10ನೇ ಬಾರಿಗೆ ಸಿಎಂ ಅಗಿ ಇಂದು ನಿತೀಶ್ ಪ್ರಮಾಣವಚನ; ಮೋದಿ ಭಾಗಿ: ಈ ಬಾರಿ ಯಾರಿಗೆಲ್ಲಾ ಸಂಪುಟದಲ್ಲಿ ಸ್ಥಾನ?
ಪಾಟ್ನಾ,ನವೆಂಬರ್ 20: ಬಿಹಾರ ರಾಜಕೀಯಕ್ಕೆ ಇಂದು ಮಹತ್ವದ ಐತಿಹಾಸಿಕ ದಿನವಾಗಿದೆ. ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಗೆಲುವಿನ ನಂತರ ಹೊಸ ಸರ್ಕಾರ ರಚನೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ನಿತೀಶ್ ಕುಮಾರ್10 ನೇ ಬಾರಿಗೆ ಮುಖ್ಯಮಂತ್ರಿಯಾಗಿ ಇಂದು( ಗುರುವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹೌದು, ಎನ್‌ಡಿಎ ಭರ್ಜರಿ ಗೆಲುವಿನ ನಂತರ, ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನವು ಈ ಭವ್ಯ ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ಇಂದು ಬೆಳಗ್ಗೆ 11.30 ಕ್ಕೆ ಸಮಾರಂಭ ಆರಂಭವಾಗಲಿದೆ. ದೇಶಾದ್ಯಂತದ ಹಿರಿಯ ಎನ್‌ಡಿಎ ನಾಯಕರು ಭಾಗವಹಿಸಲು ಈಗಾಗಲೇ ಪಾಟ್ನಾದಲ್ಲಿ ಜಮಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಲವಾರು ಕೇಂದ್ರ ಸಚಿವರು, ಎಲ್ಲಾ ಎನ್ಡಿಎ ಘಟಕಗಳ ಮುಖ್ಯಸ್ಥರು ಮತ್ತು ಎನ್ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ, ಎನ್ಡಿಎ ತನ್ನ ಬಲವನ್ನು ಪ್ರದರ್ಶಿಸಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬುಧವಾರ ತಡರಾತ್ರಿ ಪಾಟ್ನಾಕ್ಕೆ ಆಗಮಿಸಿ ಆತ್ಮೀಯ ಸ್ವಾಗತ ಪಡೆದರು. ಪ್ರಧಾನಿ ನರೇಂದ್ರ ಮೋದಿ ಕೂಡ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ, ಬೆಳಗ್ಗೆ 11.15 ಕ್ಕೆ ಗಾಂಧಿ ಮೈದಾನಕ್ಕೆ ಆಗಮಿಸಲಿದ್ದಾರೆ. ಪ್ರಧಾನಿ ಮೋದಿ ಜೊತೆಗೆ, 11 ರಾಜ್ಯಗಳ ಹಲವಾರು ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಸಹ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ 20 ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಕೋಟಾದಿಂದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ಪ್ರಮಾಣವಚನ ಸಮಾರಂಭವು ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಹೊಸ ಬಿಹಾರ ಸಚಿವ ಸಂಪುಟದಲ್ಲಿ ಬಿಜೆಪಿಯಿಂದ 16 ಸಚಿವರು ಮತ್ತು ಜೆಡಿಯುನಿಂದ 14 ಸಚಿವರು ಸೇರುವ ನಿರೀಕ್ಷೆಯಿದೆ, ಇದರಲ್ಲಿ ಪಕ್ಷದ ಮುಖ್ಯಸ್ಥರೂ ಸೇರಿದ್ದಾರೆ.
243 ಸ್ಥಾನಗಳಲ್ಲಿ 202 ಗೆದ್ದ ಎನ್‌ಡಿಎಯಲ್ಲಿ ಬಿಜೆಪಿ 89 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿದೆ. ಹೀಗಾಗಿ ಸಂಪುಟದಲ್ಲಿ ಬಿಜೆಪಿಗೆ ಹೆಚ್ಚು ಪಾಲು ಸಿಕ್ಕಿದೆ. ಇಬ್ಬರು ಉಪಮುಖ್ಯಮಂತ್ರಿಗಳು ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದಾರೆ, ಅಲ್ಲದೇ ವಿಧಾನಸಭೆ ಸ್ಪೀಕರ್ ಹುದ್ದೆಯೂ ಬಿಜೆಪಿಗೆ ಸಿಕ್ಕಿದೆ. ಹಿರಿಯ ಶಾಸಕ ಪ್ರೇಮ್ ಕುಮಾರ್ ಅವರನ್ನು ಸ್ಪೀಕರ್ ಮಾಡುವುದು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ.
* ವಿಜಯ್ ಕುಮಾರ್ ಚೌಧರಿ
* ವಿಜೇಂದ್ರ ಯಾದವ್
* ಶ್ರವಣ್ ಕುಮಾರ್
* ಅಶೋಕ್ ಚೌಧರಿ
* ರತ್ನೇಶ್ ಸದಾ
* ಸುನಿಲ್ ಕುಮಾರ್
* ಶ್ಯಾಮ್ ರಜಕ್
* ಲೇಸಿ ಸಿಂಗ್
* ಜಾಮಾ ಖಾನ್












Click it and Unblock the Notifications