Upendra: ಉಪೇಂದ್ರರಿಂದ ಸಂವಿಧಾನಕ್ಕೆ ಅವಮಾನ, ಅವರ ಪ್ರವೃತ್ತಿಯನ್ನು ನಿಲ್ಲಿಸಲು ಪೂರಕ ಕ್ರಮ- ಸಚಿವ ಮಹಾದೇವಪ್ಪ
ಬೆಂಗಳೂರು, ಆಗಸ್ಟ್ 14: ನಟ ಉಪೇಂದ್ರ ನೀಡಿರುವ ಜಾತಿ ನಿಂದನೆ ಹೇಳಿಕೆಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದಲಿತ ಹಾಗೂ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟಿಸಲು ಮುಂದಾಗಿವೆ. ಇದೇ ವೇಳೆ, ಸಚಿವ ಡಾ ಎಚ್‌ಸಿ ಮಹಾದೇವಪ್ಪ ಅವರು ಉಪೇಂದ್ರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ( ಈಗ ಎಕ್ಸ್ ) ಮಾಡಿರುವ ಅವರು, 'ಉಪೇಂದ್ರ ಅವರು ಒಬ್ಬ ಖ್ಯಾತ ನಟ, ನಿರ್ಮಾಪಕ ಮತ್ತು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೂಲಕ ಸಾರ್ವಜನಿಕ ಜೀವನದಲ್ಲಿ ಇರಲು ಬಯಸುತ್ತಿರುವ ವ್ಯಕ್ತಿ. ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವರು ಜಾತಿ ಹೆಸರನ್ನು ಕರೆಯುತ್ತಿರುವುದನ್ನು ನೋಡಿದರೆ ಇದು ಸಮುದಾಯಕ್ಕೆ ಮಾತ್ರವಲ್ಲದೇ ಸಂವಿಧಾನಕ್ಕೂ ಮಾಡಿದ ಅಪಚಾರ ಆಗಿದೆ' ಎಂದು ಮಹಾದೇವಪ್ಪ ಹೇಳಿದ್ದಾರೆ.

'ಇನ್ನು ಸೂಕ್ಷ್ಮವಾಗಿ ಗಮನಿಸುವಾಗ ಉಪೇಂದ್ರ ಅವರು ತಮ್ಮ ಮಾತುಗಳಿಗೆ ಪೂರಕವಾಗಿ ಹೊಲಗೇರಿ ಎಂಬ ಪದವನ್ನು ಬಳಸಿರುವುದೇ ಅಪ್ರಸ್ತುತ. ಜೊತೆಗೆ ಅವರು ಕ್ಷಮೆಯಾಚನೆಯಲ್ಲೂ ಸಹ ನಾನೂ ಕೂಡಾ ಬಡತನದಿಂದ ಬಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಬಡತನವೇ ಬೇರೆ ಜಾತಿ ಆಧಾರಿತವಾದ ಸಾಮಾಜಿಕ ಅಸಮಾನತೆಯೇ ಬೇರೆ ಎಂಬ ಸಂಗತಿಯನ್ನು ಅವರು ಅರಿಯಬೇಕು' ಎಂದು ತಿಳಿಸಿದ್ದಾರೆ.
ಹೀಗಾಗಿ ಸಾರ್ವಜನಿಕ ಜೀವನದಲ್ಲಿ ಇರುವ ಅವರು ಈ ದೇಶದ ಅಸಮಾನತೆ ಮತ್ತು ನೋವಿನ ಚರಿತ್ರೆಯನ್ನೇ ತಿಳಿಯದಿದ್ದ ಮೇಲೆ ಇವರ ಸಮಾಜ ಬದಲಾಯಿಸುವಂತಹ ಮಾತುಗಳಿಗೆ ಯಾವ ಅರ್ಥವಿಲ್ಲ ಎಂದು ಸಹಜವಾಗಿ ಅನಿಸುತ್ತಿದೆ ಎಂದು ಮಹಾದೇವಪ್ಪ ಕಿಡಿ ಕಾರಿದ್ದಾರೆ.
'ಈಗಾಗಲೇ ಬಹುತೇಕ ದಲಿತ ಸಂಘಟನೆಗಳು ಈ ಕುರಿತಂತೆ ಮನವಿ ಸಲ್ಲಿಸುತ್ತಿರುವ ಕಾರಣ ಶೋಷಿತ ಸಮುದಾಯಗಳನ್ನು Taken for granted ಆಗಿ ಉಲ್ಲೇಖಿಸುವ ಈ ಉಪೇಂದ್ರರ ಪ್ರವೃತ್ತಿಯನ್ನು ನಿಲ್ಲಿಸಲು ಮತ್ತು ಸಮುದಾಯಗಳಿಗೆ ಸಂವಿಧಾನದಲ್ಲೇ ಇರುವ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲಾಗುವುದು' ಎಂದು ಮಹಾದೇವಪ್ಪ ಟ್ವೀಟ್ ಹೇಳಿದ್ದಾರೆ.

ಮಹಾದೇವಪ್ಪ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಹಾಲು ಉತ್ಪಾದಕ ಸಹಕಾರ ಸಂಘ ಉಪಾಧ್ಯಕ್ಷ ಹೆಚ್.ಎಸ್. ಅಶೋಕ ಅವರು, 'ಹೊಲಗೇರಿ ಎಂಬ ಪದವನ್ನು ಇನ್ನೊಮ್ಮೆ ಯಾರು ಕೂಡ ಮಾತನಾಡಬಾರದು, ಆ ರೀತಿ ಉಪೇಂದ್ರರಿಗೆ ಕಾನೂನಿನ ಕ್ರಮವನ್ನು ಜರಗಿಸಲು ಪೋಲಿಸ್ ಇಲಾಖೆಗೆ ಬೆಂಬಲವನ್ನು ನೀಡಬೇಕೆಂದು ಮನವಿ, ಪೊಲೀಸ್ ಇಲಾಖೆಯು ಯಾವುದೇ ಒತ್ತಡಕ್ಕೆ ಮತ್ತು ಲಾಬಿಗೆ ಒಳಗಾಗದ ರೀತಿಯಲ್ಲಿ ಸೂಕ್ತ ನಿರ್ದೇಶನ ನೀಡಬೇಕೆಂದು ಈ ಮೂಲಕ ತಮಗೆ ಮನವಿ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.
ಉಪೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಟ್ವೀಟಿಗರೊಬ್ಬರು, 'ಬ್ರಾಹ್ಮಣ್ಯದ ವಿರುದ್ಧ ಮಾತನಾಡಿದ್ದಕ್ಕೆ ಚೇತನ್ ಅಹಿಂಸಾಗೆ ಜೈಲಿಗೆ ಅಟ್ಟಿದರು. ಆದರೆ ಬ್ರಾಹ್ಮಣ ಮಾತನಾಡಿದ್ದಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದಾಗ ದ್ವೇಷ ಏಕೆ ಮಾಡುತ್ತೀರಿ, ಕ್ಷಮಿಸಿ ಅಂದರು. ಒದೆಯೂ ನಾವೇ ತಿನ್ನಬೇಕು, ಔದಾರ್ಯವೂ ನಾವೇ ತೋರಿಸಬೇಕು. ಅವರಿಗೆ ಮಾತ್ರ ಶಾಂತಿಯುತ ಜೀವನ ನೀಡಬೇಕು. ಈ ನೀತಿ ಬದಲಾಗಲೇಬೇಕು' ಎಂದು ಅವರು ಹೇಳಿದ್ದಾರೆ.

ನಟ ಉಪೇಂದ್ರ ಅವರು ವಿಡಿಯೊವೊಂದರಲ್ಲಿ 'ಊರು ಇದ್ದ ಕಡೆ ಹೊಲಗೇರಿ ಇದ್ದೇ ಇರುತ್ತದೆ' ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದಕ್ಕೆ ದಲಿತ ಸಮುದಾಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಿಂದ ಡಿಲೀಟ್ ಮಾಡಿರುವ ನಟ ಉಪೇಂದ್ರ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.












Click it and Unblock the Notifications