Mahakumbh Mela 2025: ಮಹಾ ಕುಂಭಮೇಳದ ಐತಿಹಾಸಿಕ ಮಹತ್ವ, ನಂಬಿಕೆಗಳು
ಲಕ್ನೋ, ಜನವರಿ 13: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ-2025 ಸೋಮವಾರ ಆರಂಭವಾಗಿದೆ. ಜನವರಿ 13ರಿಂದ ಫೆಬ್ರುವರಿ 26ರ ತನಕ ನಡೆಯಲಿರುವ ಈ ಉತ್ಸವದಲ್ಲಿ ಸುಮಾರು 40 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಹಾ ಕುಂಭಮೇಳ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಅಪಾರವಾದ ನಂಬಿಕೆ, ಶ್ರದ್ಧೆಯು ಮಹಾ ಕುಂಭಮೇಳದಲ್ಲಿ ಅಡಗಿದೆ. ಉತ್ತರ ಪ್ರದೇಶ ಸರ್ಕಾರ ಮಹಾ ಕುಂಭಮೇಳಕ್ಕಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದೆ.
ಕುಂಭಮೇಳ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಆದರೆ ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ನಡೆಯುತ್ತದೆ. ಈಗ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ಮಹಾ ಕುಂಭಮೇಳ ಬಹಳ ವಿಶೇಷವಾಗಿದ್ದು, 114 ವರ್ಷಗಳ ಬಳಿಕ ಈ ಮಹಾ ಕುಂಭಮೇಳ ನಡೆಯುತ್ತಿದೆ ಎಂದು ಮಹಾ ಕುಂಭಮೇಳದ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ವೇದ ಮತ್ತು ಪುರಾಣಗಳಲ್ಲಿ ಮಹಾ ಕುಂಭಮೇಳದ ಬಗ್ಗೆ ಉಲ್ಲೇಖವಿದೆ. ಎರಡು ಶತಮಾನಗಳ ಹಿಂದೆ ಭೂಮಿಯ ಮೇಲೆ ಅಪಾರ ಜನರು ಸೇರುವ ಮಹತ್ವದ ಧಾರ್ಮಿಕ ಉತ್ಸವ ಮಹಾ ಕುಂಭಮೇಳ ಎಂದು ಉಲ್ಲೇಖಿಸಲಾಗಿದೆ. ಅರ್ಧ ಕುಂಬಮೇಳ, ಕುಂಭಮೇಳ, ಮಹಾ ಕುಂಭಮೇಳ ಕೇವಲ ನಾಲ್ಕು ನಗರದಲ್ಲಿ ಮಾತ್ರ ಏಕೆ ನಡೆಯುತ್ತದೆ? ಎನ್ನುವುದಕ್ಕೂ ಐತಿಹಾಸಿಕ ಮಹತ್ವವಿದೆ.
ಮಹಾ ಕುಂಭಮೇಳದ ಮಹತ್ವ: ಪುರಾಣಗಳ ಪ್ರಕಾರ ಮಹಾ ಕುಂಭಮೇಳದ ಸಂದರ್ಭದಲ್ಲಿ ದೇವತೆಗಳು ಭೂಮಿಗೆ ಆಗಮಿಸಿ ಭಕ್ತರನ್ನು ಆಶೀರ್ವದಿಸುತ್ತಾರೆ. ಸಮುದ್ರ ಮಂಥನಕ್ಕೆ ಸಹ ಮಹಾ ಕುಂಭಮೇಳದ ಸಬಂಧವಿದೆ ಎಂದು ಹಲವಾರು ಉಲ್ಲೇಖಗಳು ಹೇಳುತ್ತವೆ.
ಕುಂಭ ಎಂದರೆ ಕಲಶ. ಸಮುದ್ರ ಮಂಥನದ ಸಮಯದಲ್ಲಿ ಮಹಾವಿಷ್ಣು ಮೋಹಿನಿಯ ವೇಷದಲ್ಲಿ ಸಾಗುವಾಗ ಅಮೃತದ ಪಾತ್ರೆಯಿಂದ ಅಮೃತದ ನಾಲ್ಕು ಹನಿಗಳು ಪ್ರಯಾಗ್‌ರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜೈನಿಯಲ್ಲಿ ಬಿದ್ದಿತ್ತು. ಆದ್ದರಿಂದ ಈ ನಾಲ್ಕು ಸ್ಥಳಗಳನ್ನು ಪವಿತ್ರ ತೀರ್ಥ ಸ್ಥಳಗಳು, ಇಲ್ಲಿ ಹರಿಯುವ ನದಿಗಳಲ್ಲಿ ತೀರ್ಥಸ್ನಾನ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬುದು ನಂಬಿಕೆಯಾಗಿದೆ.
ನಾಲ್ಕು ನದಿಗಳ ತೀರದಲ್ಲಿ ಕುಂಭಮೇಳ, ಮಹಾ ಕುಂಭಮೇಳ ನಡೆಯುತ್ತದೆ. ಹರಿದ್ವಾರದಲ್ಲಿ ಗಂಗಾ, ಪ್ರಯಾಗರಾಜ್‌ನಲ್ಲಿ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮ, ಉಜೈನಿಯಲ್ಲಿ ಕ್ಷಿಪ್ರಾ ಮತ್ತು ನಾಸಿಕ್ ತ್ರ್ಯಂಬಕೇಶ್ವರದಲ್ಲಿ ಗೋದಾವರಿ ನದಿಗಳ ತಟದಲ್ಲಿ ಇದು ನಡೆಯುತ್ತದೆ. ಕುಂಭಮೇಳದ ಸಮಯದಲ್ಲಿ ಈ ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪ ತೊಳೆದು ಹೋಗುತ್ತವೆ ಮತ್ತು ಪುಣ್ಯಸಿಗುತ್ತದೆ ಎಂಬ ನಂಬಿಕೆ ಇದೆ.
ಡಾ. ದೀಪಕ್‌ಭಾಯಿ ಜ್ಯೋತಿಷಾಚಾರ್ಯ ಅವರು ಮಹಾ ಕುಂಭಮೇಳದ ಕುರಿತು ಮಾಹಿತಿ ನೀಡಿದ್ದು, "ಹಿಂದೂ ಧರ್ಮದಲ್ಲಿ ಗಂಗಾ ನದಿಯ ಮಹತ್ವವು ಎಲ್ಲರಿಗೂ ತಿಳಿದಿದೆ. ಆದರೆ ಕ್ಷಿಪ್ರಾ ನದಿಯನ್ನು ವಿಷ್ಣುವಿನ ವರಾಹ ಅವತಾರದಲ್ಲಿ ಅವರ ಹೃದಯದಿಂದ ಉದ್ಭವಿಸಿದೆ ಎಂದು ನಂಬಲಾಗುತ್ತದೆ. ಗೋದಾವರಿಯನ್ನು ದಕ್ಷಿಣದ ಗಂಗಾ ಎಂದೂ ಕರೆಯಲಾಗುತ್ತದೆ" ಎಂದು ಹೇಳಿದರು.
ಮಹಾ ಕುಂಭಮೇಳದ ನಿಗದಿ ಹೇಗೆ?; ಮಹಾ ಕುಂಭಮೇಳ, ಕುಂಭಮೇಳದ ದಿನಾಂಕವನ್ನು ಹೇಗೆ ನಿಗದಿ ಮಾಡಲಾಗುತ್ತದೆ? ಎಂಬುದು ಸಹ ಕುತೂಹಲ ಮೂಡಿಸುವ ಅಂಶವಾಗಿದೆ. ಗುರು, ಸೂರ್ಯ, ಚಂದ್ರರ ಸ್ಥಾನವನ್ನು ಗಣನೆಗೆ ತೆಗೆದುಕೊಂಡು ರಾಶಿಚಕ್ರಗಳ ಚಿಹ್ನೆಯನ್ನು ಗಮನದಲ್ಲಿಟ್ಟುಕೊಂಡು ಕುಂಭಮೇಳವನ್ನು ನಡೆಸಲು ತೀರ್ಮಾನ ಮಾಡಲಾಗುತ್ತದೆ. ಗುರು ಸೂರ್ಯನ ಸುತ್ತ ಒಂದು ಸುತ್ತು ಬರಲು 12 ವರ್ಷ ತೆಗೆದುಕೊಳ್ಳುತ್ತದೆ ಎಂಬುದು ನಂಬಿಕೆ. ಆದ್ದರಿಂದ ಕುಂಭಮೇಳವನ್ನು 12 ವರ್ಷಗಳ ಅವಧಿಯಲ್ಲಿ 4 ಬಾರಿ ಆಚರಣೆ ಮಾಡಲಾಗುತ್ತದೆ.
ಮಹಾ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಕೆಲವರು ಪಾಪಗಳನ್ನು ತೊಳೆದು ಕೊಳ್ಳಲು ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಮಾತ್ರ ಆಗಮಿಸುತ್ತಾರೆ. ಆದರೆ 'ಕಲ್ಪವಾಸಿ' ಎಂದು ಕರೆಯಲ್ಪಡುವವರು ನದಿಯ ತೀರದಲ್ಲಿಯೇ ಉಳಿದುಕೊಳ್ಳುತ್ತಾರೆ, ದೈನಂದಿನ ಜೀವನದ ಹೋರಾಟದಿಂದ ವಿಶ್ರಾಂತಿ ಪಡೆಯಲು ಮತ್ತು ಆಧ್ಯಾತ್ಮಿಕ ಶ್ರೇಯಸ್ಸನ್ನು ಸಂಪಾದಿಸಲು. ಹಲವರು ಇಲ್ಲಿ ವಿವಿಧ ರೀತಿಯ ದಾನಗಳನ್ನು ನೀಡುತ್ತಾರೆ.
12ನೇ ಶತಮಾನದಿಂದ ಕುಂಭಮೇಳ ರಾಜಮನೆತನದ ಪ್ರೋತ್ಸಾಹದ ಮೂಲಕ ನಡೆಯುತ್ತಿತ್ತು. ಸ್ವಾತಂತ್ರ್ಯ ಸಂಗ್ರಾಮದ ಬಳಿಕ 1954ರಲ್ಲಿ ಮೊದಲ ಕುಂಭಮೇಳವನ್ನು ಆಯೋಜಿಸಲಾಗಿತ್ತು. ಪವಿತ್ರ ನದಿಗಳ ತಟದಲ್ಲಿ ಸ್ನಾನಘಟ್ಟ, ದೇವಾಲಯಗಳು ಅಭಿವೃದ್ಧಿಗೊಳ್ಳುತ್ತಿದ್ದಂತೆಯೇ ಕುಂಭಮೇಳಗಳು ಜನಾಕರ್ಷಣೆಯನ್ನು ಗಳಿಸಿದವು.












Click it and Unblock the Notifications