Chandrayaan-3: ಭಾರತ ಚಂದ್ರನ ಮೇಲೆ ಇಳಿದಿದೆ ಆದರೆ ಪಾಕಿಸ್ತಾನ ಮಾತ್ರ ಭಿಕ್ಷೆ ಬೇಡುತ್ತಿದೆ: ನವಾಜ್ ಷರೀಫ್
ಭಾರತ 'ಚಂದ್ರಯಾನ-3' ಮೂಲಕ, ಭೂಮಿ ಉಪಗ್ರಹವಾದ ಚಂದ್ರನ ದಕ್ಷಿಣ ಧ್ರುವದ ಮೇಲೆ ರೋವರ್ ಇಳಿಸಿದೆ. ಈ ಬಗ್ಗೆ ಇಡೀ ಜಗತ್ತೇ ಹೆಮ್ಮೆ ವ್ಯಕ್ತಪಡಿಸಿದೆ. ಆದರೆ ಭಾರತ ಮಾಡಿದ ಸಾಧನೆಯ ಬಗ್ಗೆ ಪಾಕಿಸ್ತಾನ ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾಡಿ, ಚಂದ್ರಯಾನ-3 ಯಶಸ್ಸಿನ ಬಗ್ಗೆ ವ್ಯಂಗ್ಯವಾಡಿದ್ದರು. ಹೀಗಿದ್ದಾಗಲೇ ಪಾಕಿಸ್ತಾನದ ಮಾಜಿ ಪ್ರಧಾನಿ ಭಾರತವನ್ನು ಹೊಗಳುವ ಮೂಲಕ ಪಾಕಿಸ್ತಾನ ಭಿಕ್ಷೆ ಬೇಡುತ್ತಿದೆ ಎಂದಿದ್ದಾರೆ.
ಹೌದು, ತಿನ್ನಲು ಒಂದು ಹಿಡಿ ಗೋಧಿ ಹಿಟ್ಟು ಇಲ್ಲದೆ ನರಳುತ್ತಿರುವ ಪಾಕಿಸ್ತಾನಕ್ಕೆ ಭಾರತ ಮಾಡಿದ ಸಾಧನೆ ಬಗ್ಗೆ ಹೊಟ್ಟೆ ಉರಿ. ಅದರಲ್ಲೂ ಅಲ್ಲಿನ ರಾಜಕಾರಣಿಗಳು ಇದ್ದಾರಲ್ವಾ ಅವರಿಗೆ ಯಾವ ಕಾಲಕ್ಕೂ ಬುದ್ಧಿ ಬರೋದಿಲ್ಲ ಬಿಡಿ. ಹೀಗೆ ಭಾರತ 'ಚಂದ್ರಯಾನ-3' ಲ್ಯಾಂಡರ್ ಅನ್ನ ಯಶಸ್ವಿಯಾಗಿ ಇಳಿಸಿದ್ದ ದಿನ ಪಾಕಿಸ್ತಾನ ರಾಜಕಾರಣಿಗಳು ವ್ಯಂಗ್ಯವಾಗಿ ಮಾತನಾಡಿದ್ದರು. ಈಗ ಅವರಿಗೆಲ್ಲಾ ಸರಿಯಾಗಿ ಉಗಿದಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್, ಪಾಕಿಸ್ತಾನದ ಪರಿಸ್ಥಿತಿ ಹೀನಾಯವಾಗಿದೆ ಎಂದಿದ್ದಾರೆ.

ಹಣಕ್ಕಾಗಿ ಭಿಕ್ಷೆ ಬೇಡುತ್ತಿದೆಯಂತೆ ಪಾಕಿಸ್ತಾನ!
ಅಷ್ಟಕ್ಕೂ ಭಾರತ ಚಂದ್ರನ ಮೇಲೆ ಇಳಿದ್ದರೆ ಪಾಕಿಸ್ತಾನ ಮಾತ್ರ ವಿದೇಶಗಳ ಬಳಿ ಹಣಕ್ಕೆ ಭಿಕ್ಷೆ ಬೇಡುತ್ತಿದೆ ಎಂದು, ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮದೇ ದೇಶದ ಬಂಡವಾಳ ಬಯಲು ಮಾಡಿದ್ದಾರೆ. ಹಲವು ವರ್ಷದಿಂದ ಪಾಕ್ ಆರ್ಥಿಕತೆ ಕುಸಿಯುತ್ತಿದೆ. ಹಣದುಬ್ಬರ ಎರಡಂಕಿ ದಾಟಿದ್ದು, ಬಡವರ ಮೇಲೆ ಸರ್ಕಾರ ಆರ್ಥಿಕ ಒತ್ತಡ ಹಾಕುತ್ತಿದೆ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಅಂದರೆ ಪಿಎಂಎಲ್-ಎನ್ ಪಕ್ಷದ ನಾಯಕನೂ ಆಗಿರುವ ನವಾಜ್ ಷರೀಫ್ ಆರೋಪ ಮಾಡಿದ್ದಾರೆ.
ಜಿ20 ಶೃಂಗಸಭೆ ಬಗ್ಗೆಯೂ ವಾಗ್ದಾಳಿ!
ಹೀಗೆ ತಮ್ಮ ಮಾತು ಮುಂದುವರಿಸಿದ ನವಾಜ್ ಷರೀಫ್, ಭಾರತ ಚಂದ್ರನ ಮೇಲೆ ಇಳಿದಿದೆ ಅಲ್ಲದೆ ಜಿ20 ಶೃಂಗಸಭೆ ಕೂಡ ಯಶಸ್ವಿಯಾಗಿ ಆಯೋಜಿಸಿದೆ. ಆದ್ರೆ ಪಾಕಿಸ್ತಾನಕ್ಕೆ ಇಂತಹ ಸಾಧನೆ ಮಾಡಲು ಆಗಲ್ವಾ? ದೇಶದಲ್ಲಿ ಅರಾಜಕತೆ, ಹಣದುಬ್ಬರ ಹೆಚ್ಚಲು ಯಾರು ಕಾರಣ? ಇದಕ್ಕೆ ಯಾರು ಜವಾಬ್ದಾರರು? ಎಂದು ನವಾಜ್ ಷರೀಫ್ ಪ್ರಶ್ನೆ ಮಾಡಿದ್ದಾರೆ. ಇದು ಪಾಕ್ ಜನರಲ್ಲಿ ಕಿಚ್ಚು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ನವೆಂಬರ್‌ನಲ್ಲಿ ಪಾಕಿಸ್ತಾನ ಸಂಸತ್ ಚುನಾವಣೆ ನಡೆಯುವ ಸಾಧ್ಯತೆ ಇರುವಾಗ, ನವಾಜ್ ಷರೀಫ್ ಮಾತು ಕಿಡಿ ಹೊತ್ತಿಸಿದೆ.
ಮಾಜಿ ಪ್ರಧಾನಿ ವಾಜಪೇಯಿ ಬಗ್ಗೆ ಹೊಗಳಿಕೆ
ಪಾಕಿಸ್ತಾನದಲ್ಲಿ ನಡೆದ ಪಿಎಂಎಲ್-ಎನ್ ಪಕ್ಷದ ಕಾರ್ಯಕ್ರಮದಲ್ಲಿ ನವಾಜ್ ಲಂಡನ್‌ನಿಂದ ವಿಡಿಯೋ ಭಾಷಣ ಮಾಡಿದ್ದಾರೆ. ಈ ವೇಳೆ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನ ರಾಜಕೀಯ ಎಷ್ಟು ಗಬ್ಬೆದ್ದು ಹೋಗಿದೆ ಎಂಬುದನ್ನು ನವಾಜ್ ಷರೀಫ್ ವಿವರಿಸಿದ್ದಾರೆ. ಅಲ್ಲದೆ ಪಾಕ್ ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಬಗ್ಗೆ ಕೆಂಡವಾಗಿದ್ದಾರೆ ಪಾಕ್ ಮಾಜಿ ಪ್ರಧಾನಿ.

ವಾಜಪೇಯಿ ಅವರು ಪ್ರಧಾನಿಯಾಗಿದ್ದ ವೇಳೆ ಭಾರತ ಬಳಿ ಕೇವಲ ಒಂದು ಶತಕೋಟಿ ಅಂದ್ರೆ ₹8,300 ಕೋಟಿ ಇತ್ತು. ಈಗ ಭಾರತ ಬಳಿ ಸುಮಾರು 600 ಶತಕೋಟಿ ಅಮೆರಿಕನ್ ಡಾಲರ್ ಹಣ ಇದೆ, ಆದ್ರೆ ಪಾಕ್ ಮಾತ್ರ ಸಾಲಕ್ಕಾಗಿ ಒದ್ದಾಡುತ್ತಿದೆ ಎಂದಿದ್ದಾರೆ ನವಾಜ್ ಷರೀಫ್. ಅಲ್ಲದೆ ಭಾರತ ಇಷ್ಟು ದೊಡ್ಡದಾಗಿ ಬೆಳೆದಿದ್ದರೆ ಪಾಕಿಸ್ತಾನ ಜಗತ್ತಿನ ದೇಶಗಳ ಬಳಿ ಸಾಲಕ್ಕೆ ಭಿಕ್ಷೆ ಬೇಡುತ್ತಿದೆ. ದೇಶವನ್ನು ಇಂತಹ ದುಸ್ಥಿತಿಗೆ ತಳ್ಳಿದವರು ನಿಜವಾಗಿಯೂ ಅಪರಾಧಿಗಳು ಎಂದು ನವಾಜ್ ಷರೀಫ್ ಗುಡುಗಿದ್ದಾರೆ. ಇದು ಪಾಕಿಸ್ತಾನದ ಚುನಾವಣಾ ಗಿಮಿಪ್ ಅಂತಾ ಹೇಳಲಾಗಿದ್ದರೂ, ಪಾಕಿಸ್ತಾನದ ಬಂಡವಾಳ ಮಾತ್ರ ಈಗ ಜಗತ್ತಿಗೇ ಗೊತ್ತಾಗಿದೆ.
Today India has reached the Moon, the G20 meeting was held in India, and Pakistan is begging countries around the world for a billion dollars- Former PM of Pakistan Nawaz Sharif pic.twitter.com/nGNOwt7wys
— Megh Updates 🚨™ (@MeghUpdates) September 19, 2023
ಭಾರತದ ಇಸ್ರೋ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸಿತ್ತು. ಈಗಾಗಲೇ ಚಂದ್ರನ ಮೇಲೆ ಇರುವ ಅದಿರು ಮತ್ತು ಖನಿಜದ ಅಧ್ಯಯನ ಆರಂಭಿಸಿರುವ ಭಾರತ, ಜಗತ್ತಿನ ಯಾವುದೇ ದೇಶ ಇದುವರೆಗೂ ಮಾಡದ ಸಾಧನೆ ಮಾಡಿದೆ. ಇದೇ ವೇಳೆ ಭಾರತದ ಶತ್ರು ರಾಷ್ಟ್ರ ಕೂಡ ಭಾರತವನ್ನು ಹೊಗಳಿದೆ. ಅದರಲ್ಲೂ ಪಾಕಿಸ್ತಾನ ಮಾಜಿ ಪ್ರಧಾನಿಯ ಮಾತು ಸಂಚಲನ ಸೃಷ್ಟಿಸಿದೆ.












Click it and Unblock the Notifications