Delhi Election: ದೆಹಲಿಗೆ ಮಹಿಳಾ ಮುಖ್ಯಮಂತ್ರಿ? ಸೋಮವಾರ ಘೋಷಣೆ ಸಾಧ್ಯತೆ
ದೆಹಲಿ ವಿಧಾನಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ 26 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರ ರಚಿಸಲಿದೆ. ಫಲಿತಾಂಶ ಪ್ರಕಟವಾಗಿ ಒಂದು ವಾರವಾದರೂ ಇನ್ನೂ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿಲ್ಲ, ಸೋಮವಾರ ಬಿಜೆಪಿ ಹೈಕಮಾಂಡ್ ದೆಹಲಿ ನೂತನ ಮುಖ್ಯಮಂತ್ರಿ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ದೆಹಲಿ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಸೋಮವಾರ ಮಧ್ಯಾಹ್ನ ಬಿಜೆಪಿ ಶಾಸಕಾಂಗ ಸಭೆ ಸೇರಲಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಅಮೆರಿಕ ಪ್ರವಾಸದಿಂದ ಪ್ರಧಾನಿ ನರೇಂದ್ರ ಮೋದಿ ವಾಪಸಾದ ಬಳಿಕವೇ ದೆಹಲಿ ಮುಂದಿನ ಸಿಎಂ ಆಯ್ಕೆ ಮಾಡಲಾಗುತ್ತದೆ ಎಂದು ಬಿಜೆಪಿ ಮೊದಲೇ ತಿಳಿಸಿತ್ತು.

ಪ್ರಾನ್ಸ್ ಮತ್ತು ಅಮೆರಿಕ ಪ್ರವಾಸದಿಂದ ಶನಿವಾರ ಪ್ರಧಾನಿ ನರೇಂದ್ರ ಮೋದಿ ವಾಪಸಾಗಿದ್ದು ದೆಹಲಿ ಸರ್ಕಾರ ರಚನೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ಬಿಜೆಪಿ ವೀಕ್ಷಕರನ್ನು ಹೆಸರಿಸಬಹುದು ಎಂದು ವರದಿ ತಿಳಿಸಿದೆ. ದೆಹಲಿ ಬಿಜೆಪಿ ಕಚೇರಿಯಲ್ಲೇ ಶಾಸಕರ ಸಭೆ ನಡೆಯುತ್ತದೆ ಎಂದು ಹೇಳಲಾಗಿದೆ.
26 ವರ್ಷಗಳ ಬಳಿಕ ದೆಹಲಿಯಲ್ಲಿ ಗೆಲುವು ಸಾಧಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದಿರುವ ಎರಡೂವರೆ ದಶಕಗಳ ಬಳಿಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಹೊಸ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಯೋಜಿಸುತ್ತಿದ್ದು, ದೇಶಾದ್ಯಂತ ಪ್ರಮುಖ ಬಿಜೆಪಿ ನಾಯಕರನ್ನು ಆಹ್ವಾನಿಸುವ ಸಾಧ್ಯತೆ ಇದೆ.
ಪ್ರಮಾಣ ವಚನ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಬಿಜೆಪಿ ಸಂಸದರು, ಮಾಜಿ ಸಂಸದರು ಮತ್ತು ಎಲ್ಲಾ ಎನ್‌ಡಿಎ ಆಡಳಿತವಿರುವ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು, ಎಲ್ಲಾ ರಾಜ್ಯಗಳ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಹಾಜರಿರುತ್ತಾರೆ.
ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ಬಿಜೆಪಿ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಬಿಜೆಪಿ ಗೆಲುವು ಸಾಧಿಸಿದ ಬಳಿಕ ಹಲವು ಹೆಸರುಗಳು ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬಂದಿದೆ. ಮಾಜಿ ಸಿಎಂ ಸಾಹೇಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ವರ್ಮಾ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ದೆಹಲಿಯ ಮಾಜಿ ಬಿಜೆಪಿ ಮುಖ್ಯಸ್ಥ ಮತ್ತು ಮಾಳವೀಯ ನಗರ ಶಾಸಕ ಸತೀಶ್ ಉಪಾಧ್ಯಾಯ, ಪಕ್ಷದ ಹಿರಿಯ ನಾಯಕ ವಿಜೇಂದರ್ ಗುಪ್ತಾ, ಹೊಸದಾಗಿ ಆಯ್ಕೆಯಾದ ಜನಕ್‌ಪುರಿ ಶಾಸಕ ಆಶಿಶ್ ಸೂದ್ ಮತ್ತು ಉತ್ತಮ್ ನಗರ ಶಾಸಕ ಪವನ್ ಶರ್ಮಾ ಅವರ ಹೆಸರು ಸಿಎಂ ಹುದ್ದೆಗೆ ಕೇಳಿ ಬಂದಿದೆ.
ಬಿಜೆಪಿ ಅಚ್ಚರಿಯ ಸಿಎಂ ಅನ್ನು ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗಿದೆ. ಮಹಿಳಾ ಸಿಎಂ ಆಯ್ಕೆ ಮಾಡುವ ಬಗ್ಗೆ ಕೂಡ ಪಕ್ಷದ ಉನ್ನತ ನಾಯಕರು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ನೀಲಂ ಪಹಲ್ವಾನ್, ರೇಖಾ ಗುಪ್ತಾ, ಪೂನಮ್ ಶರ್ಮಾ ಮತ್ತು ಶಿಖಾ ರಾಯ್ ಪ್ರಮುಖ ಮಹಿಳಾ ನಾಯಕರಾಗಿದ್ದಾರೆ.












Click it and Unblock the Notifications