India Post: ಮಾಹಿತಿ ನೀಡದೆ ಪ್ರಮುಖ ಸೇವೆ ರದ್ದುಗೊಳಿಸಿದ ಅಂಚೆ ಇಲಾಖೆ
ನವದೆಹಲಿ, ಡಿಸೆಂಬರ್ 31: ಗ್ರಾಹಕರಿಗೆ ಯಾವುದೇ ಮಾಹಿತಿ ನೀಡದೆ ಭಾರತೀಯ ಅಂಚೆ ಇಲಾಖೆ ಪ್ರಮುಖ ಸೇವೆಯೊಂದನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ಜನರು ಖಾಸಗಿ ಕೋರಿಯರ್‌ಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಇದಕ್ಕೆ ವೆಚ್ಚವೂ ಹೆಚ್ಚಾಗಲಿದೆ. ಕಡಿಮೆ ದರದಲ್ಲಿ ಸಿಗುತ್ತಿದ್ದ ಸೇವೆಯನ್ನು ಸ್ಥಗಿತಗೊಳಿಸಿದ್ದು ಏಕೆ? ಎಂದು ಪುಸ್ತಕ ಪ್ರೇಮಿಗಳು ಅಂಚೆ ಇಲಾಖೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.
ವರದಿಗಳ ಪ್ರಕಾರ ಡಿಸೆಂಬರ್ 18ರಿಂದಲೇ ಜಾರಿಗೆ ಬರುವಂತೆ ನೋಂದಾಯಿತ ಬುಕ್ ಪೋಸ್ಟ್ (ಆರ್‌ಬಿಪಿ) ಸೇವೆಯನ್ನು ಭಾರತೀಯ ಅಂಚೆ ಇಲಾಖೆ ರದ್ದುಗೊಳಿಸಿದೆ. ಆದ್ದರಿಂದ ಈಗ ಅಂಚೆ ಮೂಲಕ ಪುಸ್ತಕವನ್ನು ತರಿಸಿಕೊಳ್ಳುವ ಆಯ್ಕೆ ಇಲ್ಲ. ಮನೆಗೆ ಪುಸ್ತಕ ತರಿಸಿಕೊಳ್ಳಲು ಖಾಸಗಿ ಕೋರಿಯರ್ ಅನಿವಾರ್ಯವಾಗಿದೆ.

ಅಂಚೆ ಇಲಾಖೆಯ ಈ ತೀರ್ಮಾನ ಪುಸ್ತಕ ಪ್ರೇಮಿಗಳು, ಪ್ರಕಾಶಕರ ಆಕ್ರೋಶಕ್ಕೆ ಕಾರಣವಾಗಿದೆ. ಪುಸ್ತಕ ಓದುವ ಹವ್ಯಾವ ಬೆಳೆಸಲು, ಕಡಿಮೆ ಖರ್ಚಿನಲ್ಲಿ ಪುಸ್ತಕಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸಹಾಯಕವಾಗುವಂತೆ ಆರ್‌ಬಿಪಿ ಸೇವೆಯನ್ನು ಆರಂಭಿಸಲಾಗಿತ್ತು.
ಯಾವುದೇ ಮಾಹಿತಿ ಇಲ್ಲ: ಪುಸ್ತಕ ಪ್ರೇಮಿಗಳು, ಪ್ರಕಾಶಕರ ಮಾಹಿತಿಯಂತೆ ಆರ್‌ಬಿಪಿ ಸೇವೆಯನ್ನು ಸ್ಥಗಿತಗೊಳಿಸುವ ಕುರಿತು ಅಂಚೆ ಇಲಾಖೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಕೆಲವು ಗ್ರಾಹಕರು ಪುಸ್ತಕ ಕಳಿಸಲು ಅಂಚೆ ಇಲಾಖೆಗೆ ಹೋದಾಗ ಈ ಕುರಿತು ವಿವರ ಸಿಕ್ಕಿದೆ.
5 ಕೆಜಿ ಪುಸ್ತಕವನ್ನು 80 ರೂ. ದರದಲ್ಲಿ ಆರ್‌ಬಿಪಿ ಸೇವೆ ಮೂಲಕ ದೇಶಾದ್ಯಂತ ತಲುಪಿಸಲಾಗುತ್ತಿತ್ತು. ಅಂಚೆ ಮೂಲಕ ಪುಸ್ತಕ ಕಳಿಸಲಾಗುತ್ತದೆ ಎಂದು ಪ್ರಕಾಶಕರು ಸಹ ಈ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಒಂದು ವಾರದಲ್ಲಿ ಸುರಕ್ಷಿತವಾಗಿ ಪುಸ್ತಕ ಜನರ ಕೈ ಸೇರುತ್ತಿತ್ತು.
ಈ ಸೇವೆ ಮೂಲಕ ಬುಕ್, ಮ್ಯಾಗ್‌ಜಿನ್‌ಗಳನ್ನು ಕಳಿಸಲಾಗುತ್ತಿತ್ತು. ಈಗ ಈ ಸೇವೆಯನ್ನು ಅಂಚೆ ಕಛೇರಿಗಳಲ್ಲಿ ನಿಲ್ಲಿಸಲಾಗಿದೆ. ಅಲ್ಲದೇ ವೆಬ್‌ಸೈಟ್‌ನಲ್ಲಿಯೂ ಈ ಸೇವೆಯ ಆಯ್ಕೆಯನ್ನು ತೆಗೆದುಹಾಕಲಾಗಿದೆ. ಆದ್ದರಿಂದ ಈಗ ಅಂಚೆ ಮೂಲಕ ಪುಸ್ತಕ ಕಳಿಸಲು ಸಾಧ್ಯವಿಲ್ಲ.
ಜನರು ಪುಸ್ತಕಕ್ಕಾಗಿ ಬೇಡಿಕೆ ಇಟ್ಟರೆ ಪ್ರಕಾಶಕರು ಖಾಸಗಿ ಕೋರಿಯರ್ ಹುಡುಕಿಕೊಂಡು ಹೋಗಬೇಕು. ಅಲ್ಲಿ ಹೆಚ್ಚಿನ ಹಣವನ್ನು ಪಾವತಿ ಮಾಡಿ ಪುಸ್ತಕ ಕಳಿಸಬೇಕಿದೆ. ಇದರಿಂದಾಗಿ ಜನರು ಸಹ ಪುಸ್ತಕ ಕೊಳ್ಳಲು ಹೆಚ್ಚಿನ ಹಣ ಪಾವತಿ ಮಾಡಬೇಕಾದ ಸ್ಥಿತಿ ಉಂಟಾಗಿದೆ.
ಕೋರಿಯರ್‌ಗೆ ಹೋಲಿಕೆ ಮಾಡಿದರೆ ಆರ್‌ಬಿಪಿ ಸೇವೆಯ ದರಗಳು ಕಡಿಮೆ ಇತ್ತು. 1 ಕೆಜಿಗೆ 32 ರೂ., 2 ಕೆಜಿಗೆ 45 ರೂ. ನಿಗದಿ ಮಾಡಲಾಗಿತ್ತು. ಆದರೆ ಖಾಸಗಿ ಕೋರಿಯರ್ ಸೇವೆಯಲ್ಲಿ ಸೇವೆಯ ಕನಿಷ್ಠ ದರ 78 ರೂ. ಆಗಿದೆ. ಈಗ ಜನರು, ಪ್ರಕಾಶಕರು ಈ ಸೇವೆಯನ್ನು ರದ್ದುಗೊಳಿಸಿದ್ದು ಏಕೆ? ಎಂದು ಅಂಚೆ ಇಲಾಖೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಆರ್‌ಬಿಪಿ ಸೇವೆ ರದ್ದು ಮಾತ್ರವಲ್ಲ ಈಗ ಅಂಚೆ ಇಲಾಖೆ ವಿದೇಶದಿಂದ ಪುಸ್ತಕ ಕಳಿಸಲು ಶೇ 5ರಷ್ಟು ಆಮದು ಸುಂಕವನ್ನು ಸಹ ನಿಗದಿಗೊಳಿಸಿದೆ. ವಿದೇಶದಲ್ಲಿರುವ ಪ್ರಕಾಶಕರು ಭಾಷಾಂತರಕ್ಕಾಗಿ ಅಥವ ಉಡುಗೊರೆಯಾಗಿ ಭಾರತದಲ್ಲಿರುವ ಜನರಿಗೆ ಪುಸ್ತಕಗಳನ್ನು ಕಳಿಸುತ್ತಿದ್ದರು. ಇದೇ ಮೊದಲ ಬಾರಿಗೆ ಇಂತಹ ಸುಂಕವನ್ನು ಹಾಕಲಾಗಿದೆ ಎಂದು ಜನರು ಹೇಳುತ್ತಿದ್ದಾರೆ.












Click it and Unblock the Notifications