ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಬೆಂಗಳೂರಿಗೆ ಬಂದ ವಿಮಾನಗಳು
ಚೆನ್ನೈ, ಜೂನ್ 19: ಭಾರಿ ಬಿಸಿಲಿನಿಂದ ಬಸವಳಿದಿದ್ದ ಚೆನ್ನೈ ನಗರಕ್ಕೆ ಮಳೆ ತಂಪೆರದಿದೆ. ಭಾನುವಾರ ರಾತ್ರಿ, ಸೋಮವಾರ ಮುಂಜಾನೆ ನಗರದಲ್ಲಿ ಭಾರಿ ಮಳೆಯಾಗಿದ್ದು, ವಿಮಾನಗಳನ್ನು ಬೆಂಗಳೂರಿನ ಕಡೆಗೆ ತಿರುಗಿಸಲಾಗಿದೆ. ಭಾರಿ ಮಳೆಯ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ನೆರೆಯ ಜಿಲ್ಲೆಗಳಾದ ಚೆಂಗಲ್‌ಪೇಟ್, ಕಾಂಚೀಪುರಂ ಮತ್ತು ತಿರುವಳ್ಳೂರ್, ವೆಲ್ಲೂರು ಮತ್ತು ರಾಣಿಪೇಟ್‌ನಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಭಾರಿ ಮಳೆಯ ಕಾರಣ ಚೆನ್ನೈಗೆ ತೆರಳುತ್ತಿದ್ದ ಆರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳನ್ನು ಬೆಂಗಳೂರಿ ವಿಮಾನ ನಿಲ್ದಾಣದ ಕಡೆಗೆ ತಿರುಗಿಸಲಾಗಿದೆ. ಮಳೆಯ ಕಾರಣ 12ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳು ಹೊರಡಲು ತಡವಾಗಿದೆ. ದೋಹಾ ಮತ್ತು ದುಬೈ ಸೇರಿದಂತೆ ಸುಮಾರು 10 ಒಳಬರುವ ವಿಮಾನಗಳನ್ನು ಬೆಂಗಳೂರಿಗೆ ತಿರುಗಿಸಲಾಯಿತು. ಭಾರಿ ಮಳೆಯಿಂದಾಗಿ ವಿಮಾನ ನಿಲ್ದಾಣದಲ್ಲಿನ ಅಂತರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿತು.

ಚೆನ್ನೈನ ಮೀನಂಬಾಕ್ಕಂನಲ್ಲಿ ಸೋಮವಾರ ಮುಂಜಾನೆ 5.30ರವರೆಗೆ 13.7 ಸೆಂ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ. ರಾತ್ರಿಯಿಡೀ ಮಳೆ ಸುರಿದ ಕಾರಣ ಹಲವು ಪ್ರದೇಶಗಳು ಜಲಾವೃತವಾಗಿದೆ. ಸೋಮವಾರ ಬೆಳಿಗ್ಗೆ ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿಸಿಲಿಂದ ಕಂಗೆಟ್ಟಿದ್ದ ಜನರಿಗೆ ನಿರಾಳ
ಭಾರಿ ಬಿಸಿಲು, ಶಾಖದ ಅಲೆಯಿಂದ ಹೈರಾಣಾಗಿದ್ದ ಜನರಿಗೆ ಭಾರಿ ಮಳೆಯಾಗಿರುವುದು ನೆಮ್ಮದಿ ತಂದಿದೆ. ಸದ್ಯ ವಾತಾವರಣ ಸಾಮಾನ್ಯವಾಗಿದ್ದು, ಶಾಖದ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. ಚೆನ್ನೈನ ಹಲವು ಕಡೆಗಳಲ್ಲಿ ಜಲಾವೃತವಾಗಿದ್ದು, ಜನ ಪರದಾಡುವಂತಾಯಿತು.
ರಾತ್ರಿಯಿಡೀ ಮಳೆ ಸುರಿದ ಕಾರಣ, ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜಾಗರಣೆ ಮಾಡಬೇಕಾಯಿತು. ನಿಂತಿರುವ ನೀರನ್ನು ಸರಾಗವಾಗಿ ಹರಿಯುವಂತೆ ಮಾಡಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಚೆನ್ನೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಕೂಡ ಮಳೆ ಸಾಧ್ಯತೆ
ಇನ್ನು ಬೆಂಗಳೂರು ನಗರದಲ್ಲಿ ಕೂಡ ಸೋಮವಾರ ಬೆಳಿಗ್ಗೆ ಮೋಡ ಕವಿದ ವಾತಾವರಣ ಇದ್ದು, ಹವಾಮಾನ ತಂಪಾಗಿದೆ. ಸಂಜೆ ವೇಳೆಗೆ ಬೆಂಗಳೂರು ನಗರದಲ್ಲಿ ಕೂಡ ಉತ್ತಮ ಮಳೆ ಬೀಳುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಬಿಪರ್ ಜಾಯ್ ಚಂಡಮಾರುತದ ಪರಿಣಾಮ ಮುಂಗಾರು ದುರ್ಬಲವಾಗಿತ್ತು, ನಿರೀಕ್ಷಿತ ಮಳೆಯಾಗದ ಕಾರಣ ಬರದ ಆತಂತ ಎದುರಾಗಿತ್ತು. ಸದ್ಯ ಹವಾಮಾನ ಇಲಾಖೆ ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು-ಮಿಂಚು ಸಹಿತ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.












Click it and Unblock the Notifications