ಅಮಿತ್ ಶಾ ಪಶ್ಚಿಮ ಬಂಗಾಳ ಪ್ರವಾಸ ದಿಢೀರ್ ಬದಲು!
ನವದೆಹಲಿ, ಮಾರ್ಚ್ 24: ಕೇಂದ್ರ ಗೃಹ ಸಚಿವ, ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಪಶ್ಚಿಮ ಬಂಗಾಳ ಪ್ರವಾಸ ದಿಢೀರ್ ಮುಂದೂಡಿಕೆಯಾಗಿದೆ. ಪಕ್ಷ ಸಂಘಟನೆಯ ಸಭೆಯಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಬೇಕಿತ್ತು. ಮಾರ್ಚ್ 28, 29ರಂದು ಅವರು ರಾಜ್ಯ ಪ್ರವಾಸ ಕೈಗೊಂಡಿದ್ದರು. ಆದರೆ ಅಮಿತ್ ಶಾ ಪ್ರವಾಸ ಮುಂದೂಡಿಕೆ ಈಗ ಪಶ್ಚಿಮ ಬಂಗಾಳ ಬಿಜೆಪಿ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಅಮಿತ್ ಶಾ ಮಾರ್ಚ್ ಕೊನೆಯ ವಾರದಲ್ಲಿ ಎರಡು ದಿನ ಪಶ್ಚಿಮ ಬಂಗಾಳ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದರು. ಅಮಿತ್ ಶಾ ಜೊತೆ ಪಕ್ಷ ಸಂಘಟನೆ ಸಭೆಯನ್ನು ನಡೆಸಲು ಬಿಜೆಪಿ ರಾಜ್ಯ ಘಟಕ ತಯಾರಿಯನ್ನು ನಡೆಸಿತ್ತು. ಆದರೆ ಅಮಿತ್ ಶಾ ಪ್ರವಾಸ ಮುಂದೂಡಿಕೆ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮುಜಂದಾರ್ ಬದಲಾವಣೆಯ ಚರ್ಚೆಯನ್ನು ಹುಟ್ಟುಹಾಕಿದೆ.

ಸುಕಾಂತ ಮುಜಂದಾರ್ ಮಾತನಾಡಿ, "ಅಮಿತ್ ಶಾ ರಾಜ್ಯ ಭೇಟಿಯನ್ನು ಮುಂದೂಡಿಕೆ ಮಾಡಿದ್ದಾರೆ. ರಂಜಾನ್ ಮಾಸದ ಕೊನೆಯ ದಿನಗಳ ಕಾರಣ ಭೇಟಿ ಮುಂದೂಡಿಕೆ ಮಾಡಲಾಗಿದ್ದು, ಮುಂದಿನ ದಿನಾಂಕ ನಿಗದಿಯಾಗಬೇಕಿದೆ" ಎಂದು ಹೇಳಿದ್ದಾರೆ.
ಸುಕಾಂತ ಮುಜಂದಾರ್ ಬದಲಾವಣೆ: ಆದರೆ ಅಮಿತ್ ಶಾ ಭೇಟಿಯ ಮುಂದೂಡಿಕೆ ಬಗ್ಗೆ ಕೇಳಿ ಬರುತ್ತಿರುವ ಮಾಹಿತಿಗಳೇ ಬೇರೆ. ಪಕ್ಷದ ಮೂಲಗಳ ಮಾಹಿತಿ ಪ್ರಕಾರ ರಾಜ್ಯಾಧ್ಯಕ್ಷ ಸುಕಾಂತ ಮುಜಂದಾರ್ ಬದಲಾವಣೆಯಾಗಲಿದ್ದಾರೆ. ಕೇರಳ, ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷರನ್ನು ಬದಲಾವಣೆ ಮಾಡುವ ಚರ್ಚೆ ಹೈಕಮಾಂಡ್ ವಲಯದಲ್ಲಿ ನಡೆಯುತ್ತಿದೆ.
ಸುಕಾಂತ ಮುಜಂದಾರ್ 2021ರಿಂದ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಪಕ್ಷದ ನಾಯಕರ ಮಾಹಿತಿಯಂತೆ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಅಮಿತ್ ಶಾ ಭೇಟಿಗೂ ಮೊದಲು ಹೊಸ ರಾಜ್ಯಾಧ್ಯಕ್ಷರ ಘೋಷಣೆಯಾಗಲಿದೆ. ಆದರೆ ಸುಕಾಂತ ಮುಜಂದಾರ್ ಈ ವರದಿಗಳನ್ನು ತಳ್ಳಿಹಾಕಿದ್ದಾರೆ.
2024ರ ನವೆಂಬರ್‌ನಲ್ಲಿಯೇ ಸುಕಾಂತ ಮುಜಂದಾರ್ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಬಿಜೆಪಿ ಒಬ್ಬರಿಗೆ ಒಂದು ಹುದ್ದೆ ಎಂಬ ನಿಯಮ ಪಾಲನೆ ಮಾಡುತ್ತದೆ. ಸುಕಾಂತ ಮುಜಂದಾರ್ ಸಂಸದರಾಗಿದ್ದು, 2024ರ ಲೋಕಸಭೆ ಚುನಾವಣೆಯ ಬಳಿಕ ಶಿಕ್ಷಣ ಸಚಿವಾಲಯದ ರಾಜ್ಯ ಖಾತೆ ಸಚಿವರಾಗಿದ್ದಾರೆ. ಆದ್ದರಿಂದ ಅವರ ಬದಲಾಣೆ ಖಚಿತ ಎನ್ನುತ್ತಿವೆ ಪಕ್ಷದ ಮೂಲಗಳು.
ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. 2026ರ ವಿಧಾನಸಭೆ ಚುನಾವಣೆ ಮೇಲೆ ಬಿಜೆಪಿ ಕಣ್ಣಿಟ್ಟು, ಪಕ್ಷ ಸಂಘಟನೆಯಲ್ಲಿ ಹಲವು ಬದಲಾವಣೆ ಮಾಡುತ್ತಿದೆ. ಆದ್ದರಿಂದ ಈಗ ಪಕ್ಷದ ರಾಜ್ಯಾಧ್ಯಕ್ಷರು ಸಹ ಬದಲಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಆದರೆ ಪಕ್ಷದ ಕೆಲವು ನಾಯಕರು ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಬೇಡ. ಯಥಾಸ್ಥಿತಿ ಮುಂದುವರೆಸಬೇಕು ಎಂದು ಸಹ ಸಲಹೆ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಮುಂದಿನ ವರ್ಷವೇ ಇರುವ ಕಾರಣ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ರಾಜ್ಯ ಬಿಜೆಪಿಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.
2015-2021ರ ತನಕ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷರಾಗಿದ್ದ ದಿಲೀಪ್ ಘೋಷ್ ರಾಜ್ಯದ ಹಿರಿಯ ನಾಯಕರ ಜೊತೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿ ಪಾಲಿಗೆ ದಿಲೀಪ್ ಘೋಷ್ ಯಶಸ್ವಿ ಅಧ್ಯಕ್ಷರು. ಅವರ ನೇತೃತ್ವದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 42ರ ಪೈಕಿ 18 ಸೀಟುಗಳನ್ನು ಪಕ್ಷ ಗೆದ್ದಿತ್ತು.
2024ರಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ 12 ಸೀಟುಗಳನ್ನು ಗೆದ್ದಿದೆ. 2021ರ ನವೆಂಬರ್‌ನಲ್ಲಿ ರಾಜ್ಯಾಧ್ಯಕ್ಷರಾದ ಸುಕಾಂತ ಮುಜಂದಾರ್ ಸ್ಥಳೀಯ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಹಲವು ಹೋರಾಟಗಳನ್ನು ಮಾಡಿ, ಪಕ್ಷವನ್ನು ಉತ್ತಮವಾಗಿ ಸಂಘಟನೆ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಬದಲಾಗುತ್ತಾರೆಯೇ? ಕಾದು ನೋಡಬೇಕಿದೆ.












Click it and Unblock the Notifications