Noel Tata: ರತನ್ ಟಾಟಾ ಬಳಿಕ ಟಾಟಾ ಸಾಮ್ರಾಜ್ಯಕ್ಕೆ ಇವರೇ ಉತ್ತರಾಧಿಕಾರಿ
ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಅವರು ನಿಧನರಾದ ಒಂದು ದಿನದ ಬಳಿಕ ಅವರ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗಿದೆ. ರತನ್ ಟಾಟಾ ಅವರ ಮಲಸಹೋದರ ನೋಯಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಿಎನ್‌ಬಿಸಿ-ಟಿವಿ 18 ವರದಿ ಮಾಡಿದೆ.
ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದ ರತನ್ ಟಾಟಾ 87ನೇ ವಯಸ್ಸಿನಲ್ಲಿ ಬುಧವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಗುರುವಾರ ಅವರ ಅಂತ್ಯಕ್ರಿಯೆ ಕಾರ್ಯಗಳನ್ನು ನಡೆಸಲಾಯಿತು. ಶುಕ್ರವಾರ ರತನ್ ಟಾಟಾ ಅವರ ಉತ್ತರಾಧಿಕಾರಿ ನೇಮ ಮಾಡಲು ಟಾಟಾ ಟ್ರಸ್ಟ್‌ಗಳ ಮಂಡಳಿ ಸಭೆ ನಡೆಸಿದ್ದು, ನೋಯಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್‌ಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.

ಟಾಟಾ ಟ್ರಸ್ಟ್ ಟಾಟಾ ಸನ್ಸ್‌ನ 66 ಪ್ರತಿಷತ ಷೇರುಗಳ ಮಾಲೀಕತ್ವ ಹೊಂದಿರುವುದರಿಂದ, ಟಾಟಾ ಸಮೂಹದ ಒಡೆತನ ನೋಯಲ್ ಟಾಟಾ ಅವರಿಗೆ ಸಿಕ್ಕಿದೆ. ಟಾಟಾ ಸನ್ಸ್ ಪ್ರೈ. ಲಿಮಿಟೆಡ್ ಎಲ್ಲಾ ಇತರ ವಿವಿಧ ಟಾಟಾ ಕಂಪನಿಗಳ ಮಾತೃ ಸಂಸ್ಥೆಯಂತೆ ಕೆಲಸ ಮಾಡುತ್ತದೆ.
ಟಾಟಾ ಟ್ರಸ್ಟ್ಸ್, ಶಿಕ್ಷಣ, ಆರೋಗ್ಯ ಮತ್ತು ವಸತಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. ಇದನ್ನು ಮೊದಲು 1892 ರಲ್ಲಿ ಟಾಟಾ ಸಮೂಹದ ಸಂಸ್ಥಾಪಕ ಜೆಮ್‌ಶೆಡ್‌ಜಿ ಟಾಟಾ ಸ್ಥಾಪಿಸಿದರು. ಜೆಮ್‌ಶೆಡ್‌ಜಿ ಟಾಟಾ, ಟಾಟಾ ಸಂಸ್ಥೆಯ ಸಂಸ್ಥಾಪಕ ಮತ್ತು ನೋಯೆಲ್ ಮತ್ತು ರತನ್ ಟಾಟಾರ ಮುತ್ತಜ್ಜರಾಗಿದ್ದಾರೆ.
ನೋಯಲ್ ಟಾಟಾ ಯಾರು?
ನೋಯಲ್ ಟಾಟಾ ಅವರು ರತನ್ ಟಾಟಾ ಅವರ ತಂದೆಯ ಎರಡನೇ ಪತ್ನಿಯ ಮಗ. 67 ವರ್ಷದ ನೋಯಲ್ ಟಾಟಾ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಮಂಡಳಿಗಳ ಟ್ರಸ್ಟಿಗಳಲ್ಲಿ ಒಬ್ಬರು. ನೋಯಲ್ ಟಾಟಾ ಅವರೇ ಟಾಟಾ ಸಂಸ್ಥೆಯ ಮುಂದಿನ ಉತ್ತರಾಧಿಕಾರಿ ಎನ್ನುವುದು ಬಹುತೇಕ ಸ್ಪಷ್ಟವಾಗಿತ್ತಾದರೂ, ಇಂದು ಅಧಿಕೃತವಾಗಿ ಘೋಷಣೆಯಾಗಿದೆ.
ನೋಯಲ್ ಟಾಟಾ ಹಲವು ವರ್ಷಗಳಿಂದ ಟಾಟಾ ಗ್ರೂಪ್‌ನ ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಟೈಟಾಟ ಮತ್ತು ಟಾಟಾ ಸ್ಟೀಲ್ ಸಂಸ್ಥೆಗಳಿಗೆ ವೈಸ್ ಛೇರ್ಮನ್ ಕೂಡ ಆಗಿದ್ದಾರೆ. ಮುಖ್ಯವಾಗಿ ಫ್ಯಾಷನ್ ವಲಯದಲ್ಲಿ ಕೆಲಸ ಮಾಡುವ ಟ್ರೆಂಟ್ ಸಂಸ್ಥೆಯ ಅಧ್ಯಕ್ಷರಾಗಿ ನೋಯಲ್ ಟಾಟಾ ಕೆಲಸ ಮಾಡುತ್ತಿದ್ದಾರೆ.ವೋಲ್ಟಾಸ್ ಸಂಸ್ಥೆಯ ಮಂಡಳಿಯಲ್ಲಿ ಕೂಡ ಸ್ಥಾನ ಹೊಂದಿದ್ದು, ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಶನ್ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ.
2010-11ರಲ್ಲಿ ನೋಯಲ್ ಅವರನ್ನು ಟಾಟಾ ಇಂಟರ್ನ್ಯಾಷನಲ್ನ ಎಂಡಿಯಾಗಿ ನೇಮಿಸಲಾಗಿತ್ತು. ಬ್ರಿಟನ್ ಮತ್ತು ಫ್ರಾನ್ಸ್‌ನಲ್ಲಿ ಉನ್ನತ ವ್ಯಾಸಂಗ ಮಾಡಿರುವ ನೋಯಲ್ ಟಾಟಾ, ಮೊದಲು ಬ್ರಿಟನ್‌ನ ನೆಸ್ಲೆ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಅದಾದ ಬಳಿಕ ಟಾಟಾ ಗ್ರೂಪ್‌ನ ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡರು.












Click it and Unblock the Notifications