Jharkhand Axis My India Exit Poll: ಎನ್‌ಡಿಎ Vs ಇಂಡಿಯಾ; ಜಾರ್ಖಂಡ್ ಗದ್ದುಗೆ ಯಾರಿಗೆ?
ಜಾರ್ಖಂಡ್ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. 81 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ನವೆಂಬರ್ 13 ರಂದು ಮೊದಲ ಹಂತದಲ್ಲಿ 48 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ನವೆಂಬರ್ 20 (ಇಂದು) 38 ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯವಾಗಿದೆ. ಜಾರ್ಖಂಡ್‌ನಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಬಗ್ಗೆ ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ಫಲಿತಾಂಶ ಏನಾಗಬಹುದು ಎನ್ನುವ ಮುನ್ಸೂಚನೆ ಕೊಟ್ಟಿವೆ.
ಆಕ್ಸಿಸ್ - ಮೈಇಂಡಿಯಾ ಕೂಡ ಚುನಾವಣೋತ್ತರ ಸಮೀಕ್ಷಾ ಫಲಿತಾಂಶವನ್ನು ಬಹಿರಂಗಗೊಳಿಸಿವೆ. ಮೊದಲ ಹಂತದ ಚುನಾವಣೆಯಲ್ಲಿ 43 ಕ್ಷೇತ್ರಗಳಲ್ಲಿ 64.86 ರಷ್ಟು ಮತದಾನವಾಗಿತ್ತು. ಎರಡನೇ ಹಂತದಲ್ಲಿ 38 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆ ವೇಳೆಗೆ 67.59 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಯಾರಿಗೆ ಎಷ್ಟು ಸ್ಥಾನ?
ಆಕ್ಸಿಸ್ - ಮೈಇಂಡಿಯಾ ಕೂಡ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜೆಎಂಎಂ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 53 ಸ್ಥಾನಗಳನ್ನು ಪಡೆಯಲಿದೆ, ಎನ್‌ಡಿಎ ಒಕ್ಕೂಟವು 25 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಇತರರು 3 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ಫಲಿತಾಂಶ ತಿಳಿಸಿದೆ.
ಉತ್ತರ ಚೋಟಾನಾಗ್‌ಪುರ್ ವಿಭಾಗ 25 ಕ್ಷೇತ್ರಗಳಲ್ಲಿ ಎನ್‌ಡಿಎ 11 ಮತ್ತು ಇಂಡಿಯಾ ಒಕ್ಕೂಟ 12 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಎರಡೂ ಬಣಗಳ ನಡುವೆ ಸಮಬಲದ ಹೋರಾಟ ನಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಜೆಎಲ್‌ಕೆಎಂ 2 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ತಿಳಿಸಿದೆ. ಶಾಂತಲ ಪರಗಣ ವಿಭಾಗದ 18 ಸ್ಥಾನಗಳಲ್ಲಿ ಇಂಡಿಯಾ ಒಕ್ಕೂಟ 15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಎನ್‌ಡಿಎ ಕೇವಲ 3 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ.
ನವೆಂಬರ್ 23ರಂದು ಶನಿವಾರ ಜಾರ್ಖಂಡ್ ವಿಧಾನಸಭಾ ಚುನವಾಣೆ ಫಲಿತಾಂಶ ಹೊರಬೀಳಲಿದೆ. ಆಡಳಿತಾರೂಢ ಜೆಎಂಎಂ ಮತ್ತು ಕಾಂಗ್ರೆಸ್ ಮೈತ್ರಿಕೂಟ ಈ ಬಾರಿ ಇಂಡಿಯಾ ಒಕ್ಕೂಟದ ಅಡಿಯಲ್ಲಿ ಸ್ಪರ್ಧೆ ಮಾಡಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಇಂಡಿಯಾ ಒಕ್ಕೂಟಕ್ಕೆ ಸ್ಪರ್ಧೆ ನೀಡುತ್ತಿದೆ.
ಬಾಂಗ್ಲಾದೇಶಿ ನುಸುಳುಕೋರರ ಸಮಸ್ಯೆಯನ್ನು ಈ ಬಾರಿ ಚುನಾವಣೆಯಲ್ಲಿ ಪ್ರಮುಖ ಪ್ರಚಾರ ವಿಚಾರವನ್ನಾಗಿ ಮಾಡಿಕೊಳ್ಳಲಾಗಿತ್ತು. ತಾವು ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶಿ ನುಸುಳುಕೋರರನ್ನು ಪತ್ತೆ ಹಚ್ಚಿ ರಾಜ್ಯದಿಂದ ಹೊರ ಹಾಕಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಆಡಳಿತಾರೂಢ ಜೆಎಂಎಂ -ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದು, ರಾಜ್ಯವನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಹೇಳಿದ್ದರು.
ನಮ್ಮ ಆಡಳಿತದಲ್ಲಿ ಜಾರ್ಖಂಡ್ ಅಭಿವೃದ್ಧಿ ಹೊಂದಿದ್ದು, ಇನ್ನಷ್ಟು ಅಭಿವೃದ್ಧಿ ಕೆಲಸಗಳಿಗಾಗಿ ಜೆಎಂಎಂ ಪಕ್ಷಕ್ಕಾಗಿ ಮತ ನೀಡಿ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಮನವಿ ಮಾಡಿದ್ದಾರೆ. ಬಿಜೆಪಿ ವಿಭಜಕ ರಾಜಕೀಯ ಮಾಡುತ್ತಿದ್ದು, ಅವರನ್ನು ಅಧಿಕಾರದಿಂದ ದೂರ ಇಡಬೇಕು ಎಂದಿದ್ದಾರೆ.
ನವೆಂಬರ್ 23ರಂದು ಶನಿವಾರ ಮತ ಎಣಿಕೆ ನಡೆಯಲಿದ್ದು ಮತದಾರ ಯಾರಿಗೆ ಜೈಕಾರ ಹಾಕಿದ್ದಾನೆ ಎನ್ನುವ ವಿಚಾರ ತಿಳಿಯಲಿದೆ.
ಮಹಾರಾಷ್ಟ್ರದ ಕತೆ ಏನು?
ಮಹಾರಾಷ್ಟ್ರವಿಧಾನಸಭಾ ಚುನಾವಣೆ ಫಲಿತಾಂಶ ಕೂಡ ನವೆಂಬರ್ 23ರಂದು ಹೊರಬೀಳಲಿದ್ದು, ಇಂದು ಒಂದೇ ಹಂತದಲ್ಲಿ 288 ಕ್ಷೇತ್ರಗಳಲ್ಲಿ ಮತದಾನವಾಗಿದೆ. ಬಹುತೇಕ ಸಮೀಕ್ಷೆಗಳು ಎನ್‌ಡಿಎ ಒಕ್ಕೂಟ ಗೆಲುವು ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿವೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ 145 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದ್ದು, ಪೋಲ್ ಆಫ್ ಪೋಲ್ ಪ್ರಕಾರ 142-163 ಸ್ಥಾನಗಳಲ್ಲಿ ಎನ್‌ಡಿಎ ಗೆಲುವು ಸಾಧಿಸುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications