ಪ್ರವಾಹ ಬಂದಿದ್ದು ನಿಜ, ಆದರೂ ಈ ಬಾರಿ ಮಳೆ ಕೊರತೆ!
Recommended Video

ನವದೆಹಲಿ, ಅಕ್ಟೋಬರ್ 01: ಪ್ರಸಕ್ತ ಮುಂಗಾರು ಋತು ಸೆ.30 ರವಿವಾರದಂದು ಅಂತ್ಯಗೊಂಡಿದ್ದು, ಈ ಬಾರಿ ದೇಶವು ಶೇ.9.4 ರಷ್ಟು ಮಳೆ ಕೊರತೆ ಅನುಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕೇರಳ ಮತ್ತು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅತೀವ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ನಿಜವಾದರೂ, ದೇಶದ ಎಷ್ಟೋ ರಾಜ್ಯಗಳು ಮಳೆ ಕೊರತೆ ಅನುಭವಿಸಿವೆ.
ಪ್ರತಿ ಬಾರಿಯೂ ಹವಾಮಾನ ಇಲಾಖೆಯ ಲೆಕ್ಕಾಚಾರ ತಪ್ಪಾಗುತ್ತಿರಲಿಲ್ಲ. ಅದು ಮುನ್ಸೂಚನೆ ನೀಡಿದಷ್ಟೇ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಹವಾಮಾನ ಇಲಾಖೆಯ ಮುನ್ಸೂಚನೆ ತಲೆಕೆಳಗಾಗಿದೆ. ಹವಾಮಾನ ಇಲಾಖೆಯ ಅಂದಾಜು ಗುರಿ ತಲುಪುವುದಕ್ಕೆ ಇನ್ನೂ ಶೇ.6 ರಷ್ಟಾದರೂ ಹೆಚ್ಚು ಮಳೆಯಾಗಬೇಕಿತ್ತು.

ಆಗಸ್ಟ್ ತಿಂಗಳಿನಲ್ಲಿ ಉತ್ತಮ ಮಳೆ ಕಂಡುಬಂದರೂ, ಸೆಪ್ಟೆಂಬರ್ ತಿಂಗಳಿನಲ್ಲಿ ನಿರೀಕ್ಷಿಸಿದಷ್ಟು ಮಳೆಯಾಗದೆ, ಏಕಾಏಕಿ ಮಳೆ ಕೊರತೆ ಕಂಡುಬಂದಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಶೇ.95 ರಷ್ಟು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿತ್ತು. ಆದರೆ ಮಳೆಯಾಗಿದ್ದು ಮಾತ್ರ ಶೇ.87 ರಷ್ಟು!
ಆಗಸ್ಟ್ ನಲ್ಲಿ ಶೇ.88 ರಷ್ಟು ಮಳೆಯಾಗಲಿದ್ದು, ಸೆಪ್ಟೆಂಬರ್ ನಲ್ಲಿ ಶೇ.93ರಷ್ಟು ಮಳೆಯಾಗಲಿದೆ ಎಂದು ಸ್ಕೈಮೆಟ್ ವೆದರ್ ಹೇಳಿತ್ತು. ಆದರೆ ಅದು ಉಲ್ಟಾ ಹೊಡೆದು, ಆಗಸ್ಟ್ ನಲ್ಲೇ ಹೆಚ್ಚು ಮಳೆಯಾಗಿದ್ದು, ಸೆಪ್ಟೆಂಬರ್ ನಲ್ಲಿ ಕಡಿಮೆ ಮಳೆಯಾಗಿದೆ.












Click it and Unblock the Notifications