Breaking: ಪಹಲ್ಗಾಮ್ ನಂತರ ಕುಪ್ವಾರಾದಲ್ಲಿ ಗುಂಡಿನ ದಾಳಿ- ಓರ್ವ ಸಾವು!
ಶ್ರೀನಗರ ಏಪ್ರಿಲ್ 27: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಉಗ್ರರ ಅಟ್ಟಹಾಸ ಕಡಿಮೆಯಾಗಿರುವಂತೆ ಕಾಣಿಸುತ್ತಿಲ್ಲ. ಉತ್ತರ ಕಾಶ್ಮೀರದ ಕುಪ್ವಾರಾದಲ್ಲಿ ಶನಿವಾರ ರಾತ್ರಿ ಮತ್ತೋರ್ವ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಗುಲಾಮ್ ರಸೂಲ್ ಮಗ್ರೆ (Ghulam Rasool Magray) ಎಂಬುವವರನ್ನು ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ.
ಶನಿವಾರ ರಾತ್ರಿ ಕಾನಿ ಖಾಸ್ ಪ್ರದೇಶದಲ್ಲಿರುವ ಗುಲಾಮ್ ರಸೂಲ್ ಮಗ್ರೆ ಅವರ ಮನೆಗೆ ಅಪರಿಚಿತ ಬಂದೂಕುಧಾರಿಗಳು ನುಗ್ಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿಯ ನಂತರ ಬಂದೂಕುಧಾರಿಗಳು ಪರಾರಿಯಾಗಿದ್ದು, ತೀವ್ರವಾಗಿ ಗಾಯಗೊಂಡ ಮಗ್ರೆ ಅವರನ್ನು ಹಂದ್ವಾರದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಅವರನ್ನು ಶ್ರೀನಗರದ ಶ್ರೀ ಮಹಾರಾಜ ಹರಿ ಸಿಂಗ್ (SMHS) ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. 44 ವರ್ಷದ ಮಗ್ರೆ ಅವರ ಹೊಟ್ಟೆಗೆ ಗುಂಡು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಹತ್ಯೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಮಂಗಳವಾರ (ಏಪ್ರಿಲ್ 22) 25 ಪ್ರವಾಸಿಗರು ಮತ್ತು ಸ್ಥಳೀಯ ಓರ್ವ ವ್ಯಕ್ತಿಯ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿ ಕೊಂದರು. ದಾಳಿಯ ನಂತರ ಕಣಿವೆಯಲ್ಲಿ ಹೆಚ್ಚಿನ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪಹಲ್ಗಾಮ್ ದಾಳಿಯ ನಂತರ ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಾದ್ಯಂತ ಉಗ್ರರ ವಿರುದ್ಧ ಭಾರಿ ಕಾರ್ಯಾಚರಣೆ ಆರಂಭಿಸಿವೆ. ಘಟನೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ ಮತ್ತು ಉಗ್ರಗಾಮಿಗಳ ಬಗ್ಗೆ ಸಹಾನುಭೂತಿ ಹೊಂದಿರುವವರ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಕಣಿವೆಯಾದ್ಯಂತ 2,000 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications