Monsoon News: ಕೇರಳದಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ: ಕರ್ನಾಟಕದ ಮಳೆ ವರದಿ
ಕೇರಳ ರಾಜಧಾನಿ ರಾಜಧಾನಿ ತಿರುವನಂತಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಅನೇಕ ಭಾಗಗಳಲ್ಲಿ ಮಳೆಯ ಪ್ರಮಾಣ ತೀವ್ರವಾದ ಕಾರಣ ಜನ ಭಾರಿ ತೊಂದರೆ ಅನುಭವಿಸಿದರು.
ಭಾರಿ ಮಳೆಯಿಂದ ನೆಮೊಮ್‌ನಲ್ಲಿನ ರೈಲ್ವೇ ಹಳಿಗಳ ಮೇಲೆ ಮಣ್ಣು ಕುಸಿದ ಕಾರಣ ತಿರುವನಂತಪುರದ ದಕ್ಷಿಣಕ್ಕೆ ರೈಲು ಸೇವೆಗಳಿಗೆ ಅಡಚಣೆಯಾಗಿದೆ. ನಗರದಲ್ಲಿ ಒಂದು ಮನೆ ಸೇರಿದಂತೆ ಹಲವು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ನನ್ನಿಯೋಡೆಯಲ್ಲಿ ಒಂದು ಮನೆ ಸಂಪೂರ್ಣ ಹಾನಿಯಾಗಿದೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಮಳೆ ತೀವ್ರವಾದ ಕಾರಣ ತಿರುವನಂತಪುರ ಜಿಲ್ಲೆಯಲ್ಲಿ ನಾಲ್ಕು ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಒಟ್ಟು 80 ಜನರನ್ನು ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಅಭ್ಯಾಸ ಪಂದ್ಯವು ಭಾರೀ ಮಳೆಯಿಂದಾಗಿ ರದ್ದಾಗಿತ್ತು. ಕಾರ್ಯವಟ್ಟಂನ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ ಪಂದ್ಯ ನೋಡಲು ಬಂದಿದ್ದ ಅಭಿಮಾನಿಗಳು ನಿರಾಸೆಗೊಂಡರು. ಪಂದ್ಯ ನಡೆಯದ ಎಲ್ಲಾ ಟಿಕೆಟ್‌ಗಳ ಹಣವನ್ನು ಮರುಪಾವತಿಸಲಾಗುವುದು ಎಂದು ಕೇರಳ ಕ್ರಿಕೆಟ್ ಸಂಸ್ಥೆ ತಿಳಿಸಿದೆ.
ಕೃಷಿ ಬೆಳೆಗಳಿಗೆ ಹಾಣಿ
ತಂಪನೂರು, ಎಸ್‌ಎಸ್ ಕೋವಿಲ್ ರಸ್ತೆ, ಪೂರ್ವ ಕೋಟೆ, ಕರಿಮಾಡೋಮ್ ಕಾಲೋನಿ ಸೇರಿದಂತೆ ನಗರದ ತಗ್ಗು ಪ್ರದೇಶಗಳೂ ಜಲಾವೃತಗೊಂಡಿವೆ. ಚಕ್ಕೈ, ಅಣಯಾರ ಮತ್ತು ಪೂಂತುರಾ ಮತ್ತು ಮುತ್ತತಾರಾ ನಡುವಿನ ಎನ್‌ಎಚ್ 66 ಬೈಪಾಸ್‌ನಲ್ಲಿಯೂ ಸಹ ನೀರು ನಿಂತಿದೆ ಎಂದು ವರದಿಯಾಗಿದೆ. ಸತತ ಮಳೆಯಿಂದಾಗಿ ಜಿಲ್ಲೆಯ ವೆಳ್ಳಾಯಣಿ, ಚೆಂಕಲ್ ಮತ್ತು ಪರಸ್ಸಾಲದಲ್ಲಿ ಕೃಷಿ ಜಮೀನಿನಲ್ಲಿ ನೀರು ನಿಂತಿದ್ದರಿಂದ ಬೆಳೆಗಳಿಗೆ ಹಾನಿಯಾಗಿದೆ.
ಕರಮಾನ ಮತ್ತು ನೆಯ್ಯರ್ ನದಿಗಳಲ್ಲಿ ನೀರಿನ ಹರಿವು ಆತಂಕಕಾರಿಯಾಗಿ ಹೆಚ್ಚಾಗಿದೆ. ಈ ಎರಡೂ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಬಗ್ಗೆ ಈ ಹಿಂದೆಯೇ ಕೇಂದ್ರ ಜಲ ಆಯೋಗ ಎಚ್ಚರಿಕೆ ನೀಡಿತ್ತು. ನೆಯ್ಯಟ್ಟಿಂಕರ, ಪೊನ್ಮುಡಿ, ಕಲ್ಲಾರ್, ಮೀನ್‌ಮುಟ್ಟಿ ಮತ್ತು ಮಂಕಾಯಂನ ಅರುವಿಪ್ಪುರಂ ಬಳಿಯ ಎರಟ್ಟಿನ್‌ಪುರಂಗೆ ಭೇಟಿ ನೀಡುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ.
ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ನಡೆಯಬೇಕಿದ್ದ ಜೈಲರ್ ಹುದ್ದೆಯ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ಕೇರಳ ಲೋಕಸೇವಾ ಆಯೋಗವು ಮುಂದೂಡಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ಹೇಳಿದೆ.
ಕರ್ನಾಟಕದಲ್ಲಿ ಮಳೆ ಮುನ್ಸೂಚನೆ
ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದರು ಕರ್ನಾಟಕದಲ್ಲಿ ಮಳೆ ಮುನ್ಸೂಚನೆ ಅಷ್ಟು ಉತ್ತಮವಾಗಿಲ್ಲ. ಅಕ್ಟೋಬರ್ 9ರವರೆಗೆ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬುಧವಾರ ರಾಜ್ಯದ ಬೆಳಗಾವಿ, ಧಾರವಾಡ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ, ಉಳಿದ ಜಿಲ್ಲೆಗಳಲ್ಲಿ ಬಹುತೇಕ ಒಣಹವೆ ಮುಂದುವರೆಯಲಿದೆ.
ಅಕ್ಟೋಬರ್ 10ರಿಂದ ರಾಜ್ಯದಲ್ಲಿ ಮಳೆ ಚುರುಕುಗೊಳ್ಳುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಲೆನಾಡು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಸಮಾಧಾನ ತರಿಸಿದೆ.












Click it and Unblock the Notifications