Maharashtra Assembly Elections 2024: ಮಹಾರಾಷ್ಟ್ರ ಚುನಾವಣೆ, ಅಚ್ಚರಿ ಮೂಡಿಸಿದ ಪವಾರ್ ಘೋಷಣೆ
ಮುಂಬೈ, ಸೆಪ್ಟೆಂಬರ್ 26: ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇನ್ನೂ ಘೋಷಣೆ ಮಾಡಿಲ್ಲ. ಈ ವರ್ಷದ ನವೆಂಬರ್‌ನಲ್ಲಿ 288 ಸದಸ್ಯ ಬಲದ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದ ಆಡಳಿತ ಮತ್ತು ವಿರೋಧ ಪಕ್ಷಗಳು ಈಗಾಗಲೇ ಮೈತ್ರಿಕೂಟವನ್ನು ರಚನೆ ಮಾಡಿಕೊಂಡಿದ್ದು, ಚುನಾವಣೆ ಎದುರಿಸುವ ತಯಾರಿಯಲ್ಲಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಸೆಪ್ಟೆಂಬರ್ 27, 28ರಂದು ಮುಂಬೈಗೆ ಭೇಟಿ ನೀಡಲಿದ್ದಾರೆ. ವಿಧಾನಸಭೆ ಚುನಾವಣೆ ತಯಾರಿ ಕುರಿತು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು, ರಾಜಕೀಯ ಪಕ್ಷಗಳು, ಪೊಲೀಸ್ ಅಧಿಕಾರಿಗಳ ಜೊತೆ ಸಭೆಗಳನ್ನು ನಡೆಸಲಿದ್ದಾರೆ. ಬಳಿಕ ದೆಹಲಿಯಲ್ಲಿ ಚುನಾವಣಾ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ.

ಮಹಾರಾಷ್ಟ್ರ ರಾಜ್ಯದ ವಿರೋಧ ಪಕ್ಷಗಳು ಒಟ್ಟಾಗಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟ ಇದಾಗಿದ್ದು, ಸೀಟು ಹಂಚಿಕೆ ಚರ್ಚೆ ರಾಜಕೀಯ ಪಕ್ಷಗಳ ವಲಯದಲ್ಲಿ ಆರಂಭವಾಗಿದೆ.
ಶರದ್ ಪವಾರ್ ಅಚ್ಚರಿಯ ಹೇಳಿಕೆ: ಮಹಾರಾಷ್ಟ್ರದ ಚುನಾವಣೆ ಕುರಿತು ಶರದ್ ಪವಾರ್ (ಎನ್‌ಸಿಪಿ) ಮಾತನಾಡಿದ್ದು, "ಬೇರೆ ಪಕ್ಷದ ಪ್ರಮುಖ ನಾಯಕರೊಬ್ಬರು ಶೀಘ್ರವೇ ಪಕ್ಷಕ್ಕೆ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಚುನಾವಣೆಯಲ್ಲಿ ಮಹಾಯತಿ ಮೈತ್ರಿಕೂಟ 100 ಸೀಟುಗಳನ್ನು ದಾಟುವುದಿಲ್ಲ" ಎಂದು ಹೇಳಿದರು.
ನಾಸಿಕ್‌ನಲ್ಲಿ ನಡೆದ ಸಭೆಯಲ್ಲಿ ಶರದ್ ಪವಾರ್ ಈ ಕುರಿತು ಮಾತನಾಡಿದರು. "ಪಕ್ಷ ಸೇರಲಿರುವ ನಾಯಕನ ಹೆಸರನ್ನು ಸೂಕ್ತವಾದ ಸಮಯದಲ್ಲಿ ಬಹಿರಂಗಪಡಿಸಲಾಗುತ್ತದೆ" ಎಂದು ಪವಾರ್ ತಿಳಿಸಿದರು.
ಏಕನಾಥ ಕಡಸೆ ಎನ್‌ಸಿಪಿ ಸೇರಲಿರುವ ನಾಯಕ ಎಂದು ಅಂದಾಜಿಸಲಾಗಿದೆ. ಕೆಲವು ದಿನಗಳ ಹಿಂದೆ ಅವರು ಹಲವು ನಾಯಕರ ವಿರೋಧದ ಕಾರಣಕ್ಕೆ ನಾನು ಬಿಜೆಪಿಗೆ ವಾಪಸ್ ಆಗುವುದಿಲ್ಲ ಎಂದು ಹೇಳಿದ್ದರು. ಆದ್ದರಿಂದ ಅವರು ಎನ್‌ಸಿಪಿ ಸೇರಬಹುದು ಎಂದು ಅಂದಾಜಿಸಲಾಗಿದೆ.
ಎರಡು ವರ್ಷಗಳ ಹಿಂದೆ ದೇವೇಂದ್ರ ಫಡ್ನವೀಸ್ ಜೊತೆಗಿನ ಅಸಮಾಧಾನದ ಕಾರಣ ಏಕನಾಥ ಕಡಸೆ ಬಿಜೆಪಿಯನ್ನು ತೊರೆದಿದ್ದರು. ಈಗ ಮಹಾರಾಷ್ಟ್ರ ಚುನಾವಣೆ ಎದುರಾಗುತ್ತಿರುವಾಗ ಅವರು ಎನ್‌ಸಿಪಿ ಸೇರುವ ಕುರಿತು ಪಕ್ಷದ ಹಿರಿಯ ನಾಯಕರ ಜೊತೆ ಚರ್ಚಿಸಿದ್ದಾರೆ.
ಎನ್‌ಸಿಪಿ (ಶರದ್ ಪವಾರ್) ಪಕ್ಷದ ನಾಯಕರ ಪ್ರಕಾರ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದ ಆಡಳಿತದ ಬಗ್ಗೆ ಜನರು ಮಾತ್ರ ಅಸಮಾಧಾನಗೊಂಡಿಲ್ಲ. ಪಕ್ಷದ ನಾಯಕರ ವರ್ತನೆ ಬಗ್ಗೆ ವಿವಿಧ ಪಕ್ಷದ ನಾಯಕರಲ್ಲಿ ಅಸಮಾಧಾನವಿದೆ.
ಬಿಜೆಪಿಯ ಅಧಿಕಾರದಾಹದ ಕುರಿತು ಜನರು ಆಕ್ರೋಶಗೊಂಡಿದ್ದಾರೆ. 'ಮಹಾಯತಿ' ಮೈತ್ರಿಕೂಟದ ಮತಗಳಿಕೆ ಪ್ರಮಾಣ ಶೇ 20ರಷ್ಟು ಕಡಿಮೆಯಾಗಲಿದೆ. ರಾಜ್ಯದ ನಾಯಕರು ಮತ್ತು ಕೇಂದ್ರ ಬಿಜೆಪಿ ನಾಯಕರ ನಡುವೆ 'ಮಹಾಯತಿ' ಮೈತ್ರಿಕೂಟದ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತವಿಲ್ಲ ಎಂದು ಎನ್‌ಸಿಪಿ ನಾಯಕರು ಟೀಕಿಸಿದ್ದಾರೆ.












Click it and Unblock the Notifications