ಕೆಸಿಆರ್ ಪ್ರಧಾನಿ ಮೋದಿ ಅವರ ರಿಮೋಟ್ ಕಂಟ್ರೋಲ್ ಆಗಿದ್ದಾರೆ: ರಾಹುಲ್ ಗಾಂಧಿ
ಹೈದರಾಬಾದ್, ಜುಲೈ 3: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಬಿಜೆಪಿಯ ಬಿ- ಟೀಮ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ರಹಸ್ಯವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟೀಕಿಸಿದ್ದಾರೆ.
ತೆಲಂಗಾಣದ ಖಮ್ಮಮ್‌ನಲ್ಲಿ ಕಾಂಗ್ರೆಸ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಹುಲ್, ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ನೆರೆಯ ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿದಂತೆ ಬಿಜೆಪಿಯ ಬಿ-ಟೀಮ್" ಅನ್ನು ಸೋಲಿಸಲು ಪ್ರತಿಜ್ಞೆ ಮಾಡಿದರು. ಬಿಆರ್‌ಎಸ್ ಅನ್ನು ಬಿಜೆಪಿ ರಿಶ್ತೇದಾರ್ ಸಮಿತಿ ಎಂದು ಕರೆದಿರುವ ಅವರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ರಿಮೋಟ್ ಕಂಟೋಲ್‌ನಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.

ನಿರ್ಗತಿಕ ಹಿರಿಯ ನಾಗರಿಕರು ಮತ್ತು ವಿಧವೆಯರಿಗೆ ಮಾಸಿಕ 4000 ರೂಪಾಯಿ ಪಿಂಚಣಿ ಮತ್ತು ಆದಿವಾಸಿಗಳಿಗೆ ಪೋಡು ಭೂಮಿಯನ್ನು ಹಸ್ತಾಂತರಿಸುವುದಾಗಿ ಕಾಂಗ್ರೆಸ್ ತೆಲಂಗಾಣದಲ್ಲಿ ಚುನಾವಣಾ ಭರವಸೆಯನ್ನು ನೀಡಿದೆ. ಕರ್ನಾಟಕ ಚುನಾವಣೆಯಲ್ಲಿ ನಾವು ಭ್ರಷ್ಟ ಮತ್ತು ಬಡವರ ವಿರೋಧಿ ಬಿಜೆಪಿ ಸರ್ಕಾರವನ್ನು ಸೋಲಿಸಿದ್ದೇವೆ. ತೆಲಂಗಾಣದಲ್ಲೂ ಫಲಿತಾಂಶ ಮರುಕಳಿಸಲಿದೆ ಎಂದು ರಾಹುಲ್ ಹೇಳಿದರು.
ಇತ್ತೀಚೆಗೆ ನಡೆದ ವಿರೋಧ ಪಕ್ಷಗಳ ಸಭೆಗೆ ಬಿಆರ್‌ಎಸ್ ಅನ್ನು ಆಹ್ವಾನಿಸುವ ಸಲಹೆಯನ್ನು ತಮ್ಮ ಪಕ್ಷ ವಿರೋಧಿಸಿದೆ. ಬಿಆರ್‌ಎಸ್ ಬಿಜೆಪಿಯ ಬಿ ಟೀಮ್ ಆಗಿರುವುದರಿಂದ ನಾವು ಅವರನ್ನು ಸಭೆಯಿಂದ ಬಹಿಷ್ಕರಿಸುತ್ತೇವೆ ಎಂದು ಹೇಳಿದ್ದೇವೆ. ಬಿಜೆಪಿ ಆಗಲಿ ಬಿಆರ್‌ಎಸ್ ಆಗಲಿ ಅವರ ಜೊತೆ ನಾವು ಕುಳಿತುಕೊಳ್ಳಲು ಸಾಧ್ಯವಿಲ್ಲ. ನಾವು ಅದರೊಂದಿಗೆ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಿಲ್ಲ ಎಂದರು.
ತೆಲಂಗಾಣದಲ್ಲಿ ಬಿಜೆಪಿ ನಶಿಸುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಬಿ-ಟೀಮ್ ಬಿಆರ್‌ಎಸ್ ನಡುವೆ ಹೋರಾಟ ಕೇಂದ್ರೀಕೃತವಾಗಲಿದೆ. ಕಾಂಗ್ರೆಸ್ ಬಿಜೆಪಿ ವಿರುದ್ಧ ನಿಂತಿದ್ದರೆ, ಬಿಆರ್‌ಎಸ್- ಕೆಸಿಆರ್ ರೈತ ಮಸೂದೆಯನ್ನು ಬೆಂಬಲಿಸಿ ಸಂಸತ್ತಿನಲ್ಲಿ ಬಿಜೆಪಿಯ ಬಿ ಟೀಮ್‌ನಂತೆ ಕಾರ್ಯನಿರ್ವಹಿಸಿದರು. ಕೆಸಿಆರ್ ಅವರ ರಿಮೋಟ್ ಕಂಟ್ರೋಲ್ ಮೋದಿಯವರ ಕೈಯಲ್ಲಿರುವುದರಿಂದ (ಪ್ರಧಾನಿ ನರೇಂದ್ರ) ಮೋದಿಯವರು ಏನನ್ನು ಬಯಸುತ್ತಾರೋ ಅದನ್ನು ನಿಮ್ಮ ಮುಖ್ಯಮಂತ್ರಿ ಪೂರೈಸುತ್ತಾರೆ ಎಂದು ರಾಹುಲ್ ಹೇಳಿದರು.

ಕೆಸಿಆರ್ ಅವರು ತೆಲಂಗಾಣದ ರಾಜ ಮತ್ತು ರಾಜ್ಯವು ಅವರ ಜಹಗೀರ್ ಎಂದು ಭಾವಿಸುತ್ತಾರೆ. ಆಡಳಿತ ಪಕ್ಷವು ಬೃಹತ್ ಕಾಳೇಶ್ವರಂ ನೀರಾವರಿ ಯೋಜನೆಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಎಂದು ರಾಹುಲ್ ಆರೋಪಿಸಿದರು.
(ದೆಹಲಿ) ಮದ್ಯ ಹಗರಣದಂತಹ ಭ್ರಷ್ಟಾಚಾರದ ಬಗ್ಗೆ ಕೇಂದ್ರ ಏಜೆನ್ಸಿಗಳಿಗೆ ಮಾಹಿತಿ ನೀಡಲಾಗಿದೆ. ಅದಕ್ಕಾಗಿಯೇ ನಾನು ಬಿಆರ್‌ಎಸ್ ಅನ್ನು ಬಿಜೆಪಿಯ ಬಿ-ಟೀಮ್, ಬಿಜೆಪಿ ರಿಶ್ತೇದಾರ್ ಸಮಿತಿ ಎಂದು ಹೇಳುತ್ತೇನೆ ಎಂದರು. ತೆಲಂಗಾಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಭಟ್ಟಿ ವಿಕ್ರಮಾರ್ಕ ಅವರು ರಾಜ್ಯದಲ್ಲಿ 1,300 ಕಿಮೀ ಉದ್ದದ ಪಾದಯಾತ್ರೆ ಮತ್ತು ಈ ಹಿಂದೆ ಬಿಆರ್‌ಎಸ್‌ನಲ್ಲಿದ್ದ ಖಮ್ಮಂನ ಮಾಜಿ ಲೋಕಸಭಾ ಸಂಸದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಖಮ್ಮಂ ಸಭೆಯನ್ನು ಆಯೋಜಿಸಲಾಗಿತ್ತು.
ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕೆಸಿಆರ್ ಮೋದಿ ಅವರ ರಿಮೋಟ್ ಕಂಟ್ರೋಲ್" ಹೇಳಿಕೆಗಾಗಿ ಮತ್ತು ಭಾರತ ರಾಷ್ಟ್ರ ಸಮಿತಿಯನ್ನು (ಬಿಆರ್‌ಎಸ್) ತೆಲಂಗಾಣದಲ್ಲಿ ಬಿಜೆಪಿಯ ಬಿ ಟೀಮ್ ಎಂದು ಉಲ್ಲೇಖಿಸಿದ್ದಕ್ಕೆ ತರಾಟೆಗೆ ತೆಗೆದುಕೊಂಡರು. ತೆಲಂಗಾಣದಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಬಿಆರ್‌ಎಸ್ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.












Click it and Unblock the Notifications