Chandrayaan-3: ಸಿಂಗಾಪುರದ ಉಪಗ್ರಹಗಳನ್ನು ಉಡಾಯಿಸಲಿದೆ ಭಾರತ!
ಶ್ರೀಹರಿಕೋಟಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಶಕ್ತಿಗೆ ಭಾರತವೇ ಸಾಟಿ ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಏಕೆಂದರೆ ಘಟಾನುಘಟಿ ದೇಶಗಳೇ ತಮ್ಮ ಉಪ್ರಗ್ರಹ ಉಡವಾಣೆ ಮಾಡಿ ಅಂತಾ ಭಾರತದ ಬೆನ್ನು ಬೀಳುತ್ತಿವೆ. ಅದೇ ರೀತಿ ಸಿಂಗಾಪುರ ಕೂಡ ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ಸಹಾಯದೊಂದಿಗೆ ತನ್ನ ಉಪಗ್ರಹ ಉಡಾವಣೆಗೆ ಮುಂದಾಗಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
'ಚಂದ್ರಯಾನ-3' ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಉಡಾವಣೆಯಾದ ನಂತರ ಪ್ರಪಂಚ ಭಾರತದ ಕಡೆಗೆ ತಿರುಗಿ ನೋಡುತ್ತಿದೆ. ಅದರಲ್ಲೂ ಇಸ್ರೋ ಜೊತೆಗೆ ಹಲವು ಒಪ್ಪಂದಕ್ಕೂ ಮುಂದುವರಿದ ದೇಶಗಳು ಮುಂದಾಗುತ್ತಿವೆ. ಈಗಾಗಲೇ ಬೇರೆಬೇರೆ ದೇಶಗಳ ಉಪಗ್ರಹವನ್ನ ಯಶಸ್ವಿಯಾಗಿ ಉಡಾಯಿಸಿದ ಕೀರ್ತಿ ಭಾರತಕ್ಕೆ ಇದೆ. ಈಗ ಸಿಂಗಾಪುರದ ಉಪಗ್ರಹಗಳನ್ನು ಉಡಾಯಿಸಲು ಭಾರತದ ಇಸ್ರೋ ಸಜ್ಜಾಗಿದ್ದು, ನಾಳೆ ಬೆಳಗ್ಗೆಯೇ ಇದಕ್ಕೆ ಮುಹೂರ್ತವೂ ಫಿಕ್ಸ್ ಆಗಿದೆ.

ಭಾನುವಾರ ಬೆಳಗ್ಗೆಯೇ ಲಾಂಚಿಂಗ್!
ಅಂದಹಾಗೆ ಇಸ್ರೋ ಮೂಲಕ ಉಪಗ್ರಹ ಉಡಾವಣೆಗೆ ವೆಚ್ಚವೂ ಕಡಿಮೆ ಹಾಗೂ ಲಾಂಚ್ ಮಾಡುವುದು ಕೂಡ ಸುಲಭ ಮತ್ತು ಸುರಕ್ಷಿತ ಎಂಬ ಅಭಿಪ್ರಾಯವಿದೆ. ಹೀಗಾಗಿ ಜಗತ್ತು ಇಸ್ರೋ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಈಗ 'ಡಿಎಸ್-ಎಸ್‌ಎಆರ್' ಸೇರಿದಂತೆ ಇತರ 6 ಉಪಗ್ರಹಗಳನ್ನು ಹೊತ್ತ ರಾಕೆಟ್ ನಾಳೆ ಅಂದ್ರೆ ಭಾನುವಾರ ಬೆಳಗ್ಗೆ 6.30ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ. ಇಸ್ರೋ ಸಂಸ್ಥೆಯ ವಾಣಿಜ್ಯ ಉದ್ದೇಶದ ಅಂಗಸಂಸ್ಥೆ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಈ ಬಾಹ್ಯಾಕಾಶ ಕಾರ್ಯಕ್ರಮದ ನಿರ್ವಹಣೆ ಹೊಣೆಯನ್ನ ಹೊತ್ತಿದೆ.
ಮಾನವ ಸಹಿತ ಯೋಜನೆಗೂ ಸಿದ್ಧತೆ!
'ಚಂದ್ರಯಾನ-3' ಬಳಿಕ ಮತ್ತೊಂದು ಮಹತ್ವದ ಪ್ರಾಜೆಕ್ಟ್‌ಗೆ ಇಸ್ರೋ ಸಿದ್ಧತೆ ಆರಂಭಿಸಿದೆ. ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮ 'ಗಗನಯಾನ'ದ 'ಸರ್ವೀಸ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್' ಅಂದ್ರೆ ಎಸ್‌ಎಂಪಿಎಸ್ ಕಾರ್ಯಕ್ಷಮತೆ ಮತ್ತೆ ಸನ್ನದ್ಧತೆ ಕುರಿತಾಗಿ ನಡೆದ ಎರಡು ಪರೀಕ್ಷೆಗಳಲ್ಲಿ ಇತ್ತೀಚೆಗೆ ಯಶಸ್ವಿಯಾಗಿತ್ತು ಇಸ್ರೋ. ಈ ಮೂಲಕ ಹಾಟ್ ಟೆಸ್ಟ್ ಪಾಸ್ ಆಗಿರುವ ಈ ಯೋಜನೆ ಮುಂದಿನ ಹಂತಕ್ಕೆ ಲಗ್ಗೆ ಇಡುತ್ತಿದೆ. 'ಚಂದ್ರಯಾನ-3' ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಮಹತ್ವದ ಕಾರ್ಯದಲ್ಲಿ ದೊಡ್ಡ ಯಶಸ್ಸನ್ನು ಕಂಡಿದೆ ಭಾರತೀಯರ ಹೆಮ್ಮೆಯ ಇಸ್ರೋ ಸಂಸ್ಥೆ. ಇದೀಗ ಸಿಂಗಾಪುರದ ಉಪಗ್ರಹ ಉಡಾವಣೆಗೂ ಸಜ್ಜಾಗಿದೆ ಇಸ್ರೋ.

ಚಂದ್ರಯಾನ ನೌಕೆ ಎಲ್ಲಿದೆ ಈಗ?
'ಚಂದ್ರಯಾನ-3' ಬಾಹ್ಯಾಕಾಶ ನೌಕೆ 1,27,609 ಕಿಮೀ x 228 ಕಿಮೀ ಕಕ್ಷೆಗೆ ತಲುಪಿದೆ. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ರಾಕೆಟ್ ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿಯ ಕಡೆಗೆ ಪ್ರಯಾಣ ಬೆಳೆಸಿದೆ. ಕೆಲ ದಿನಗಳ ಹಿಂದಷ್ಟೇ ಬಾಹ್ಯಾಕಾಶ ನೌಕೆಯ ಕಕ್ಷೆ ಏರಿಸುವ ಕಾರ್ಯ ಬಹುತೇಕ ಯಶಸ್ವಿಯಾಗಿದೆ. ಮುಂದಿನ ಫೈರಿಂಗ್, ಟ್ರಾನ್ಸ್‌ಲೂನಾರ್ ಇಂಜೆಕ್ಷನ್ ಆಗಸ್ಟ್ 1 ರಂದು ಮಧ್ಯರಾತ್ರಿ 12 ಹಾಗೂ ಬೆಳಗ್ಗೆ 1 ಗಂಟೆ ನಡುವೆ ನಡೆಸಲು ಯೋಜಿಸಲಾಗಿದೆ.
ಒಟ್ನಲ್ಲಿ ಇಸ್ರೋ ಹಲವು ಯೋಜನೆಗಳನ್ನು ಕೈಗೊಂಡಿದ್ದು, ಅದರ ಯಶಸ್ಸಿಗಾಗಿ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದೆ. ಇನ್ನೇನು ಮುಂದಿನ ತಿಂಗಳು ಚಂದ್ರನ ಮೇಲೆ ಭಾರತದ ಹೆಗ್ಗುರುತು ಮೂಡಲಿದ್ದು, ಅದಕ್ಕಾಗಿ ಶತಕೋಟಿ ಭಾರತೀಯರು ಕಾಯುತ್ತಿದ್ದಾರೆ. ಹಾಗೇ ಇತರ ದೇಶಗಳ ಉಪಗ್ರಹ ಉಡಾವಣೆಯಲ್ಲೂ ಇಸ್ರೋ ಬ್ಯುಸಿಯಾಗಿದೆ. ಘಟಾನುಘಟಿ ದೇಶಗಳು ನೂರಾರು ಕೋಟಿ ವೆಚ್ಚದ ಉಪಗ್ರಹಗಳನ್ನ ಇಸ್ರೋ ಮೂಲಕ ಉಡಾಯಿಸುತ್ತಿವೆ ಎಂಬುದು ಮತ್ತೊಂದು ವಿಶೇಷ ಎನ್ನಬಹುದು.












Click it and Unblock the Notifications