Pawan Kalyan: ನನ್ನ ರಾಜ್ಯ ಸಂಕಷ್ಟದಲ್ಲಿ ನನಗೆ ಸಂಬಳ ಬೇಡ ಎಂದ ಡಿಸಿಎಂ ಪವನ್ ಕಲ್ಯಾಣ್
ಆಂಧ್ರ ಪ್ರದೇಶದ ಅನಿಶ್ಚಿತ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ತಮ್ಮ ಸಂಬಳ ಮತ್ತು ಕಚೇರಿಗೆ ಹೊಸ ಪೀಠೋಪಕರಣ ಸೇರಿದಂತೆ ಯಾವುದೇ ವಿಶೇಷ ಭತ್ಯೆಗಳನ್ನು ಸ್ವೀಕರಿಸಲು ನಿರಾಕರಿಸಿರುವುದಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸೋಮವಾರ ಹೇಳಿದ್ದಾರೆ.
ಡಿಸಿಎಂ ಕಚೇರಿಗೆ ಹೊಸ ಪೀಠೋಪಕರಣ, ಕಚೇರಿ ನವೀಕರಣ ಮಾಡುವ ಬಗ್ಗೆ ಅಧಿಕಾರಿಗಳು ಕೇಳಿದ್ದು, ಪವನ್ ಕಲ್ಯಾಣ್ ಎಲ್ಲಾ ಸವಲತ್ತುಗಳನ್ನು ತಿರಸ್ಕರಿಸಿದ್ದಾರೆ.

ಅಧಿಕಾರಿಗಳು ಕ್ಯಾಂಪ್ ಆಫೀಸ್ ನವೀಕರಣ ಮತ್ತು ರಿಪೇರಿ ಬಗ್ಗೆ ಏನು ಮಾಡಬೇಕೆಂದು ಕೇಳಿದರು. ಏನನ್ನೂ ಮಾಡಬೇಡಿ ಮತ್ತು ಸುಮ್ಮನೆ ಬಿಡಿ ಎಂದು ನಾನು ಅವರಿಗೆ ಹೇಳಿದೆ. ಯಾವುದೇ ಹೊಸ ಪೀಠೋಪಕರಣಗಳನ್ನು ಖರೀದಿಸದಂತೆ ನಾನು ಅವರಿಗೆ ಹೇಳಿದ್ದೇನೆ ಮತ್ತು ಅಗತ್ಯವಿದ್ದರೆ ಅದನ್ನು ನಾನೇ ತರುತ್ತೇನೆ ಎಂದು ಕಲ್ಯಾಣ್ ಅವರು ಕಲ್ಯಾಣ ಪಿಂಚಣಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸಭೆಯನ್ನುದ್ದೇಶಿಸಿ ಹೇಳಿದರು.
ಮೂರು ದಿನಗಳ ಕಾಲ ಸದನಕ್ಕೆ ಹಾಜರಾಗಲು ₹ 35,000 ಸಂಬಳಕ್ಕೆ ಸಂಬಂಧಿಸಿದ ದಾಖಲೆಗಳ ಮೇಲೆ ಸಹಿ ಪಡೆಯಲು ಸೆಕ್ರೆಟರಿಯೇಟ್‌ನ ಅಧಿಕಾರಿಗಳು ಬಂದಿದ್ದರು ಎಂದು ಪವನ್ ಕಲ್ಯಾಣ್ ಮಾಹಿತಿ ನಿಡಿದ್ದು, ಆದರೆ ನಾನು ಸಂಬಳ ಪಡೆಯುವುದಿಲ್ಲ ಎಂದಿರುವುದಾಗಿ ತಿಳಿಸಿದರು.
ಪವನ್ ಕಲ್ಯಾಣ್ ಅವರು ಸಚಿವರಾಗಿ ನೇತೃತ್ವದ ಪಂಚಾಯತ್ ರಾಜ್ ಇಲಾಖೆಗೆ ಸಾಕಷ್ಟು ಹಣದ ಕೊರತೆಯಿದ್ದು, ಇಂತಹ ಸಂದರ್ಭದಲ್ಲಿ ನಾನು ಈ ಸವಲತ್ತುಗಳನ್ನು ಪಡೆಯವುದಿಲ್ಲ ಎಂದು ಹೇಳಿದರು.
ಹಿಂದಿನ ಸರ್ಕಾರದ ಬಗ್ಗೆ ಟೀಕೆ
ರಾಜ್ಯ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ 600 ಕೋಟಿ ರೂಪಾಯಿ ಖರ್ಚು ಮಾಡಿ ರಿಷಿಕೊಂಡ ಪ್ಯಾಲೆಸ್ ನಿರ್ಮಿಸಬೇಕಾದ ಅವಶ್ಯಕತೆ ಏನಿತ್ತು ಎಂದು ಪವನ್ ಕಲ್ಯಾಣ್ ಪ್ರಶ್ನಿಸಿದ್ದಾರೆ.
ನಮ್ಮದು ಕರಪ್ಶನ್ ಗವರ್ನಮೆಂಟ್ ಅಲ್ಲ, ಕರೆಕ್ಷನ್ ಗವರ್ನಮೆಂಟ್ ಎಂದು ಹೇಳಿದ ಅವರು, ಕಳೆದ ಸರ್ಕಾರ ಮಾಡಿದ ತಪ್ಪನ್ನು ಸರಿಮಾಡುತ್ತೇವೆ ಎಂದು ಹೇಳಿದ್ದಾರೆ. ಪಿಠಾಪುರದಲ್ಲಿ ಸ್ವಂತ ಮನೆ ಕಟ್ಟಲು ಜಾಗ ಹುಡುಕುತ್ತಿದ್ದೇನೆ, ಇಲ್ಲೇ ಮನೆ ನಿರ್ಮಾಣ ಮಾಡಿಕೊಂಡು ಕ್ಷೇತ್ರದ ಜನರ ಕೆಲಸ ಮಾಡುತ್ತೇನೆ ಎಂದರು.
ತನ್ನ 25 ವರ್ಷದ ಸಿನಿಮಾ ವೃತ್ತಿಯಲ್ಲಿ ಸುಮಾರು 100 ಕೋಟಿಗೆ ಹೆಚ್ಚು ಟಾಕ್ಸ್ ಕಟ್ಟಿದ್ದೇನೆ. ಆದರೆ ತನ್ನ ಆಡಿಟರ್ ಒಂದು ಗಂಟೆಗಿಂತ ಹೆಚ್ಚು ಕೂತಿಲ್ಲ. ಆದರೆ ಮೊನ್ನೆ ಪಂಚಾಯತ್‌ರಾಜ್ ಇಲಾಖೆ ಆಡಿಟ್ ಲೆಕ್ಕದ ಮೇಲೆ ಒಂದು ಸೆಷನ್‌ನಲ್ಲಿ ಸುಮಾರು 4-5 ಗಂಟೆಗೆ ಕುಳಿತಿದ್ದಾರೆ. 3000-4000 ಕೋಟಿ ಅನುದಾನ ಮಾಯವಾಗಿದೆ ಎಂದು ತಿಳಿದು ಬಂದಿದೆ. ಕಳೆದ ಸರ್ಕಾರ ಬರೀ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications