Video: ಮುಂಬೈ ಸಿದ್ಧಿವಿನಾಯಕ ಲಡ್ಡು ಪ್ರಸಾದ್ ಪ್ಯಾಕೆಟ್‌ಗಳಲ್ಲಿ ಇಲಿಗಳು ಪತ್ತೆ: ವಿಡಿಯೊ ವೈರಲ್
ಮುಂಬೈ ಸೆಪ್ಟೆಂಬರ್ 24: ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ಬಾಲಾಜಿ ದೇವಸ್ಥಾನದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾದ ಸುದ್ದಿಯ ನಂತರ, ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ತಯಾರಾಗುವ ಲಡ್ಡುಗಳ ಪ್ಯಾಕೆಟ್‌ಗಳಲ್ಲಿ ಇಲಿ ಮರಿಗಳು ಇರುವ ವಿಡಿಯೋ ಹೊಸ ಸಂಚಲವನ್ನು ಮೂಡಿಸಿದೆ.
ತಿರುಪತಿ ಬಾಲಾಜಿಯ ಪ್ರಸಿದ್ಧ ಪ್ರಸಾದವನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿದೆ. ಹೀಗಾಗಿ ತಿರುಪತಿ ದೇವಾಲಯಗಳಲ್ಲಿ ತಯಾರಾಗುವ ಪ್ರಸಾದದ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಇದೀಗ ಮುಂಬೈನ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಮಹಾಪ್ರಸಾದದಲ್ಲೂ ಇಲಿ ಮರಿ ಪತ್ತೆಯಾಗಿದೆ.

ಹೌದು.. ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟ್ ಭಕ್ತರಿಗೆ ವಿತರಿಸುವ 'ಮಹಾಪ್ರಸಾದ ಲಡ್ಡು' ಪ್ಯಾಕೆಟ್‌ಗಳಲ್ಲಿ ಇಲಿಗಳು ಬಿದ್ದಿರುವುದು ಕಂಡು ಬಂದಿದೆ. ಆ ಪ್ಯಾಕೆಟ್‌ಗಳು ಕಿತ್ತು ಹೋಗಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ವಿಡಿಯೋ ವೈರಲ್ ಆದ ಬಳಿಕ ಇದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಮುಂಬೈನ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಾಲಯದಲ್ಲಿ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. NDTV ಈ ವಿಡಿಯೋವನ್ನು ಹಂಚಿಕೊಂಡಿದೆ. ವೈರಲ್ ಆದ ವಿಡಿಯೋದಲ್ಲಿ ದೇವಾಲಯದ ಮಹಾಪ್ರಸಾದದಲ್ಲಿ ಇಲಿ ಮರಿಗಳನ್ನು ಕಾಣಬಹುದು. ಈ ವಿಡಿಯೋದ ಬಗ್ಗೆ ಸ್ಪಷ್ಟನೆ ಕೇಳಿರುವ ದೇವಾಲಯದ ಟ್ರಸ್ಟ್ ಕಾರ್ಯದರ್ಶಿ ವೀಣಾ ಪಾಟೀಲ್, ಈ ವಿಡಿಯೋದ ಬಗ್ಗೆ ತನಿಖೆ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಪ್ರತಿದಿನ 50 ಸಾವಿರ ಲಡ್ಡು ಪ್ರಸಾದ ತಯಾರಿಕೆ
ವರದಿಯ ಪ್ರಕಾರ ದೇವಾಲಯದ ಆವರಣದಲ್ಲಿ ಪ್ರಸಾದಕ್ಕಾಗಿ ಪ್ರತಿದಿನ 50 ಸಾವಿರ ಲಡ್ಡುಗಳನ್ನು ತಯಾರಿಸಲಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಲಡ್ಡುಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ತಲಾ 50 ಗ್ರಾಂನ ಎರಡು ಲಡ್ಡು ಪ್ಯಾಕೆಟ್‌ಗಳಲ್ಲಿ ಇರುತ್ತವೆ. ಲಡ್ಡುವಿನಲ್ಲಿ ಬಳಸುವ ಪದಾರ್ಥಗಳು ಕೂಡ ಆಹಾರ ಮತ್ತು ಔಷಧ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟಿದೆ. ಆದರೆ ಈ ಲಡ್ಡು ಪ್ಯಾಕೇಟ್‌ಗಳಲ್ಲಿ ಇಲಿ ಮರಿಗಳು ಇರುವುದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ.
ದೇವಸ್ಥಾನದ ಒಳಗಿನ ಸ್ವಚ್ಛತೆಯ ಬಗ್ಗೆ ಪ್ರಶ್ನೆ
ಪ್ರಯೋಗಾಲಯ ಪರೀಕ್ಷೆಯ ಪ್ರಕಾರ, ಈ ಮಹಾಪ್ರಸಾದ ಲಡ್ಡುಗಳನ್ನು 7 ರಿಂದ 8 ದಿನಗಳವರೆಗೆ ಸುರಕ್ಷಿತವಾಗಿ ಇಡಬಹುದು. ಆದರೆ ವಿಡಿಯೋದಲ್ಲಿ ಕಂಡು ಬಂದ ಲಡ್ಡುಗಳಿರುವ ಪ್ಯಾಕೇಟ್‌ನಲ್ಲಿ ಇಲಿ ಮರಿಗಳ ಚಿತ್ರಗಳು ಕಂಡುಬಂದಿದ್ದು ದೇವಾಲಯದೊಳಗಿನ ಪ್ರಸಾದದ ಗುಣಮಟ್ಟ ಮತ್ತು ಸ್ಥಳದ ಶುದ್ಧತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.
ದೇವಾಲಯದ ಟ್ರಸ್ಟ್ ವೀಡಿಯೊದ ಮೂಲದ ಪುರಾವೆ ಕೇಳಿದೆ
ಈ ಬಗ್ಗೆ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ವೀಣಾ ಪಾಟೀಲ ಮಾತನಾಡಿ, ಮೊದಲ ನೋಟಕ್ಕೆ ಈ ವಿಡಿಯೋ ಸಿದ್ಧಿವಿನಾಯಕ ದೇವಸ್ಥಾನದ ವಿಡಿಯೋವೆಂದು ತೋರುತ್ತಿಲ್ಲ, ಈ ಚಿತ್ರಗಳು ದೇವಾಲಯದ ಒಳಗಿನಿಂದ ಬಂದವು ಎಂದು ಅನಿಸುತ್ತಿಲ್ಲ. ಈ ವೀಡಿಯೊದ ಪುರಾವೆಯೂ ಇರಬೇಕು. ನಾವು ಇದನ್ನು ನಮ್ಮ ಆಡಳಿತ ಮಟ್ಟದಲ್ಲಿ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications