Delhi Airport: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ ಕ್ಲೋಸ್: ತೊಂದರೆ ಅನುಭವಿಸಿದವರು ನೂರು, ಇನ್ನೂರಲ್ಲ.. ಸಾವಿರಾರು ಮಂದಿ!
ನವದೆಹಲಿ, ಜುಲೈ. 01: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗಿದೆ. ಶುಕ್ರವಾರ ಮೇಲ್ಛಾವಣಿ ಕುಸಿತದ ನಂತರ ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್ 1 (ಟಿ1) ಅನ್ನು ಮುಚ್ಚಿದ್ದಾರೆ. ಇದರಿಂದ ಬರೋಬ್ಬರು 22,615 ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಇಂಡಿಗೋ (9,431) ಮತ್ತು ಸ್ಪೈಸ್‌ಜೆಟ್ (541) ವಿಮಾನಗಳಲ್ಲಿ ಬುಕ್ ಮಾಡಿದ 9,972 ಪ್ರಯಾಣಿಕರಿಗೆ ಮರುಪಾವತಿ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇನ್ನೂ 196 ಪ್ರಯಾಣಿಕರ ಮರುಪಾವತಿ ಬಾಕಿ ಉಳಿದಿದೆ.

ಶುಕ್ರವಾರದಂದು ಟರ್ಮಿನಲ್ 1 (T1) ಮುಚ್ಚಿದ ಬಳಿಕ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಯಿತು. ಏಕೆಂದರೆ ವಾರಾಂತ್ಯದಲ್ಲಿ ಯಾವುದೇ ರದ್ದತಿಗಳಿಲ್ಲದ ಕಾರಣ ಕಾರ್ಯಾಚರಣೆಗಳನ್ನು ವಿಮಾನ ನಿಲ್ದಾಣದ ಟರ್ಮಿನಲ್ 2 (T2) ಮತ್ತು 3 (T3) ಗೆ ವಿಮಾನಗಳನ್ನು ಸ್ಥಳಾಂತರಿಸಲಾಯಿತು.
ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರು ವಿಮಾನ ನಿಲ್ದಾಣ ಕಾರ್ಯಾಚರಣೆ ನಿಯಂತ್ರಣ ಕೇಂದ್ರಕ್ಕೆ ಭೇಟಿ ನೀಡಿದ್ದರು. T1 ನಿಂದ T2 ಮತ್ತು T3 ಗೆ ವಿಮಾನಗಳನ್ನು ಸ್ಥಳಾಂತರಿಸಿದ ನಂತರ ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಿದರು. ಸಚಿವಾಲಯದ ಅಧಿಕಾರಿಗಳು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA), ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS), ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (DIAL), ಮತ್ತು ಏರ್ಲೈನ್ ನಿರ್ವಾಹಕರನ್ನು ಭೇಟಿಯಾದರು.

"ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚಿದ ಪ್ರಯಾಣಿಕರ ಸಂಖ್ಯೆಯನ್ನು ನಿರ್ವಹಿಸಲು ಹೆಚ್ಚುವರಿ ಮಾನವಶಕ್ತಿಯನ್ನು ನಿಯೋಜಿಸಲು ವಿವರವಾದ ಚರ್ಚೆ ಮಾಡಲಾಗಿದೆ. ಇದರ ಜೊತೆಗೆ ಘಟನೆ ಮತ್ತು ಇತರ ವಿಷಯಗಳ ಬಗ್ಗೆಯೂ ಸಂಪೂರ್ಣ ಚರ್ಚೆ ನಡೆಸಲಾಯಿತು" ಎಂದು ವಾಯುಯಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಭಾರೀ ಮಳೆ ಮತ್ತು ಗಾಳಿಯ ನಡುವೆ ವಿಮಾನ ನಿಲ್ದಾಣದ ಛಾವಣಿ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದರು ಮತ್ತು ಎಂಟು ಮಂದಿ ಗಾಯಗೊಂಡಡಿದ್ದಾರೆ. ಘಟನೆ ಬಳಿಕ ಶುಕ್ರವಾರ T1 ನಿಂದ ವಿಮಾನ ಕಾರ್ಯಾಚರಣೆಯನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಲಾಯಿತು. ಭಾರೀ ಮಳೆಯೇ ಕುಸಿತಕ್ಕೆ ಪ್ರಾಥಮಿಕ ಕಾರಣ ಎಂದು ಹೇಳಿರುವ ವಾಯುಯಾನ ಸಚಿವಾಲಯ, ಘಟನೆಯ ತನಿಖೆಗೆ ತಾಂತ್ರಿಕ ಸಮಿತಿಯನ್ನು ರಚಿಸಿದೆ. ಮೃತ ವ್ಯಕ್ತಿಯ ಕುಟುಂಬಕ್ಕೆ 20 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ 3 ಲಕ್ಷ ಪರಿಹಾರ ಘೋಷಿಸಿದೆ.












Click it and Unblock the Notifications