ಈ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಆಗಸ್ಟ್ 15ರಿಂದ ಉಚಿತ ಚಿಕಿತ್ಸೆ ಯೋಜನೆ ಜಾರಿ
ಬೆಂಗಳೂರು, ಆಗಸ್ಟ್ 13: ಕರ್ನಾಟಕ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳ ಲಾಭವನ್ನು ಜನರು ಪಡೆಯುತ್ತಿದ್ದಾರೆ. ಇದೀಗ ನೆರೆಯ ರಾಜ್ಯದಲ್ಲಿ ಜನರಿಗೆ ಉಚಿತ ಆರೋಗ್ಯ ಸೌಲಭ್ಯ ನೀಡಲು ಆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಉಚಿತ ಆದೇಶವು ಆಗಸ್ಟ್ 15ರಂದು ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ ದಿನದಿಂದ ಜಾರಿಗೆ ಬರಲಿದೆ. ಅಂದಿನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ಲಭ್ಯವಾಗಲಿದೆ.
ಮಹಾರಾಷ್ಟ್ರ ರಾಜ್ಯ ಸರ್ಕಾರವು ನಾಡಿದ್ದು ಇದೇ ಆಗಸ್ಟ್ 15 ರಿಂದ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಆದೇಶಿಸಿದೆ. ಈ ಮೂಲಕ ಯಾವುದೇ ಸರ್ಕಾರಿ ಆಸ್ಪತ್ರೆಗಳು ಹೆಚ್ಚುವರಿ ಶುಲ್ಕ ಪಡೆಯದೇ ಚಿಕಿತ್ಸೆ ಒದಗಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಉಚಿತ ಚಿಕಿತ್ಸೆ ಜಾರಿಗೆ ಬರಲಿದೆ. ರೋಗಿಗಳಿಗೆ ನೀಡುವ ಉಚಿತ್ಸ ಚಿಕಿತ್ಸೆ ಹಣವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಸಿಚವರಾದ ತಾನಾಜಿ ಸಾವಂತ್ ಮಾಹಿತಿ ನೀಡಿದ್ದರೆ.
ಈ ವಿಧದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ
ಆರೋಗ್ಯದ ಹಕ್ಕು (ಆರ್ಟಿಕಲ್ 21) ಅಡಿಯಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಗ್ರಾಮೀಣ ಆಸ್ಪತ್ರೆ, ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಆಸ್ಪತ್ರೆ, ಉಪ ಜಿಲ್ಲಾ ಆಸ್ಪತ್ರೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಸಹ ಉಚಿತ ಚಿಕಿತ್ಸೆ ಮಂಗಳವಾರದಿಂದ ರೋಗಿಗಳು ಪಡೆಯಲಿದ್ದಾರೆ ಎಂದು ಅವರು ಸಂಪುಟದಲ್ಲಿ ಕೈಗೊಂಡ ನಿರ್ಧಾರ ಕುರಿತು ವಿವರಿಸಿದ್ದಾರೆ.
ಇಲ್ಲಿನ ಅಮರಾವತಿ ಕ್ಯಾನ್ಸರ್ ಆಸ್ಪತ್ರೆಗಳೂ ಉಚಿತ ಚಿಕಿತ್ಸೆ ಕ್ರಮವನ್ನು ವಿಸ್ತರಣೆ ಮಾಡಲಗಿದೆ. ಮಹಾರಾಷ್ಟ್ರ ಸರ್ಕಾರದ ವ್ಯಾಪ್ತಿಯಲ್ಲಿ ಒಟ್ಟು 2,418 ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ. ಸರ್ಕಾರದ ಈ ಉಚಿತ ಆರೋಗ್ಯ ಸೌಲಭ್ಯದ ಆದೇಶದಿಂದ ರಾಜ್ಯದ ಸುಮಾರು 2.5 ಕೋಟಿ ಜನರ ಉಚಿತ ಆರೋಗ್ಯ ವ್ಯವಸ್ಥೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಈ ಆಸ್ಪತ್ರೆಗಳಿಗೆ ಆದೇಶ ಅನ್ವಯ ಆಗಲ್ಲ: ಸ್ಪಷ್ಟನೆ
ಆದರೆ ಸರ್ಕಾರದ ಈ ಯೋಜನೆಯು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಆಸ್ಪತ್ರೆಗಳು ಅಥವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಅನ್ವಯವಾಗುವುದಿಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಭಾರತ ಸೇರಿದಂತೆ ಇಡಿ ವಿಶ್ವಕ್ಕೆ ಕೊರೊನಾ ಪಿಡುಗು ವಕ್ಕಿರಿಸಿತ್ತು. ಈ ವೇಳೆ ಮಹಾರಾಷ್ಟ್ರ ಸರ್ಕಾರ ಜನರಿಗೆ ಆರೋಗ್ಯ ಉಚಿತ ವಿಮೆ ಯೋಜನೆ ಜಾರಿಗೆ ತಂದಿತ್ತು. ಬಳಿಕ ಮಹಾರಾಷ್ಟ್ರ ಉಚಿತ ವಿಮಾ ರಕ್ಷಣೆಯನ್ನು ಒದಗಿಸುವ ಮೂಲಕ ಭಾರತದಲ್ಲಿ ಜನರಿಗೆ ವಿಮಾ ಯೋಜನೆ ತಂದ ಮೊದಲ ರಾಜ್ಯವಾಗಿ ಹೊರ ಹೊಮ್ಮಿತು. ನಾಗರಿಕರ ಮೆಚ್ಚುಗೆಗೆ ಪಾತ್ರವಾಯಿತು.
ರಾಜ್ಯ ಸರ್ಕಾರದ ಆರೋಗ್ಯ ಯೋಜನೆಯಾದ ಜ್ಯೋತಿಬಾ ಫುಲೆ ಜನ ಆರೋಗ್ಯ (MJPJAY) ಯೋಜನೆಯಡಿ ಎಲ್ಲ ನಾಗರಿಕರಿಗೆ ಸೌಲಭ್ಯ ಸಿಗುವಂತೆ ಮಾಡಿದೆ. ಸೂಕ್ತ ದಾಖಲೆಗಳನ್ನು ಹೊಂದಿರುವ ಅರ್ಹರು ಇದರ ಪ್ರಯೋಜನ ಪಡೆಯಬಹುದಾಗಿದೆ. ಈ ಕುರಿತು ಮಹಾರಾಷ್ಟ್ರದ ಜನರು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.












Click it and Unblock the Notifications