India Rain June Report: ದಕ್ಷಿಣ ಭಾರತಕ್ಕೆ ಶೇ.14ರಷ್ಟು ಅಧಿಕ ಮಳೆ, ಕೊರತೆ ಆಗಿದ್ದೆಲ್ಲಿ, ಎಷ್ಟು?
ಬೆಂಗಳೂರು, ಜುಲೈ 02: ಈ ವರ್ಷ ಮುಂಗಾರು ಮಳೆ ನಿಗದಿತ ಅವಧಿಗಿಂತಲೂ ಎರಡು ಮೂರು ದಿನ ಮೊದಲೇ ದೇಶವನ್ನು ಪ್ರವೇಶಿಸಿತ್ತು. ನಂತರ ಕ್ರಮೇಣ ಕರ್ನಾಟಕ ಮಾರ್ಗವಾಗಿ ಉತ್ತರ ಭಾರತದತ್ತ ವ್ಯಾಪಿಸಿತು. ಇದೀಗ ಮುಂಗಾರು ಮಳೆ ಆರಂಭವಾಗಿ ಒಂದು ತಿಂಗಳು ಪೂರ್ಣಗೊಂಡಿದ್ದು, ಜೂನ್ ನಲ್ಲಿ ದಕ್ಷಿಣ ಭಾರತಕ್ಕೆ ಮಾತ್ರವೇ ಅತ್ಯಧಿಕ ಮಳೆ ದಾಖಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.
ಹೌದು, ಮುಂಗಾರು ಆರಂಭದಲ್ಲೇ ಚಂಡಮಾರುತದ ಜೊತೆ ಜೊತೆಗೆ ಆರ್ಭಟ ಶುರುಮಾಡಿತ್ತು. ಜೂನ್ ತಿಂಗಳ 30ದಿನ ದೇಶಾದ್ಯಂತ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗಿಲ್ಲ. ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವೇ ಉತ್ತಮ ಮಳೆ ಆಗಿದೆ.

ಜೂನ್ ತಿಂಗಳಲ್ಲಿ ದಕ್ಷಿಣ ಭಾರತದಲ್ಲಿ ವಾಡಿಕೆಗಿಂತಲೂ ಶೇಕಡಾ 14ರಷ್ಟು ಅಧಿಕ ಮಳೆ ದಾಖಲಾಗಿದೆ. ಇನ್ನೂ ಇಡೀ ದೇಶದ ಮಟ್ಟಿಗೆ ನೋಡಿದರೆ, ಜೂನ್ ತಿಂಗಳಲ್ಲಿ ಭಾರತದಲ್ಲಿ ವಾಡಿಕೆ 165,3 ಮಿಲಿ ಮೀಟರ್ ಆಗಬೇಕಿತ್ತು, ಆಗಿದ್ದ ಮಾತ್ರ ಕೇವಲ 147.2 ಮಿಲಿ ಮೀಟರ್. ಹೀಗಾಗಿ ಈ ಭಾರಿ ದೇಶದಲ್ಲಿ ಶೇಕಡಾ 11 ರಷ್ಟು ಮಳೆ ಕೊರತೆ ಆಗಿದೆ.
ಇನ್ನೂ ಕಳೆದ ಐದು ವರ್ಷಗಳಲ್ಲಿ ಜೂನ್ ನಲ್ಲಿ ಅತೀ ಕಡಿಮೆ ಮಳೆ ಆಗಿರುವುದು 2024ರ ಜೂನ್‌ನಲ್ಲೇ ಮೊದಲೂ ಅಂತಲೂ ಹವಾಮಾನ ಇಲಾಖೆ ವಿವರಿಸಿದೆ.

ಖುಷಿಯ ವಿಷಯವೆಂದರೆ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಇವೆಲ್ಲ ಒಳಗೊಂಡ ದಕ್ಷಿಣ ಭಾರತದಲ್ಲಿ ಈ ವರ್ಷ ಜೂನ್ ನಲ್ಲಿ ಮುಂಗಾರಿನ ಮೊದಲ ತಿಂಗಳೇ ಅತ್ಯಧಿಕ ಮಳೆ (ಶೇ.14) ದಾಖಲಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ ಕೊರತೆ ಆಗಿದೆ?
ಭಾರತದ ದಕ್ಷಿಣ ರಾಜ್ಯಗಳ ಹೊರತಾಗಿ ವಾಯುವ್ಯ ಭಾರತ ರಾಜ್ಯಗಳಲ್ಲಿ ಜೂನ್ ತಿಂಗಳಲ್ಲಿ ಶೇ.33ರಷ್ಟು ಮಳೆ ಕೊರತೆ ಆಗಿದೆ. ಮಧ್ಯ ಭಾರತದ ರಾಜ್ಯಗಳಲ್ಲಿ ಶೇಕಡಾ 14ರಷ್ಟು, ಈಶಾನ್ಯ ಭಾರತದ ರಾಜ್ಯಗಳಲ್ಲಿ ಶೇಕಡಾ 13ರಷ್ಟು ಮಳೆ ಕೊರತೆ ಉಂಟಾಗಿದೆ.
ಇನ್ನು ಭಾರತ ಈ ಭಾರಿ 546 ಬೇಸಿಗೆಯ ದಿನಗಳನ್ನು ಎದುರಿಸಿದೆ. ತೀವ್ರ ತಾಪಮಾನಕ್ಕೆ ಜನರು ಹೈರಾಣಾಗಿದ್ದಾರೆ. ಇಷ್ಟು ದಿನದ ತಾಪಮಾನ ಕಳೆದ ಹದಿನಾಲ್ಕು ವರ್ಷಗಳಲ್ಲಿ ಇದೇ ಗರಿಷ್ಠ ಎನ್ನಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ಭಾರತವು 181 ಉಷ್ಣ ಮಾರುತದ ದಿನಗಳನ್ನು ಅನುಭವಿಸಿದೆ ಎಂದು ತಿಳಿಸಿದೆ.












Click it and Unblock the Notifications