AIIMS ವೈದ್ಯರಿಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಬಂಧಿಸಲು ಆಸ್ಪತ್ರೆಗೆ ನುಗ್ಗಿದ ಪೊಲೀಸ್ ವಾಹನ!
ರಿಷಿಕೇಶ ಮೇ 23: ಏಮ್ಸ್ ಆಸ್ಪತ್ರೆಯ ವೈದ್ಯರಿಗೆ ಕಿರುಕುಳ ನೀಡಿದ ಆರೋಪಿಯನ್ನು ಬಂಧಿಸಲು ಪೊಲೀಸ್ ವಾಹನವೊಂದು ಆಸ್ಪತ್ರೆಗೆ ನುಗ್ಗಿದ ಘಟನೆಯ ದೃಶ್ಯ ವೈರಲ್ ಆಗಿದೆ. ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನರ್ಸಿಂಗ್ ಅಧಿಕಾರಿಯನ್ನು ಬಂಧಿಸಲು ಪೊಲೀಸರು ಆಸ್ಪತ್ರೆಯ ಒಳಗೆ ಪೊಲೀಸ್ ವಾಹನವನ್ನು ನುಗ್ಗಿಸಿದ್ದಾರೆ.
ರಿಷಿಕೇಶದ ಏಮ್ಸ್ (AIIMS Rishikesh) ತುರ್ತು ಚಿಕಿತ್ಸಾ ವಿಭಾಗದಲ್ಲಿ ಆರೋಪಿಯನ್ನು ಬಂಧಿಸಲು ಪೊಲೀಸ್ ವಾಹನ ಸಂಚಾರ ಮಾಡಿದೆ. ಪೊಲೀಸರು ಸಿನಿಮಿಯ ಶೈಲಿಯಲ್ಲಿ ನೇರವಾಗಿ ಚಿಕಿತ್ಸಾ ವಾರ್ಡ್‌ಗೆ ವಾಹನವನ್ನು ನುಗ್ಗಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 26-ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ಆಕ್ಷನ್ ಚಲನಚಿತ್ರದಂತೆ ದೃಶ್ಯ ಕಾಣಿಸಿಕೊಂಡಿದೆ.

ಅಂದಹಾಗೆ ಈ ಘಟನೆ ಕಳೆದ ಮಂಗಳವಾರ ನಡೆದಿದೆ. ವೀಡಿಯೋದಲ್ಲಿ ಪೋಲೀಸ್ ವಾಹನ ತುರ್ತು ಚಿಕಿತ್ಸಾ ವಿಭಾಗದ ಮೂಲಕ ಚಾಲನೆ ಮಾಡುತ್ತಿರುವುದು ಕಂಡು ಬಂದಿದೆ. ಎರಡೂ ಬದಿಗಳ ಹಾಸಿಗೆಗಳಲ್ಲಿ ರೋಗಿಗಳು ಮಲಗಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಜೊತೆಗೆ ಭದ್ರತಾ ಅಧಿಕಾರಿಗಳ ಗುಂಪು ಪೊಲೀಸ್ ವಾಹನಕ್ಕೆ ದಾರಿ ಮಾಡಿಕೊಡುವುದು, ಸ್ಟ್ರೆಚರ್‌ಗಳನ್ನು ಮತ್ತೊಂದು ಬದಿಗೆ ತಳ್ಳುವುದು ಕಂಡುಬರುತ್ತದೆ. ಹಲವಾರು ಪೋಲೀಸ್ ಅಧಿಕಾರಿಗಳು ವಾಹನದೊಳಗೆ ಕಾಣಿಸಿಕೊಳ್ಳುತ್ತಾರೆ.
ಪೋಲೀಸರ ಪ್ರಕಾರ, ನರ್ಸಿಂಗ್ ಅಧಿಕಾರಿ ಸತೀಶ್ ಕುಮಾರ್ ಆಪರೇಷನ್ ಥಿಯೇಟರ್‌ನಲ್ಲಿ ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಈತ ವೈದ್ಯರಿಗೆ ಅಶ್ಲೀಲ SMS ಕಳುಹಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಘಟನೆಯಿಂದ ಬೇಸತ್ತಿದ್ದ ಆಸ್ಪತ್ರೆಯ ವೈದ್ಯರು ತಮ್ಮ ಕಾರ್ಯ ಸ್ಥಗಿತಗೊಳಿಸಿ ಪ್ರತಿಭಟನೆಗೆ ಇಳಿದಿದ್ದರು.
AIIMS ऋषिकेश में महिला चिकित्सक से छेड़खानी के आरोपी को गिरफ्तार करने के लिए देहरादून पुलिस वाहन समेत चौथी मंजिल चढ़ गई, फिर गाड़ी समेत इमरजेंसी वार्ड में घुस गई, जिसके कारण मरीजों के बैड और स्ट्रेचर हटाने पड़े, लेकिन पुलिस की गाड़ी रुकी नहीं.#dehradun #dehradunpolice #aiims… pic.twitter.com/40Amkdys3Q
— NDTV India (@ndtvindia) May 23, 2024
ಏಮ್ಸ್‌ನ ಹಲವಾರು ವೈದ್ಯರು ಮುಷ್ಕರ ನಡೆಸಿ ಅಪರಾಧಿಯನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಡೀನ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ಜೊತೆಗೆ ವೈದ್ಯರು ಪೊಲೀಸರನ್ನು ಸಂಪರ್ಕಿಸಿದರು. ವೈದ್ಯರ ಪ್ರತಿಭಟನೆಯಿಂದಾಗಿ ಪೊಲೀಸರು ಸತೀಶ್ ಕುಮಾರ್ ಅವರನ್ನು ಬಂಧಿಸಲು ಆಸ್ಪತ್ರೆಗೆ ತೆರಳಲು ನಿರ್ಧರಿಸಿದರು. ಆಸ್ಪತ್ರೆಯ ಒಳಗೆ ವಾಹನದೊಂದಿಗೆ ಹೋಗಿ ಆರೋಪಿಯನ್ನು ಕರೆದೊಯ್ದಿದ್ದಾರೆ. ಮತ್ತೊಂದು ವೀಡಿಯೊದಲ್ಲಿ ಆರೋಪಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿರುವುದು ಕಂಡು ಬಂದಿದೆ.
ಪ್ರತಿಭಟಿಸುವ ವೈದ್ಯರ ಮುಂದೆ ಪೊಲೀಸ್ ಅಧಿಕಾರಿಗಳ ಗುಂಪು ಆರೋಪಿಯನ್ನು ಕರೆದೊಯ್ದಿದೆ. ಅದೇ ವೇಳೆ ಸತೀಶ್‌ಕುಮಾರ್ ಮಾಡಿರುವ ತಪ್ಪಿಗೆ ಕೇವಲ ಅಮಾನತು ಸಾಕಾಗುವುದಿಲ್ಲ. ಸತೀಶ್‌ಕುಮಾರ್ ನನ್ನು ಕೂಡಲೇ ವಜಾಗೊಳಿಸಬೇಕು ಎಂದು ವೈದ್ಯರು ಘೋಷಣೆ ಕೂಗಿದರು.
ಇದೀಗ ಸತೀಶ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ವಿಚಾರಣೆ ನಡೆಯುತ್ತಿದೆ ಎಂದು ರಿಷಿಕೇಶ್ ಪೊಲೀಸ್ ಅಧಿಕಾರಿ ಶಂಕರ್ ಸಿಂಗ್ ಬಿಶ್ತ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಮುಷ್ಕರ ನಡೆಸುತ್ತಿದ್ದ ವೈದ್ಯರಿಗೆ ಈ ಘಟನೆಯಿಂದ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.












Click it and Unblock the Notifications