Jammu and Kashmir: ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಲಿರುವ ಎನ್‌ಸಿ-ಕಾಂಗ್ರೆಸ್
ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಯಾಗಲಿದೆ. ವಿಧಾನಸಭಾ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮೈತ್ರಿ ಮುನ್ನಡೆ ಪಡೆದುಕೊಂಡಿದೆ. ಮೈತ್ರಿಕೂಟವು 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚಿಸುವುದು ಖಚಿತವಾಗಿದೆ. ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ.
ಮತ ಎಣಿಕೆಯಲ್ಲಿ ಮಧ್ಯಾಹ್ನ 3.30 ಗಂಟೆಯ ವೇಳೆಗೆ 49 ಕ್ಷೇತ್ರಗಳಲ್ಲಿ ಎನ್‌ಸಿ - ಕಾಂಗ್ರೆಸ್ ಮುನ್ನಡೆ ಪಡೆದುಕೊಂಡಿದೆ. 29 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಪಿಡಿಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 9 ಕ್ಷೇತ್ರಗಳಲ್ಲಿ ಇತರೆ ಅಭ್ಯರ್ಥಿಗಳು ಮುನ್ನಡೆ ಪಡೆದುಕೊಂಡಿದ್ದಾರೆ.

ಎನ್‌ಸಿ-ಕಾಂಗ್ರೆಸ್ ಹಾದಿ ಸುಲಭ
ಚುನಾವಣಾ ಪೂರ್ವ ಸಮೀಕ್ಷೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ಫಲಿತಾಂಶ ಬರಬಹುದು ಎಂದು ಹೇಳಿದ್ದವು, ಹಾಗೆ ಹರಿಯಾಣದಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚಿಸಲಿವೆ ಎಂದಿದ್ದರು. ಆದರೆ ಫಲಿತಾಂಶದಲ್ಲಿ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿವೆ. ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದ್ದು, ಬಿಜೆಪಿ ಮೂರನೇ ಬಾರಿ ಸರ್ಕಾರ ರಚಿಸಲಿದೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ ಮುನ್ನಡೆ ಪಡೆದುಕೊಂಡಿದ್ದು, ಸರಳ ಬಹುಮತ ಪಡೆದು ಸರ್ಕಾರ ರಚಿಸುವ ಉತ್ಸಾಹದಲ್ಲಿದೆ.
ಬಿಜೆಪಿ ಲೆಕ್ಕಾಚಾರವೇನು?
ಹಿನ್ನಡೆಯಾದರೂ ಬಿಜೆಪಿ ಅಧಿಕಾರ ಪಡೆಯುವ ಲೆಕ್ಕಾಚಾರ ಇನ್ನೂ ಮುಗಿದಿಲ್ಲ, ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು, ಅದರಲ್ಲೂ ಬಿಜೆಪಿ ಅಧಿಕಾರ ಹಿಡಿಯಲು ಏನೆಲ್ಲಾ ಕಸರತ್ತು ಮಾಡುತ್ತದೆ ಎನ್ನುವುದನ್ನು ಹಲವು ರಾಜ್ಯಗಳಲ್ಲಿ ಮಾಡಿ ತೋರಿಸಿದೆ.
ಕನಿಷ್ಠ 30 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರು ಸರ್ಕಾರ ರಚನೆಗೆ ಇನ್ನೂ 16 ಶಾಸಕರ ಬೆಂಬಲ ಬೇಕಾಗುತ್ತದೆ. ಜೆಕೆಎಪಿ, ಪಿಸಿ ಪಕ್ಷಗಳ ಅಭ್ಯರ್ಥಿಗಳು ಸೇರಿ ಪಕ್ಷೇತರ ಅಭ್ಯರ್ಥಿಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಆಪ್ನಿ ಪಕ್ಷದ ಸಂಸ್ಥಾಪಕ ಅಲ್ತಾಫ್ ಬುಖಾರಿಗೆ ಈ ಚುನಾವಣೆ ಅಳಿವು ಉಳಿವಿನ ಪ್ರಶ್ನೆಯಾಗಿದೆ, ಚನಪೋರಾ ಕ್ಷೇತ್ರದಲ್ಲಿ ಅವರಿಗೆ ಹಿನ್ನಡೆಯಾಗಿದ್ದು, ಎನ್‌ಸಿ ಪಕ್ಷದ ಮುಷ್ತಾಕ್ ಗುರು ಮುನ್ನಡೆ ಸಾಧಿಸಿದ್ದಾರೆ.
ಎಕ್ಸಿಟ್ ಪೋಲ್‌ಗಳ ಪ್ರಕಾರ ಬಿಜೆಪಿ ಜಮ್ಮು ಪ್ರಾಂತ್ಯದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಂಡಿದೆ. ಮೊದಲಿನಿಂದಲೂ ಕೂಡ ಜಮ್ಮು ವಿಭಾಗದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಹೊಂದಿದೆ. ಅಪ್ನಿ ಪಕ್ಷ ಮತ್ತು ಪಿಸಿ ಕೂಡ ಉತ್ತಮ ಪ್ರದರ್ಶನ ನೀಡಿ ಹಲವಾರು ಸ್ಥಾನಗಳನ್ನು ಗೆದ್ದುಕೊಂಡರೆ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ನಡೆಸಬಹುದು.
ಒಮರ್ ಅಬ್ದುಲ್ಲಾ ಮುಂದಿನ ಸಿಎಂ
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಫಾರೂಕ್ ಅಬ್ದುಲ್ಲಾ ಶ್ರೀನಗರದಲ್ಲಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್-ಎನ್‌ಸಿ ಸರ್ಕಾರ ರಚನೆಯಾಗುವುದು ಖಚಿತವಾದ ಬೆನ್ನಲ್ಲೇ ಫಾರೂಕ್ ಅಬ್ದುಲ್ಲಾ ಘೋಷಣೆ ಮಾಡಿದ್ದಾರೆ.
ಸ10 ವರ್ಷಗಳ ಬಳಿಕ ಜನ ನಮಗೆ ಸರ್ಕಾರ ರಚಿಸುವ ಅವಕಾಶ ನೀಡಿದ್ದಾರೆ. ಜನರ ನಿರೀಕ್ಷೆಗಳನ್ನು ಈಡೇರಿಸುವಂತೆ ಅಲ್ಲಾಹನಲ್ಲಿ ಪ್ರಾರ್ಥನೆ ಮಾಡುತ್ತೇವೆ. ಪೊಲೀಸ್ ರಾಜ್ ಆಗಲು ಬಿಡುವುದಿಲ್ಲ, ಅಮಾಯಕರನ್ನು ಜೈಲಿನಿಂದ ಬಿಡುಗಡೆ ಮಾಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.












Click it and Unblock the Notifications