Adani: ಅದಾನಿಯಿಂದ ಲಂಚ ಪಡೆದ ಆರೋಪ; ಜಗನ್ ರೆಡ್ಡಿ ಹೇಳಿದ್ದೇನು?
ಅದಾನಿ ಗ್ರೂಪ್ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಸದ್ಯ ಭಾರತ ರಾಜಕೀಯ ಮತ್ತು ಕೈಗಾರಿಕಾ ವಲಯದಲ್ಲಿ ಸಂಚಲನ ಮೂಡಿಸಿದೆ. ತಮಿಳುನಾಡು ಸರ್ಕಾರ ಮತ್ತು ಒಡಿಶಾದ ಬಿಜು ಜನತಾ ದಳ (ಬಿಜೆಡಿ) ಅದಾನಿ ಪವರ್ ವಿದ್ಯುತ್ ಖರೀದಿ ಪ್ರಕರಣದಲ್ಲಿ ಲಂಚ ಪಡೆದಿದೆ ಎನ್ನುವ ಆರೋಪ ಕೇಳಿ ಬಂದ ಬೆನ್ನಲ್ಲೇ, ಇದೀಗ ಆಂಧ್ರಪ್ರದೇಶ ಮಾಜಿ ಸಿಎಂ ಜಗನ್ ರೆಡ್ಡಿ ಸರ್ಕಾರದ ಅವಧಿಯಲ್ಲೂ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.
ಅದಾನಿ ಗ್ರೂಪ್‌ನಿಂದ ವಿದ್ಯುತ್ ಖರೀದಿ ಒಪ್ಪಂದಕ್ಕಾಗಿ ತಮ್ಮ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ಲಂಚೆ ಪಡೆದಿದ್ದಾರೆ ಎಂದು ಯುಎಸ್ ಮಾಡಿರುವ ಆರೋಪವನ್ನು ಜಗನ್ ರೆಡ್ಡಿ ತಿರಸ್ಕರಿಸಿದ್ದಾರೆ. ಇದು ಸರ್ಕಾರದ ಸಂಸ್ಥೆಗಳ ನಡುವಿನ ಒಪ್ಪಂದವಾಗಿದ್ದು ಯಾವುದೇ ಖಾಸಗಿ ವ್ಯಕ್ತಿಗಳು ಹಸ್ತಕ್ಷೇಪ ಮಾಡಿಲ್ಲ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ರೆಡ್ಡು ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಗನ್ ರೆಡ್ಡಿ, ಕೇಂದ್ರ ಸರ್ಕಾರ ನಡೆಸುತ್ತಿರುವ ಸಾರ್ವಜನಿಕ ವಲಯದ ಘಟಕ (ಪಿಎಸ್‌ಯು) ಆಗಿರುವ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಇಸಿಐ) ತಮಿಳುನಾಡು, ಆಂಧ್ರಪ್ರದೇಶ ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳಿಗೆ ಪ್ರತಿ ಯೂನಿಟ್‌ಗೆ ₹ 2.49 ದರದಲ್ಲಿ ವಿದ್ಯುತ್ ಪೂರೈಕೆ ಮಾಡಿದೆ. ಆಂಧ್ರಪ್ರದೇಶವು ಎಂದಿಗೂ ಕಡಿಮೆ ದರದಲ್ಲಿ ವಿದ್ಯುತ್ ಖರೀದಿಸಿಲ್ಲ ಎಂದು ಹೇಳಿದ ಅವರು, ರಾಜ್ಯಕ್ಕೆ ಕೆಲವು ಮನ್ನಾ ಸೇರಿದಂತೆ ಇತರ ಪ್ರೋತ್ಸಾಹಗಳನ್ನು ನೀಡಲಾಗಿದ್ದು, ಇದರಿಂದ ಸರ್ಕಾರದ ಮೇಲಿನ ಹೊರೆ ಕಡಿಮೆಯಾಗಿದೆ ಎಂದು ಹೇಳಿದರು.
ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆ
ಇದು ಎಸ್‌ಇಸಿಐ, ಆಂಧ್ರಪ್ರದೇಶ ಸರ್ಕಾರ ಮತ್ತು ರಾಜ್ಯ ವಿದ್ಯುತ್ ವಿತರಣಾ ಕಂಪನಿ ನಡುವೆ ನಡೆದಿರುವ ಒಪ್ಪಂದ. ಇದರಲ್ಲಿ ಯಾವುದೇ ಖಾಸಗಿ ಸಂಸ್ಥೆಯಾಗಲಿ, ವ್ಯಕ್ತಿಯಾಗಲಿ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ, ರಾಜಕೀಯ ದುರುದ್ದೇಶದಿಂದ ಕೆಲವು ಮಾಧ್ಯಮ ಸಂಸ್ಥೆಗಳು ಲಂಚದ ಆರೋಪ ಮಾಡುತ್ತಿದ್ದು, ಅಂತಹ ಮಾಧ್ಯಮಗಳ ವಿರುದ್ಧ ₹ 100 ಕೋಟಿಗೆ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದರು.
ತಾವು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದಿರುವ ಜಗನ್ ರೆಡ್ಡಿ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಒಪ್ಪಂದವನ್ನು ರದ್ದು ಮಾಡುವ ಸಾಧ್ಯತೆ ಇದೆಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಹಾಗೆ ಮಾಡುವುದು ಬುದ್ದಿವಂತಿಕೆಯಲ್ಲ ಎಂದರು.
ಅದಾನಿ ಸಂಸ್ಥೆಯ ಮುಖ್ಯಸ್ಥ ಗೌತಮ್ ಅದಾನಿ ಜೊತೆ ನಡೆಸಿದ ಸಭೆಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅದಾನಿ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಹಲವು ಯೋಜನೆಗಳ ಒಪ್ಪಂದ ಮಾಡಿಕೊಂಡಿದ್ದು, ರಾಜ್ಯದ ಮುಖ್ಯಸ್ಥರು ಪ್ರಮುಖ ಉದ್ಯಮಿಗಳನ್ನು ಭೇಟಿ ಮಾಡುವುದು ಸಾಮಾನ್ಯ ವಿಚಾರ ಎಂದು ಹೇಳಿದರು.












Click it and Unblock the Notifications