Maharashtra Assembly Election 2024: ಮತದಾನಕ್ಕೆ 4 ದಿನ ಬಾಕಿ, ಹೇಗಿದೆ ಮಹಾರಾಷ್ಟ್ರ ಚುನಾವಣಾ ಕಣ
ಮುಂಬೈ, ನವೆಂಬರ್ 16: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ಮತದಾನಕ್ಕೆ 4 ದಿನಗಳು ಬಾಕಿ ಇದೆ. ವಿವಿಧ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ ನಡೆಯುತ್ತಿದೆ. ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರ ಶನಿವಾರ ಮತ ಎಣಿಕೆ ನಡೆಯಲಿದ್ದು, ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮತ್ತು ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಎದುರಾಳಿಗಳು.

2019ರ ಚುನಾವಣೆಯಲ್ಲಿ ಒಟ್ಟಿಗಿದ್ದ ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳು ಈಗ ಎರಡು ಬಣಗಳಾಗಿವೆ. ಒಂದು ಬಣ ಆಡಳಿತ ಪಕ್ಷದ ಮೈತ್ರಿಕೂಟ ಜೊತೆ, ಮತ್ತೊಂದು ಬಣ ವಿರೋಧ ಪಕ್ಷದ ಮೈತ್ರಿಕೂಟದ ಜೊತೆ ಗುರುತಿಸಿಕೊಂಡಿವೆ. ಆದ್ದರಿಂದ ಎರಡೂ ಪಕ್ಷಗಳಿಗೂ ಈ ಚುನಾವಣೆ ಫಲಿತಾಂಶ ಬಹುಮುಖ್ಯವಾಗಿದೆ.
ಕಳೆದ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಬಿಜೆಪಿ ಜೊತೆ ಸೇರಿ ಚುನಾವಣೆ ಎದುರಿಸಿದ್ದರು. ಮತ ಎಣಿಕೆಯ 5 ವಾರಗಳ ಬಳಿಕ ಅವರು ಮುಖ್ಯಮಂತ್ರಿಯಾದರು. ತಮ್ಮ ತತ್ವ, ಸಿದ್ಧಾಂತದ ವಿರೋಧಿಗಳಾದ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆ ಕೈ ಜೋಡಿಸಿದ್ದರು. ಇದು ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಮೇಲೆ ಹೇಗೆ ಪರಿಣಾಮ ಬೀರಲಿದೆ? ಎಂಬುದು ಕುತೂಹಲವಾಗಿದೆ.
ರಾಜಕೀಯ ಚಿತ್ರಣ ಬದಲು: 5 ವರ್ಷಗಳಲ್ಲಿ ರಾಜ್ಯದ ರಾಜಕೀಯ ಚಿತ್ರಣ ಬದಲಾಗಿದೆ. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಈ ಬಾರಿ ಎರಡೂ ರಾಷ್ಟ್ರೀಯ ಪಕ್ಷಗಳು ಮೈತ್ರಿಕೂಟದ ಸೀಟು ಹಂಚಿಕೆ ಮೂಲಕ ಚುನಾವಣೆ ಎದುರಿಸುತ್ತಿವೆ.
ಸೀಟು ಹಂಚಿಕೆ ವಿಚಾರದಲ್ಲಿ ಎಂವಿಎ ಮೈತ್ರಿಕೂಟದಲ್ಲಿ ಸ್ಪಷ್ಟತೆ ಇದೆ. ಆದರೆ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದಲ್ಲಿ ಒಮ್ಮತವಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇದು ಚುನಾವಣೆಯಲ್ಲಿ ಪ್ರಭಾವ ಬೀರಲಿದೆಯೇ? ಎಂಬುದು ಸದ್ಯದ ಪ್ರಶ್ನೆ.
ರಾಜ್ಯದಲ್ಲಿ ಬಿಜೆಪಿ ಅತ್ಯಧಿಕ ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸದ್ಯದ ಮಾಹಿತಿಗಳ ಪ್ರಕಾರ ಯಾವುದೇ ಒಂದು ಪಕ್ಷ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 146 ಗಳಿಸುವುದಿಲ್ಲ. ರಾಜ್ಯದಲ್ಲಿ ಮೈತ್ರಿಕೂಟದ ಸರ್ಕಾರ ರಚನೆಯೇ ಅನಿವಾರ್ಯವಾಗಲಿದೆ. ಆದರೆ ಹೆಚ್ಚು ಸ್ಥಾನಗಳನ್ನುಗಳಿಸುವ ಪಕ್ಷ ಯಾವುದು?.
ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಹುದ್ದೆ ಪ್ರಮುಖ ಚರ್ಚೆಗೆ ಕಾರಣವಾಗಲಿದೆ. ಒಂದು ವೇಳೆ ಬಿಜೆಪಿ ಹೆಚ್ಚು ಸೀಟು ಗೆದ್ದರೆ ಪಕ್ಷ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನೆ (ಏಕನಾಥ್ ಶಿಂಧೆ ಬಣ)ಗೆ ಬಿಟ್ಟುಕೊಡಲಿದೆಯೇ? ಎಂಬ ಚರ್ಚೆ ಕಾರಣವಾಗಿದೆ. ಮತ್ತೊಂದು ಕಡೆ ಎಂವಿಎಯಲ್ಲಿ ಸಿಎಂ ಹುದ್ದೆ ಬಗ್ಗೆ ಅಷ್ಟು ಗೊಂದಲವಿಲ್ಲ. ಉದ್ಧವ್ ಠಾಕ್ರೆ ಸಿಎಂ ಆಗಲು ಕಾಂಗ್ರೆಸ್, ಎನ್‌ಸಿಪಿ ಒಪ್ಪಿಗೆ ನೀಡುವ ನಿರೀಕ್ಷೆ ಇದೆ.
ಮುಂಬೈ ನಗರದಲ್ಲಿ ಯಾರಿಗೆ ಹೆಚ್ಚು ಸೀಟು, ಮರಾಠವಾಡದಲ್ಲಿ ಯಾರು ಗೆಲ್ಲುವರು, ವಿದರ್ಭ ಪ್ರಾಂತ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟು ಗೆಲ್ಲಲಿದೆಯೇ? ಎಂಬ ಚರ್ಚೆಗಳು ಜೋರಾಗಿವೆ. ಪ್ರಮುಖ ಪಕ್ಷಗಳು ಕೊನೆಯ ಹಂತದ ಪ್ರಚಾರ ಕಾರ್ಯದಲ್ಲಿ ತೊಡಗಿವೆ.












Click it and Unblock the Notifications