ಕರ್ನಾಟಕವೂ ಸೇರಿದಂತೆ 'ರೈಲ್ವೆ ಇಲಾಖೆ'ಗೆ ವಿವಿಧ ರಾಜ್ಯಗಳು ನೀಡಬೇಕಿರುವ ಪಾಲೆಷ್ಟು?
ಬೆಂಗಳೂರು, ಫೆಬ್ರವರಿ 14: ಭಾರತೀಯ ರೈಲ್ವೆ ಇಲಾಖೆಯು ಕೈಗೊಳ್ಳುವ ರೈಲ್ವೆ ಅಭಿವೃದ್ಧಿ ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು ಅನುದಾನದಲ್ಲಿ ಪಾಲು ಹಂಚಿಕೊಂಡಿರುತ್ತವೆ. ಹೀಗೆ ಪಾಲು ಹಂಚಿಕೊಂಡಿದ್ದ ಕರ್ನಾಟಕ ಸೇರಿ ಮೂರು ರಾಜ್ಯಗಳು ರೈಲ್ವೆ ಇಲಾಖೆಗೆ ತಮ್ಮ ಪಾಲು ನೀಡದೇ ನೂರಾರು ಕೋಟಿ ಹಣ ಬಾಕಿ ಉಳಿಸಿಕೊಂಡಿವೆ.
ಈ ಕುರಿತು ಗಲ್ಟ್.ಕಾಮ್ ಮಾಡಿರುವ ವರದಿ ಪ್ರಕಾರ, ಕೇಂದ್ರದಿಂದ ಹಣ ಬರುವ ಬಗ್ಗೆ ಕೆಲವು ರಾಜ್ಯಗಳ ಮುಖ್ಯಸ್ಥರು ಮಾತನಾಡುವ ನಡುವೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಯೋಜನೆಗಳಿಗೆ ರಾಜ್ಯಗಳು ತಮ್ಮ ಪಾಲಿನ ಹಣ ನೀಡದಿರುವುದು. ಕೇಂದ್ರ ಅನುದಾನ ಬಿಡುಗಡೆ ಬಗ್ಗೆ ಮಾತನಾಡುತ್ತಿರುವುದು ಇದೀಗ ಚರ್ಚೆಯಾಗುತ್ತಿದೆ.

ನೆರೆಯ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಹಾಗೂ ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಕೂಡ ಕೆಲವು ತೆರಿಗೆಗಳು ಅಥವಾ ಕೆಲವು ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಮಗೆ ನೀಡಬೇಕಿದ್ದ ಅನುದಾನ ಬಿಡುಗಡೆ ಮಾಡಿಲ್ಲ, ಬಾಕಿ ಉಳಿಸಿಕೊಂಡಿದೆ ಎಂದು ಮಾತನಾಡಿದ್ದರು.
ಸಾವಿರಾರು ಕೋಟಿ ಹಣ ಪಾವತಿಸದ ರಾಜ್ಯಗಳ ಲೆಕ್ಕ
ರಾಜ್ಯಗಳು ಒಟ್ಟಾರೆಯಾಗಿ ಕೇಂದ್ರದಿಂದ ಬರಬೇಕಾದ ಅನುದಾನದ ಬಗ್ಗೆ ಮಾತನಾಡುತ್ತಿವೆ. ಆದರೆ ಭಾರತೀಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ಈ ಪ್ರಕರಣವು ಭಿನ್ನವಾಗಿದ್ದು, ರಾಜ್ಯಗಳೇ ಕೇಂದ್ರಕ್ಕೆ ಹಣ ನೀಡದೇ ಸತಾಯಿಸುತ್ತಿವೆ ಎನ್ನಲಾಗಿದೆ.
ಕರ್ನಾಟಕ ಸೇರಿದಂತೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಅನುಷ್ಠಾನಗೊಂಡ ಯೋಜನೆಗಳಿಗೆ ತಮ್ಮ ಪಾಲಿನ 9,000 ಕೋಟಿಗೂ ಅಧಿಕ ಹಣವನ್ನು ಕೇಂದ್ರ ರೈಲ್ವೆ ಇಲಾಖೆಗೆ ಪಾವತಿಸಬೇಕಿದೆ. ಮೂರು ರಾಜ್ಯಗಳ ಪೈಕಿ ಆಂಧ್ರಪ್ರದೇಶವು ಕೇಂದ್ರದೊಂದಿಗೆ ವೆಚ್ಚ ಹಂಚಿಕೆಯ ಭಾಗವಾಗಿ ಒಟ್ಟು 6,958 ಕೋಟಿ ರೂಪಾಯಿ ಹಣ ಬಾಕಿ ಉಳಿಸಿಕೊಂಡಿದೆ ಎಂದು ವರದಿ ತಿಳಿಸಿದೆ.
ಕರ್ನಾಟಕದ್ದು ರೂ.928 ಕೋಟಿ ಬಾಕಿ
ಇದರೊಂದಿಗೆ ತೆಲಂಗಾಣ ರಾಜ್ಯವು ಒಪ್ಪಿಕೊಂಡಂತೆ ರೈಲ್ವೆ ಯೋಜನೆಗಳಿಗೆ ತನ್ನ 1,253 ಕೋಟಿ ರೂಪಾಯಿ ಪಾಲನ್ನು ನೀಡಬೇಕಿದೆ. ಇನ್ನೂ ಕರ್ನಾಟಕ ರಾಜ್ಯವು ಸಹ ಬಾಕಿ ಉಳಿಕೆಯಿಂದ ಹೊರತಾಗಿಲ್ಲ. ಕರ್ನಾಟಕ ಭಾರತೀಯ ರೈಲ್ವೆಗೆ 928 ಕೋಟಿ ರೂಪಾಯಿ ಹಣ ಪಾವತಿಸಬೇಕಿದೆ. ಈ ರಾಜ್ಯಗಳು ಇಷ್ಟು ಕೋಟಿ ಮೊತ್ತವನ್ನು ಕೇಂದ್ರಕ್ಕೆ ಪಾವತಿಸದೇ ಬಾಕಿ ಉಳಿಸಿಕೊಂಡಿವೆ.

ವಾರ್ಷಿಕ ನವರತ್ನ ಜಾರಿಗೆ ಅಪಾರ ಹಣ ಬೇಕು
ಆಂಧ್ರಪ್ರದೇಶದ ಕಾಂಗ್ರೆಸ್ ಪ್ರದೇಶ ಸಮಿತಿ (ಎಪಿಸಿಸಿ) ಮುಖ್ಯಸ್ಥ ವೈ.ಎಸ್.ಶರ್ಮಿಳಾ ಪ್ರತಿ ವರ್ಷ ನವರತ್ನಗಳನ್ನು ಜಾರಿಗೆ ತರಲು ಮುಖ್ಯಮಂತ್ರಿಗಳಿಗೆ 55,000 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಹೇಳಿದ್ದರು. ಆದರೆ ಇಂಧನಗಳ ಯಾವುದೇ ಸಹಾಯಧನ (ಸಬ್ಸಿಡಿ) ನೀಡಲು ವಿಫಲವಾಗಿದೆ. ವಿವಿಧ ತೆರಿಗೆಗಳನ್ನು ಏರಿಸಿದ್ದರು ಸಹ ಆಂಧ್ರಪ್ರದೇಶ ವಿವಿಧೆಡೆಯಿಂದ ಒಟ್ಟು 8.5 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣ ಸಾಲ ಮಾಡಿದೆ ಎಂದು ತಿಳಿದು ಬಂದಿದೆ.
ಒಂದು ಕಡೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಮರ್ಪಕ ಅನುದಾನ ನೀಡುತ್ತಿಲ್ಲ ಎಂದು ರಾಜ್ಯಗಳು ಹೇಳುತ್ತಿವೆ. ಆದರೆ ರೈಲ್ವೆ ಇಲಾಖೆಗೆ ರಾಜ್ಯಗಳು ನೀಡಬೇಕಾದ ಪಾಲು ಇನ್ನು ಇಲಾಖೆಗೆ ತಲುಪಿಸಿಲ್ಲ. ಇದು ಕೂಡ ಕೇಂದ್ರ ಸಕಾಲಕ್ಕೆ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡದಿರಲು ಕಾರಣ ಎಂಬ ಮಾತುಗಳು ಕೇಳುತ್ತಿವೆ.
ಕರ್ನಾಟಕದಲ್ಲಿ ಆರೋಪ-ಪ್ರತ್ಯಾರೋಪ
ಇನ್ನೂ ಕರ್ನಾಟಕ ಸರ್ಕಾರ ಬರ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಆದರೆ ಇನ್ನೂ ಸಹ ನೀಡದೇ ನಿರ್ಲಕ್ಷ್ಯ ವಹಿಸಿದೆ ಎಂದು ತಿಳಿಸಿದೆ. ಇದಕ್ಕೆ ಪ್ರತಿಯಾಗಿ ವಿಪಕ್ಷಗಳು ನೀವು ನಿಮ್ಮ ಪಾಲನ್ನು ಎಷ್ಟರಮಟ್ಟಿಗೆ ಸಮರ್ಪಕವಾಗಿ ಹಂಚಿಕೆ ಮಾಡಿದ್ದೀರಿ?. ಮೂಗಿಗೆ ತುಪ್ಪ ಸವರಿದಂತೆ ಅತೀ ಕಡಿಮೆ ಹಣ ಬಿಡುಗಡೆ ಮಾಡಿದೆ ಎಂದು ಸರ್ಕಾರದ ವಿರುದ್ಧ ವಿಪಕ್ಷಗಳು ಆರೋಪಿಸಿದ್ದವು.
ಇದೇ ರೀತಿ ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು ಸಹ ಕೇಂದ್ರದ ವಿರುದ್ಧ ಅನುದಾನ ಹಂಚಿಕೆ ವಿಚಾರವಾಗಿ ದೂರಿದ್ದವು.












Click it and Unblock the Notifications