INDIA VS NDA: ಆಗಸ್ಟ್ 31ರಂದು 'ಇಂಡಿಯಾ' ಮುಂಬೈ ಮೀಟಿಂಗ್!
ಮುಂಬೈ: ಎನ್‌ಡಿಎ ವಿರುದ್ಧ ಇಂಡಿಯಾ ಒಕ್ಕೂಟ ಕಟ್ಟಿಕೊಂಡಿರುವ ವಿರೋಧ ಪಕ್ಷಗಳು ಮಹತ್ವದ ಸಭೆಗೆ ಸಿದ್ಧವಾಗಿವೆ. ಅದ್ರಲ್ಲೂ ಬೆಂಗಳೂರಿನ ಸಭೆ ಬಳಿಕ ಹೊಸ ಹುರುಪಿನಲ್ಲಿ ಗುಡುಗುತ್ತಿರುವ ವಿರೋಧ ಪಕ್ಷಗಳ ನಾಯಕರಿಗೆ ಮುಂಬೈ ಸಭೆ ನಿರ್ಣಾಯಕ. ಆದರೆ ಸಭೆ ದಿನಾಂಕ ನಿಗದಿ ತಡವಾದರೂ ಈಗ ಸಿಕ್ಕ ಮಾಹಿತಿ ಪ್ರಕಾರ ಆಗಸ್ಟ್ 31ಕ್ಕೆ 'ಇಂಡಿಯಾ'ದ ಮುಂಬೈ ಮೀಟಿಂಗ್ ಪಕ್ಕಾ ಎನ್ನಲಾಗಿದೆ.
ಹೌದು ಇನ್ನು 9 ತಿಂಗಳು ಮಾತ್ರ ಬಾಕಿ. ಆ ಬಳಿಕ ಜಗತ್ತೇ ಕಾಯುತ್ತಿರುವ ಸಮಯ ಬರಲಿದೆ. ಜಾಗತಿಕ ಮಟ್ಟದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಹೀಗಾಗಿ ಯುಪಿಎ ಒಕ್ಕೂಟದಲ್ಲಿ ಇದ್ದ ಪಕ್ಷಗಳು 'ಇಂಡಿಯಾ'ದ ಮೂಲಕ ಹೊಸ ಒಕ್ಕೂಟ ರಚಿಸಿವೆ. ಇದೀಗ 'ಎನ್‌ಡಿಎ' ಮತ್ತು 'ಇಂಡಿಯಾ' ನಡುವೆ ಬೃಹತ್ ಕಾದಾಟಕ್ಕೆ ವೇದಿಕೆ ಸಿದ್ಧವಾಗಿದೆ. ಹೀಗಾಗಿ ಮುಂಬೈನಲ್ಲಿ ನಡೆಯಲಿರುವ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಯಾವಾಗ ಸಭೆ ನಡೆಯಬಹುದು? ಎಂಬ ಪ್ರಶ್ನೆ ಕೂಡ ಉದ್ಭವಿಸಿತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಂತಾಗಿದೆ.

'ಇಂಡಿಯಾ'ಗೆ ಮುಂಬೈ ಸಭೆ ನಿರ್ಣಾಯಕ!
ಅಂದಹಾಗೆ ಮುಂಬೈನಲ್ಲಿ ನಡೆಯುವ ಸಭೆಯಲ್ಲಿ 11 ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಇದರ ಜೊತೆ ಮಿತ್ರ ಪಕ್ಷಗಳಲ್ಲಿ ಸ್ಥಾನ ಹಂಚಿಕೆ, ಚುನಾವಣೆ ಸಿದ್ಧತೆ ಸೇರಿದಂತೆ ಪ್ರಚಾರ ನಿರ್ವಹಣೆ ಮತ್ತಿತರ ಮಹತ್ವದ ವಿಷಯಗಳ ಕುರಿತಾಗಿ ಚರ್ಚೆ ನಡೆಯುವ ಸಾಧ್ಯತೆ ಇದೆ. 'ಇಂಡಿಯಾ'ಗೆ ಇದೇ ಕಾರಣಕ್ಕೆ ಮುಂಬೈ ಮೀಟಿಂಗ್ ಅತ್ಯಂತ ಮಹತ್ವದ್ದಾಗಿದೆ. ಇನ್ನು ಮೈತ್ರಿಕೂಟದ 3ನೇ ಸಭೆ ಇದಾಗಲಿದ್ದು, ಮೊದಲ ಸಭೆ ಬಿಹಾರದ ಪಾಟ್ನಾದಲ್ಲಿ ನಡೆದಿತ್ತು. ಬಳಿಕ 2ನೇ ಮೀಟಿಂಗ್ ಬೆಂಗಳೂರಲ್ಲಿ ನಡೆದಿತ್ತು. ಇದೇ ಸಭೆಯಲ್ಲಿ ಮೈತ್ರಿಕೂಟಕ್ಕೆ 'ಇಂಡಿಯಾ' ಎಂದು ನಾಮಕರಣ ಮಾಡಲಾಗಿತ್ತು.
ಯಾವೆಲ್ಲಾ ಪಕ್ಷಗಳು 'ಇಂಡಿಯಾ' ಒಕ್ಕೂಟಕ್ಕೆ?
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಜೆಡಿ(ಯು), ಆರ್‌ಜೆಡಿ, ಎನ್‌ಸಿಪಿ, ರಾಷ್ಟ್ರೀಯ ಲೋಕದಳ, ಜಮ್ಮು ಕಾಶ್ಮೀರ್ ನ್ಯಾಷನಲ್ ಕಾನ್ಫರೆನ್ಸ್, ಅಪ್ನಾ ದಳ್ (ಕಮೆರಾವಾಡಿ), ಎಸ್‌ಪಿ, ಶಿವಸೇನಾ (ಉದ್ಧವ್ ಠಾಕ್ರೆ), ಜೆಎಂಎಂ, ಪಿಡಿಪಿ, ಸಿಪಿಐ, ಸಿಪಿಐ (ಎಂ), ಸಿಪಿಐ (ಎಂಎಲ್), ರೆವೆಲ್ಯುಷನರಿ ಸೋಷಿಯಲಿಸ್ಟ್ ಪಾರ್ಟಿ, ಆಲ್ ಇಂಡಿಯಾ ಫಾರ್ವಡ್ ಬ್ಲಾಕ್, ಎಂಡಿಎಂಕೆ, ವಿಸಿಕೆ (ವಿಡುದಲೈ ಚಿರುತೈಗಳ್ ಕಚ್ಚಿ), ಕೆಎಂಡಿಕೆ (ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ), ಎಂಎಂಕೆ (ಮಣಿತನೆಯ ಮಕ್ಕಳ್ ಕಚ್ಚಿ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೇರಿದಂತೆ ಕೇರಳ ಕಾಂಗ್ರೆಸ್ (ಮಣಿ) ಹಾಗೂ ಕೇರಳ ಕಾಂಗ್ರೆಸ್ (ಜೋಸೆಫ್) ಪಕ್ಷಗಳು 'ಇಂಡಿಯಾ' ಒಕ್ಕೂಟದ ಭಾಗವಾಗಲಿವೆ.

ಕಷ್ಟದ ಹಾದಿಯಲ್ಲಿ ಎನ್‌ಡಿಎ ಪಯಣ!
ಅತ್ತ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಒಂದಾಗುತ್ತಿವೆ. ಆದ್ರೆ ಈ ಸಂದರ್ಭದಲ್ಲೇ ಬಿಜೆಪಿ ಕೂಡ ಅಲರ್ಟ್ ಆಗಿದೆ. ಅದರಲ್ಲೂ ಕರ್ನಾಟಕ ಚುನಾವಣೆ ಭೀಕರ ಸೋಲು ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಸಂದೇಶ ನೀಡಿದಂತೆ ಕಾಣುತ್ತಿದೆ. ತನ್ನ ಒಕ್ಕೂಟ ಬಿಟ್ಟಿದ್ದ ಹಿಂದಿನ ಗೆಳೆಯರನ್ನು ಬಿಜೆಪಿ ಮತ್ತೆ ಸಂಪರ್ಕ ಮಾಡಿದೆ. ಈ ನಡುವೆ 'ಇಂಡಿಯಾ' ಒಕ್ಕೂಟದಲ್ಲೂ ಸ್ಥಾನ ಹಂಚಿಕೆ ಗೊಂದಲ ಏರ್ಪಡುವ ಸಾಧ್ಯತೆ ಇರುವ ಕಾರಣ, ಸಮಯನ್ವಯ ಸಮಿತಿ ರಚನೆಗೆ ನಿರ್ಧರಿಸಲಾಗಿದೆ. ಮುಂಬೈ ಸಭೆಯಲ್ಲಿ ಸಮನ್ವಯ ಸಮಿತಿ ಫೈನಲ್ ಆಗಲಿದೆ.

'ಎನ್‌ಡಿಎ' ಮತ್ತು 'ಇಂಡಿಯಾ' ಮಧ್ಯೆ ಗೇಮ್ ಶುರುವಾಗಿದೆ. ಇಲ್ಲಿ ಗೆಲ್ಲೋದು ಯಾರು ಹಾಗೇ ಸೋಲೋದು ಯಾರು? ಅನ್ನೋದನ್ನು ಮತದಾರ ಪ್ರಭು ಡಿಸೈಡ್ ಮಾಡಲಿದ್ದಾನೆ. ಆದರೆ ಅದಕ್ಕೂ ಮೊದಲು ಮತದಾರರ ಮನವೊಲಿಕೆಗೆ ಎರಡೂ ಒಕ್ಕೂಟಗಳು ಪ್ರಯತ್ನ ಮುಂದುವರಿಸಲಿವೆ. ಹೀಗಾಗಿ 2024ರ ಲೋಕಸಭೆ ಚುನಾವಣೆ ಹೈವೋಲ್ಟೇಜ್ ಆಗೋದು ಗ್ಯಾರಂಟಿ. ಭಾರತದ ಚುನಾವಣೆ ಜಗತ್ತಿನ ಗಮನ ಸೆಳೆಯೋದು ಪಕ್ಕಾ.












Click it and Unblock the Notifications