಆರೋಪಗಳಿಗೆ ಉತ್ತರ ನೀಡಿದ್ದರು. 17 ದಿನಗಳಲ್ಲಿ ಒಟ್ಟು 44 ಗಂಟೆ 13 ನಿಮಿಷ ಕಾಲ ಅಧಿವೇಶನ ನಡೆಸಿದಿತ್ತು. ಇದೀಗ ಸಂಸತ್ ಅಧಿವೇಶನ ಅಂಗೀಕರಿಸಿರುವ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಹಾಗಾದರೆ ಯಾವೆಲ್ಲಾ ಮಸೂದೆಗಳಿಗೆ ಅಂಕಿತ ಬಿದ್ದಿದೆ? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ದೆಹಲಿ ಮಸೂದೆ ವಿಚಾರದಲ್ಲಿ ಕಿರಿಕ್
ಅಂದಹಾಗೆ ಈ ಬಾರಿ ಮುಂಗಾರು ಅಧಿವೇಶನದಲ್ಲಿ ಹಲವು ಮಸೂದೆ ಅಂಗೀಕಾರವಾಗಿದ್ದು, ಆ ಪೈಕಿ ಒಟ್ಟು 7 ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಈ ಪೈಕಿ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ, ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ, ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆ ಸೇರಿವೆ. ಇದರಲ್ಲಿ ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಸರ್ಕಾರದ ಮಸೂದೆ ಸಾಕಷ್ಟು ಸದ್ದು ಮಾಡಿತ್ತು. ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಈ ವಿಚಾರಕ್ಕೆ ದೊಡ್ಡ ವಾಗ್ಯುದ್ಧ ನಡೆದಿತ್ತು.
60 ಸಂಸದರು 20 ತಾಸು ಚರ್ಚೆ!
ಮಣಿಪುರ ಹಿಂಸಾಚಾರದ ರೀತಿಯೇ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಕೂಡ ಗಮನ ಸೆಳೆದಿತ್ತು. ಮಣಿಪುರದ ಹಿಂಸೆ ಸಂಬಂಧ ಪ್ರಧಾನಿಯಿಂದ ವಿಸ್ತೃತ ಹೇಳಿಕೆ ಬಯಸಿದ್ದ ವಿಪಕ್ಷಗಳು, ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಹೀಗೆ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ 60 ಸಂಸದರು 20 ತಾಸು ಚರ್ಚೆ ನಡೆಸಿದ್ರು. ಆದರೆ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನಂತರ ಅವಿಶ್ವಾಸ ನಿರ್ಣಯದ ಮತದಾನ ನಡೆದಿತ್ತು.

ಹೀಗೆ ಎಲ್ಲಾ ಗೊಂದಲಗಳ ನಡುವೆ ನಿನ್ನೆ ಸಂಸತ್ ಮುಂಗಾರು ಅಧಿವೇಶನ ಮುಗಿದಿದ್ದು, ಅಧಿವೇಶನದಲ್ಲಿ ಅಂಗೀಕಾರ ಆಗಿದ್ದ ಮಸೂದೆಗಳು ಈಗ ಕಾನೂನಾಗಿವೆ. ದೇಶದ ಪಾಲಿಗೆ ಮುಂಗಾರು ಅಧಿವೇಶನ ಬಹುಮುಖ್ಯವಾಗಿದ್ದು, ಆದರೆ ಈ ಬಾರಿ ಮಣಿಪುರದ ಹಿಂಸಾಚಾರ ದೊಡ್ಡ ಗಲಾಟೆ ಎಬ್ಬಿಸಿತ್ತು. ಆಡಳಿಪಕ್ಷ ಮತ್ತು ವಿಪಕ್ಷಗಳ ತಿಕ್ಕಾಟದಲ್ಲಿ ಬೇರೆಲ್ಲ ವಿಚಾರಗಳು ಕಳೆದು ಹೋಗಿವೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಈ ಎಲ್ಲಾ ಆರೋಪಗಳು ಹಾಗೂ ಪ್ರತ್ಯಾರೋಪಗಳ ನಡುವೆ ಲೋಕಸಭಾ ಚುನಾವಣೆಗೆ ವಿಪಕ್ಷ ಮತ್ತು ಆಡಳಿತ ಪಕ್ಷಗಳು ಸಿದ್ಧತೆ ನಡೆಸಿವೆ.












Click it and Unblock the Notifications