Chandrayaan-3: ಚಂದ್ರನ ಬಳಿಕ ಸೂರ್ಯ ಭಾರತದ ಟಾರ್ಗೆಟ್!
ಬೆಂಗಳೂರು: ಚಂದ್ರನ ಮೇಲೆ ಲ್ಯಾಂಡರ್ ಇಳಿಸಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಇದೀಗ ಕಾಡುತ್ತಿರುವ ಪ್ರಶ್ನೆ, ಇಸ್ರೋ ಮುಂದಿನ ಗುರಿ ಯಾವುದು? ಈ ಪ್ರಶ್ನೆಗೂ ಇಸ್ರೋ ಮುಖ್ಯಸ್ಥರು ಉತ್ತರ ನೀಡಿದ್ದಾರೆ. ಚಂದ್ರನ ಮೇಲೆ ಲ್ಯಾಂಡರ್ ಇಳಿಸಿರುವ ಭಾರತ ಇದೀಗ ಸೂರ್ಯನನ್ನು ಮುಟ್ಟಲು ಹೋಗುತ್ತಿದೆ. ಹಾಗಾದರೆ 'ಚಂದ್ರಯಾನ-3' ಯಶಸ್ಸಿನ ಬಗ್ಗೆ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಹೇಳಿದ್ದೇನು? ಬನ್ನಿ ತಿಳಿಯೋಣ.
'ಚಂದ್ರಯಾನ-3' ಅತ್ಯಂತ ಯಶಸ್ವಿಯಾಗಿ ಮತ್ತು ನಿಖರವಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ಈ ಮೂಲಕ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ 4 ಗಣ್ಯ ರಾಷ್ಟ್ರಗಳ ಸಾಲಿಗೂ ಭಾರತ ಸೇರ್ಪಡೆ ಆಗಿದೆ. ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಇಸ್ರೋದ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿದೆ. ಈ ವೇಳೆ ಸಮಸ್ತ ಭಾರತೀಯರಿಗೆ ಧನ್ಯವಾದ ಅರ್ಪಿಸಿದ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್, ಚಂದ್ರಯಾನ ಗೆಲವನ್ನ ಭಾರತೀಯರಿಗೆ ಸಮರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಸೂರ್ಯನ ಬಳಿಗೆ ಭಾರತ ಹೋಗುತ್ತಿರುವ ಖುಷಿಯ ವಿಚಾರವನ್ನೂ ಹಂಚಿಕೊಂಡಿದ್ದಾರೆ.

ಚಂದ್ರನ ಬಳಿಕ ಸೂರ್ಯ ಟಾರ್ಗೆಟ್!
ಹೌದು, ಭಾರತ ಯಶಸ್ವಿಯಾಗಿ 'ಚಂದ್ರಯಾನ-3' ಯೋಜನೆ ಮುಗಿಸಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಅಲ್ಲದೆ ಯೋಜನೆ ಯಶಸ್ಸಿನ ಹಿನ್ನೆಲೆ ವಿಜ್ಞಾನಿಗಳಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಮತ್ತೊಂದ್ಕಡೆ ಈ ಸಾಧನೆ ಬಗ್ಗೆ ಮಾತನಾಡಿರುವ ಇಸ್ರೋ ಸಂಸ್ಥೆ ಅಧ್ಯಕ್ಷ ಎಸ್.ಸೋಮನಾಥ್, ಚಂದ್ರನ ಬಳಿಕ ಸೂರ್ಯನ ಅಧ್ಯಯನಕ್ಕೆ ಯೋಜನೆಯನ್ನ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಈ ಯೋಜನೆಗೆ 'ಆದಿತ್ಯ-ಎಲ್1' ಎಂದು ಹೆಸರನ್ನು ಇಡಲಾಗಿದ್ದು, ಭಾರತದ ಮುಂದಿನ ಪಯಣ ಸೂರ್ಯನ ಕಡೆಗೆ ತೆರಳಲಿದೆ.
ಜಗತ್ತಿಗೇ ತನ್ನ ಶಕ್ತಿ ತೋರಿಸಿದ ಭಾರತ
ಇಸ್ರೋ ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಜಗತ್ತಿನ ಮೊದಲ ದೇಶವಾಗಿ ಭಾರತಕ್ಕೆ ಹೆಮ್ಮೆ ತಂದು ಕೊಟ್ಟಿದೆ. ಸೂರ್ಯನ ಬೆಳಕನ್ನೇ ಕಾಣದ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಡೀ ಜಗತ್ತು ಕಣ್ಣಿಟ್ಟು ಕೂತಿತ್ತು. ಆದರೆ ಹೀಗೆ ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗಿ ಅಧ್ಯಯನ ಮಾಡಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಇಸ್ರೋ ಮಾತ್ರ ಯಾವುದೇ ಭಯವಿಲ್ಲದೆ ಚಂದ್ರನ ದಕ್ಷಿಣ ಧ್ರುವಕ್ಕೆ ನುಗ್ಗಿ ತನ್ನ ಲ್ಯಾಂಡರ್ ಅನ್ನ ಯಶಸ್ವಿಯಾಗಿ ಇಳಿಸಿದೆ. ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಮೂಲಕ ಬಾಹ್ಯಾಕಾಶ ಲೋಕಕ್ಕೆ ಭಾರತ ದೊರೆ ಎಂಬುದನ್ನ ಇಸ್ರೋ ಸಂಸ್ಥೆ ಮತ್ತೆ ಜಗತ್ತಿಗೇ ಸಾರಿ ಹೇಳಿದೆ.

ಹೇಗಿತ್ತು ಗೊತ್ತಾ ಲ್ಯಾಂಡಿಂಗ್ ಸಂಕಷ್ಟ?
ಲ್ಯಾಂಡಿಂಗ್ ಮಾಡುವ ಪ್ರಕ್ರಿಯೆ ಭಾರಿ ಸವಾಲಿನಿಂದ ಕೂಡಿತ್ತು. ಆದ್ರೆ ಇಸ್ರೋ ಆಧುನಿಕ ತಂತ್ರಜ್ಞಾನ ಬಳಸಿ 'ಚಂದ್ರಯಾನ-3' ಯೋಜನೆಯಲ್ಲಿ ಯಶಸ್ವಿಯಾಗಿದೆ. ಭಾರತದ ಈ ಗೆಲುವು ಭಾರತೀಯರಿಗೆ ಮಾತ್ರವಲ್ಲ, ಇಡೀ ಮನಷ್ಯರ ಕುಲಕ್ಕೆ ಸೇರಿದ ಗೆಲುವು. ಭವಿಷ್ಯ ಮತ್ತಷ್ಟು ಉಜ್ವಲವಾಗಲು ಮನಷ್ಯರ ಬದುಕು ಮತ್ತಷ್ಟು ಸುಲಭವಾಗಲು ಚಂದ್ರಯಾನ-3 ಗೆಲುವು ಹೊಸ ದಾರಿ ತೋರಿಸಿದೆ. ಚಂದ್ರನಲ್ಲಿ ನೀರು ಮತ್ತು ಖನಿಜಗಳು ಸಿಕ್ಕರೆ ಭಾರತ ಮತ್ತಷ್ಟು ಶ್ರೀಮಂತ ರಾಷ್ಟ್ರವಾಗಲಿದೆ. ಹೀಗಾಗಿ ಚಂದ್ರನ ದಕ್ಷಿಣ ಧ್ರುವದ ಅಧ್ಯಯನವು ಭಾರತಕ್ಕೆ ದೊಡ್ಡ ಲಾಭ ತಂದುಕೊಡಲಿದೆ.
ಕಡಿಮೆ ಖರ್ಚು, ದೊಡ್ಡ ಗೆಲುವು!
ಅಷ್ಟಕ್ಕೂ ಇತರ ದೇಶಕ್ಕೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಭಾರತದ ಇಸ್ರೋ 'ಚಂದ್ರಯಾನ-3' ಯೋಜನೆ ಕೈಗೊಂಡಿತ್ತು. ಚಂದ್ರಯಾನ-3 ಮಿಷನ್‌ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲೂ ಕಡಿಮೆ ಎನ್ನಬಹುದು. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ್ನು ಹೊತ್ತ ರಾಕೆಟ್ ಯಶಸ್ವಿಯಾಗಿ ಚಂದ್ರನ ಕಕ್ಷೆ ಪ್ರವೇಶ ಮಾಡಿತ್ತು. ಈಗ ನೋಡಿದರೆ ಇಡೀ ಜಗತ್ತು ತಿರುಗಿ ನೋಡುವಂತೆ ಚಂದ್ರನ ಮೇಲೆ ತನ್ನ ಲ್ಯಾಂಡರ್ ಅನ್ನು ಇಳಿಸಿದೆ ಇಸ್ರೋ ಸಂಸ್ಥೆ.












Click it and Unblock the Notifications