₹2,000 ನೋಟು ಬದಲಾವಣೆ, ದೆಹಲಿ ಹೈಕೋರ್ಟ್ ಮಹತ್ವದ ಆದೇಶ!
ನವದೆಹಲಿ: ₹2,000 ನೋಟು ಬದಲಾವಣೆಗೆ ಅನುಸರಿಸುತ್ತಿರುವ ನಿಯಮಗಳ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ. ಮುಖ್ಯ ನ್ಯಾಯಮೂರ್ತಿ ಸತೀಶ್ ಕುಮಾರ್ ಶರ್ಮಾ & ನ್ಯಾ.ಸುಬ್ರಮಣಿಯಂ ಪ್ರಸಾದ್ ಅವರಿದ್ದ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ₹2,000 ನೋಟು ಬದಲಾವಣೆ ವಿಚಾರಕ್ಕೆ ದೊಡ್ಡ ತಿರುವು ಸಿಕ್ಕಂತಾಗಿದೆ.
ಯಾವುದೇ ಮನವಿ ಅಥವಾ ಗುರುತಿನ ಚೀಟಿಗಳಿಲ್ಲದೇ 2,000 ರೂ. ಮುಖಬೆಲೆ ನೋಟು ಬದಲಾಯಿಸಲು ನೀಡಿರುವ ಅನುಮತಿ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲು ಏರಲಾಗಿತ್ತು. ಹೆಚ್ಚಿನ ಮೌಲ್ಯದ ಕರೆನ್ಸಿ ಭ್ರಷ್ಟಾಚಾರದ ಮುಖ್ಯ ಮೂಲ ಎಂದು ಅರ್ಜಿಯಲ್ಲಿ ಪ್ರತಿಪಾದನೆ ಮಾಡಲಾಗಿತ್ತು. ಅಲ್ಲದೆ ಇನ್ನೂ ಕೆಲವು ಕುತೂಹಲಕಾರಿ ವಿಚಾರಗಳನ್ನ ಅರ್ಜಿಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಆದರೆ ನ್ಯಾಯಾಲಯದಲ್ಲಿ ಅಧಿಸೂಚನೆ ಸಮರ್ಥನೆ ಮಾಡಿಕೊಂಡಿದ್ದ ಆರ್‌ಬಿಐ, ಇದು ನೋಟು ನಿಷೇಧವಲ್ಲ ಶಾಸನಬದ್ಧ ಪ್ರಕ್ರಿಯೆ ಎಂದು ಹೇಳಿತ್ತು.

ಆರ್‌ಬಿಐ ನಿರ್ಧಾರಕ್ಕೆ ಸಿಕ್ಕ ಗೆಲುವು?
ಅರ್ಜಿಯಲ್ಲಿ ಪ್ರಸ್ತಾಪ ಮಾಡಿದಂತೆ 'ದೇಶದಲ್ಲಿ ಪ್ರತಿ ಕುಟುಂಬ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಹೀಗಿದ್ದಾಗ ಗುರುತಿನ ಚೀಟಿ ಪಡೆಯದೆ 2,000 ನೋಟುಗಳನ್ನ ಬದಲಾಯಿಸಲು RBI ಅನುಮತಿ ನೀಡಿದ್ದೇಕೆ?' ಎಂದು ಪ್ರಶ್ನಿಸಲಾಗಿತ್ತು. ಹಾಗೇ ಮತ್ತೊಂದು ವಿಚಾರ ಅರ್ಜಿಯಲ್ಲಿ ಪ್ರಸ್ತಾಪ ಮಾಡಲಾಗಿತ್ತು, ಬ್ಯಾಂಕ್ ಖಾತೆಗೆ ಮಾತ್ರ 2,000 ನೋಟುಗಳ ಠೇವಣಿ ಮಾಡುವಂತೆ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿತ್ತು. ಆದರೆ ಅರ್ಜಿಯ ವಿಚಾರಣೆ ನಡೆಸಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ವಜಾ ಮಾಡಲಾಗಿದೆ.
ಅಕೌಂಟ್‌ಗೆ ಮಾತ್ರ ಹಾಕುವಂತೆ ಒತ್ತಾಯ!
ಅಂದಹಾಗೆ ಅರ್ಜಿಯಲ್ಲಿ ತಿಳಿಸಿದಂತೆ 'ದೇಶದಲ್ಲಿ ಒಟ್ಟು 80 ಕೋಟಿ ಬಿಪಿಎಲ್ ಕುಟುಂಬಗಳು ಉಚಿತ ಆಹಾರ ಧಾನ್ಯ ಪಡೆಯುತ್ತಿವೆ. ಇದರರ್ಥ 80 ಕೋಟಿ ಭಾರತೀಯರು ₹2,000 ನೋಟುಗಳನ್ನ ಅಪರೂಪಕ್ಕೆ ನೋಡಿರಲು ಸಾಧ್ಯ ಎಂದಾಯ್ತು. ಹೀಗಿದ್ದಾಗ ₹2,000 ರೂಪಾಯಿ ನೋಟನ್ನ ಬ್ಯಾಂಕ್ ಖಾತೆಗೆ ಮಾತ್ರ ಠೇವಣಿ ಮಾಡುವಂತೆ ಕ್ರಮ ತೆಗೆದುಕೊಳ್ಳುವಂತೆ ಆರ್‌ಬಿಐ & ಎಸ್‌ಬಿಐಗೆ ನಿರ್ದೇಶನ ನೀಡಬೇಕು ಎಂದು' ಈ ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ಇದಕ್ಕೆ ಆರ್‌ಬಿಐ ಮತ್ತು ಎಸ್‌ಬಿಐ ಪರ ವಕೀಲರು ಕೂಡ ಸೂಕ್ತವಾದ ವಾದ ಮಂಡಿಸಿದ್ದರು.

4 ತಿಂಗಳು ಅವಕಾಶ ನೀಡಿದ RBI!
2016ರಲ್ಲಿ ಘೋಷಣೆ ಮಾಡಿದಂತೆ ದಿಢೀರ್ ನೋಟ್ ಬ್ಯಾನ್ ಮಾಡುತ್ತಿಲ್ಲ ಆರ್‌ಬಿಐ. ಈಗ ಜನರಿಗೆ ಅನುಕೂಲ ಆಗಲಿ ಎಂದು ಬರೋಬ್ಬರಿ 4 ತಿಂಗಳ ಅವಕಾಶ ಕಲ್ಪಿಸಿದೆ. ನೀವು ನಿಮ್ಮ ಬಳಿ ಇರುವ 2000 ಮುಖಬೆಲೆ ನೋಟ್ ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶವಿದ್ದು, ಅಕ್ಟೋಬರ್ 1ರಿಂದ ನೋಟ್ ಚಲಾವಣೆ ಸಂಪೂರ್ಣ ಬ್ಯಾನ್ ಮಾಡಲಾಗುವುದು ಎಂದು ಆರ್‌ಬಿಐ ಹೇಳಿದೆ. ಹೀಗಾಗಿ ಟೆನ್ಷನ್ ಮಾಡಿಕೊಳ್ಳದೆ ನಿಮ್ಮ ಹತ್ತಿರ ಇರುವ 2000 ರೂ. ಮುಖಬೆಲೆ ನೋಟ್‌ಗಳನ್ನ ಎಕ್ಸ್‌ಚೇಂಜ್ ಮಾಡಿಕೊಳ್ಳಿ.
ತಿಜೋರಿಯಲ್ಲಿದ್ದ ₹2000 ನೋಟು ಹೊರಗೆ!
2016ರಲ್ಲಿ 500, 1000ರ ನೋಟ್ ಅಮಾನ್ಯ ಅಥವಾ ನೋಟ್ ಬ್ಯಾನ್ (Note Ban) ಬಳಿಕ 2000 ಮುಖಬೆಲೆಯ ನೋಟ್ ಚಲಾವಣೆಗೆ ಬಂತು. ಆದ್ರೆ ಆರ್‌ಬಿಐ ಭಾರತದಲ್ಲಿ ಚಲಾವಣೆಯಲ್ಲಿದ್ದ 2000 ರೂ. ನೋಟ್ ಚಲಾವಣೆ ಸ್ಥಗಿತಗೊಳಿಸಿದೆ (2000 Note). ವಾಪಸ್ ಪಡೆಯಲು ಆರ್‌ಬಿಐ ಬ್ಯಾಂಕ್‌ಗಳಿಗೆ ಆದೇಶ ನೀಡಿದೆ. ಈಗ ಜನ 2000 ರೂ. ನೋಟ್‌ಗಳನ್ನ ಬ್ಯಾಂಕ್‌ಗೆ ವಾಪಸ್ ಮಾಡುವ ಬದಲು ಝೊಮ್ಯಾಟೋ ಮತ್ತು ಪೆಟ್ರೋಲ್ ಬಂಕ್‌ಗಳಿಗೆ ನೀಡುತ್ತಿದ್ದಾರಂತೆ. ಈ ಮೂಲಕ ಮನೆ ತಿಜೋರಿಯಲ್ಲಿದ್ದ ₹2000 ನೋಟು ಈಗ ಹೊರ ಬರ್ತಿದೆ! ಆದರೆ ಇದರಿಂದಲೇ ದೊಡ್ಡ ಸಮಸ್ಯೆ ಕೂಡ ಎದುರಾಗಿದೆ.

ಪೆಟ್ರೋಲ್ ಬಂಕ್‌ನಲ್ಲಿ 2,000 ಮುಖಬೆಲೆ ನೋಟುಗಳ ಹವಾ ಶುರುವಾಗಿದೆ. ಈ ರೀತಿ ಗ್ರಾಹಕರು ಬರೀ 2,000 ಮುಖಬೆಲೆ ನೋಟುಗಳನ್ನೇ ಕೊಡುತ್ತಿದ್ದು ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನೂ ರೊಚ್ಚಿಗೆಬ್ಬಿಸಿದ್ದಾರೆ. ಚಿಲ್ಲರೆಗೆ ಬೆಂಗಳೂರು ಸೇರಿ ದೇಶದ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ಕಿರಿಕ್ ಜೋರಿದೆ. ಇದರ ಜೊತೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಮಹತ್ವದ ಆದೇಶ ಹೊರಬಿದ್ದಿದೆ.












Click it and Unblock the Notifications