Laddu Prasada Row: ಜಗನ್ ತಿರುಮಲ ದೇವಸ್ಥಾನ ಭೇಟಿ ಕಾರ್ಯಕ್ರಮ ರದ್ದು; ಸರ್ಕಾರದ ವಿರುದ್ಧ ಆಕ್ರೋಶ
ತಿರುಪತಿ ತಿರುಮಲ ತಿಮ್ಮಪ್ಪ ದೇವಸ್ಥಾನದ ಲಾಡು ಪ್ರಸಾದದ ವಿವಾದದ ನಡುವೆ, ಆಂಧ್ರ ಪ್ರದೇಶ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ದೇವಸ್ಥಾನ ಭೇಟಿ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ. ತಿರುಪತಿ ಲಾಡು ಪ್ರಸಾದದಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಅಂಶ ಇರುವುದು ಪತ್ತೆಯಾದ ಬಳಿಕ ಜಗನ್ ರೆಡ್ಡಿಯವರಿಗೆ ತಿರುಪತಿ ದೇವಸ್ಥಾನಕ್ಕೆ ಬರದಂತೆ ನಿಷೇಧಾಜ್ಞೆ ವಿಧಿಸಲಾಗಿದೆ. ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿಗೆ ನಿಷೇಧಾಜ್ಞೆಯನ್ನು ಧಿಕ್ಕರಿಸದಂತೆ ಪೊಲೀಸರು ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.
ತಮ್ಮನ್ನು ತಿರುಮಲಕ್ಕೆ ಹೋಗದಂತೆ ತಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಜಗನ್ ರೆಡ್ಡಿ ಆರೋಪಿಸಿದರು. ತಾಡೇಪಲ್ಲಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆಂಧ್ರ ಪ್ರದೇಶದಲ್ಲಿ ರಾಕ್ಷಸರ ಆಡಳಿತ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯವೊಂದರ ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿಲ್ಲ, ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಬಂಧಿಸುವುದಾಗಿ ನಮ್ಮ ಪಕ್ಷದ ನಾಯಕರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಹೇಳಿದರು.

ನನ್ನನ್ನು ಹೊರತುಪಡಿಸಿ, ವೈಸಿಪಿ ನಾಯಕರನ್ನು ತಿರುಮಲಕ್ಕೆ ಹೋಗಲು ಬಿಡುತ್ತಿಲ್ಲ. ನೆರೆಯ ರಾಜ್ಯಗಳಿಂದ ಬಿಜೆಪಿ ಜನರನ್ನು ತಿರುಮಲಕ್ಕೆ ಕರೆತರುತ್ತಿದೆ, ಈ ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ
ಲಾಡು ಪ್ರಸಾದ ವಿಚಾರದಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ
ಚಂದ್ರಬಾಬು ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಜಗನ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಚಂದ್ರಬಾಬು ರಾಜಕೀಯ ದುರುದ್ದೇಶದಿಂದ ಪ್ರಸಾದ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಹೇಳಿದರು. 100 ದಿನಗಳ ಆಡಳಿತವನ್ನು ದಿಕ್ಕು ತಪ್ಪಿಸಲು ಲಾಡು ಪ್ರಸಾದ ವಿವಾದವನ್ನು ಮುನ್ನಲೆಗೆ ತರಲಾಗಿದೆ ಎಂದು ಟೀಕಿಸಿದ ಅವರು ಬಿಜೆಪಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಚಂದ್ರಬಾಬು ನಾಯ್ಡು ಅವರು ತಿರುಮಲ ದೇವಸ್ಥಾನದ ಅನನ್ಯತೆಗೆ ಧಕ್ಕೆ ತರಲು ಅಪಪ್ರಚಾರ ಮಾಡಿದ್ದಾರೆ. ಲಾಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಇದೆ ಎಂದು ಸುಳ್ಳು ಆರೋಪ ಮಾಡಿ ತಿರುಮಲ ದೇವಸ್ಥಾನದ ಮೇಲಿನ ಗೌರವಕ್ಕೆ ಧಕ್ಕೆ ತರುತ್ತಿರುವ ಚಂದ್ರಬಾಬು ನಾಯ್ಡು ಅವಎಇಗೆ ಬಿಜೆಪಿಯವರು ಯಾಕೆ ಛೀಮಾರಿ ಹಾಕಿಲ್ಲ ಎಂದು ಪ್ರಶ್ನೆ ಮಾಡಿದರು.
ಹಿಂದೂ ಧರ್ಮದ ರಕ್ಷಕರು ಎಂದು ಹೇಳಿಕೊಳ್ಳುವ ಬಿಜೆಪಿ, ಚಂದ್ರಬಾಬು ನಾಯ್ಡು ಅವರು ಸುಳ್ಳು ಪ್ರಚಾರ ಮಾಡುತ್ತಿದ್ದರೂ ಸುಮ್ಮನಿರುವುದು ಏಕೆ, ಹಿಂದೂ ಧರ್ಮ ಎಂದರೆ ಮಾನವೀಯತೆ ತೋರಿಸುವುದು, ನನ್ನ ಧರ್ಮ ಮಾನವೀಯತೆ ಎಂದು ಜಗನ್ ಹೇಳಿದ್ದಾರೆ.
ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಅಧಿಕಾರದ ಅವಧಿಯಲ್ಲಿ ತಿರುಮಲದಲ್ಲಿ ಭಕ್ತರ ನಂಬಿಕೆಯನ್ನು ಘಾಸಿಗೊಳಿಸಲಾಗಿದೆ ಎಂದು ಆರೋಪಿಸಿ ಎನ್‌ಡಿಎ ಮೈತ್ರಿಕೂಟದ ರಾಜಕೀಯ ಪಕ್ಷಗಳು ತಿರುಪತಿ ಜಿಲ್ಲೆಯಲ್ಲಿ ಹಲವು ಹಿಂದೂ ಸಮುದಾಯಗಳೊಂದಿಗೆ ಪ್ರತಿಭಟನೆ ನಡೆಸುತ್ತಿವೆ.












Click it and Unblock the Notifications