UAN ಜನರೇಟ್ ಮಾಡುವುದು ಮತ್ತಷ್ಟು ಸುಲಭ: ಉದ್ಯೋಗಿಗಳಿಗೆ ಸಿಹಿಸುದ್ದಿ
ನವದೆಹಲಿ, ಏಪ್ರಿಲ್ 09: ಜಗತ್ತು ಇದೀಗ ಡಿಜಿಟಲ್ ಮಯವಾಗುತ್ತಿದೆ. ಬಹುತೇಕ ಕೆಲಸಗಳು ಮೊಬೈಲ್‌ನಲ್ಲಿಯೇ ಮುಗಿದುಹೋಗುತ್ತವೆ. ಡಿಜಿಟಲ್ ಇಂಡಿಯಾ ಅಡಿಯಲ್ಲಿ, ಭಾರತ ಸರ್ಕಾರವು ಇ-ಆಡಳಿತವನ್ನು ಉತ್ತೇಜಿಸುತ್ತಿದೆ. ಇ-ಆಡಳಿತದ ಮೂಲಕ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಉತ್ತಮ ಮತ್ತು ವೇಗವಾಗಿ ತಲುಪಿಸಲು UMANG ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಅನ್ನು ಬಳಸಿಕೊಂಡು ನಾವು ಮನೆಯಲ್ಲಿ ಕುಳಿತೇ ಸರ್ಕಾರಿ ಸೇವೆಗಳನ್ನು ಪಡೆಯಬಹುದು. UAN ಜನರೇಟ್ ಮಾಡುವುದು ಮತ್ತಷ್ಟು ಸುಲಭವಾಗಿದೆ.
ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಚಂದಾದಾರರಾಗುವವರು ಇನ್ನು ಮುಂದೆ ಮುಖ ದೃಢೀಕರಣ (ಫೇಸ್ ಆಥೆಂಟಿಕೇಷನ್) ಮೂಲಕ ತಮ್ಮ ಸಾರ್ವತ್ರಿಕ ಖಾತೆ ಸಂಖ್ಯೆಯನ್ನು(ಯುನಿವರ್ಸಲ್ ಅಕೌಂಟ್ ನಂಬರ್-ಯುಎಎನ್) ಜನರೇಟ್ ಮಾಡಬಹುದು ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ತಿಳಿಸಿದ್ದಾರೆ.

ಯುಎಎನ್ ಹಂಚಿಕೆ ಮತ್ತು ಆಕ್ಟಿವೇಶನ್‌ಗೆ ಫೇಸ್ ಆಥೆಂಟಿಕೇಷನ್ ಬಳಸಲು ಅನುವಾಗುವಂತೆ ಸುಧಾರಿತ ಡಿಜಿಟಲ್ ಸೇವೆಗಳನ್ನು ಇಪಿಎಫ್‌ಒ ಜಾರಿಗೆ ತಂದಿದೆ. ಉಮಂಗ್ ಮೊಬೈಲ್ ಆ್ಯಪ್‌ನಲ್ಲೇ ಸದಸ್ಯರು ಇನ್ನು ಮುಂದೆ ಈ ಸೌಲಭ್ಯ ಬಳಸಿ ಯುಎಎನ್ ಜನರೇಟ್ ಮಾಡಿಕೊಳ್ಳಬಹುದಾಗಿದೆ. ಉದ್ಯೋಗದಾತ ಕಂಪನಿಗಳು ಕೂಡ ಈ ವ್ಯವಸ್ಥೆಯನ್ನು ಬಳಸಬಹುದಾಗಿದೆ. ಕೋಟ್ಯಂತರ ಸದಸ್ಯರಿಗೆ ಸಂಪರ್ಕರಹಿತ, ಸುರಕ್ಷಿತ, ಆಧುನಿಕ ಡಿಜಿಟಲ್ ಸೇವೆ ನೀಡುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಉಮಂಗ್ ಆ್ಯಪ್ ತೆರೆದು, ಅದರಲ್ಲಿ ಯುಎಎನ್ ಹಂಚಿಕೆಗೆ ನೀಡಿರುವ ಸೂಚನೆಗಳನ್ನು ಪಾಲಿಸಬೇಕು. ಆಧಾರ್ ಆಧರಿತ ಪರಿಶೀಲನೆ ಬಳಿಕ ಯುಎಎನ್ ಜನರೇಟ್ ಆಗುತ್ತದೆ. ಆಧಾರ್ ಡೇಟಾಬೇಸ್‌ನಲ್ಲಿ ನಮೂದಿಸಲಾದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಕಳಿಸಲಾಗುತ್ತದೆ. ನಂತರ ಉದ್ಯೋಗಿಯು ಯುಎಎನ್ ಕಾರ್ಡ್‌ನ್ನು ಪೋರ್ಟಲ್ ಅಥವಾ ಉಮಂಗ್ ಆ್ಯಪ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈಗಾಗಲೇ ಯುಎಎನ್ ಇದ್ದು, ಅದನ್ನು ಆಕ್ಟಿವೇಟ್ ಮಾಡಿಕೊಳ್ಳದೇ ಇರುವವರು ಉಮಂಗ್ ಆ್ಯಪ್ ಮೂಲಕ ಮಾಡಿಕೊಳ್ಳಬಹುದು ಎಂದು ವಿವರಿಸಿದರು.
ಮೊದಲಿನ ಸಾಂಪ್ರದಾಯಿಕ ಪದ್ದತಿಗಳಿಂತ ಮುಖ ದೃಢೀಕರಣದಂತಹ ಬಯೋಮೆಟ್ರಿಕ್ ಪದ್ಧತಿಯ ಬಳಕೆ ಹೆಚ್ಚು ಸುರಕ್ಷಿತ ಮಾತ್ರವಲ್ಲದೆ, ಉದ್ಯೋಗದಾತರು ಮತ್ತು ಪ್ರಾದೇಶಿಕ ಕಚೇರಿಯ ಹಸ್ತಕ್ಷೇಪವಿಲ್ಲದೆ ವಿವಿಧ ಸೇವೆಗಳನ್ನು ನೇರವಾಗಿ ಉದ್ಯೋಗಿಯೇ ಪಡೆಯುವುದಕ್ಕೂ ದಾರಿ ಮಾಡಿಕೊಡುತ್ತದೆ. ಮುಂದಿನ ದಿನಗಳಲ್ಲಿ ಪಿಂಚಣಿದಾರರಿಗೆ ಮನೆ ಬಾಗಿಲಿಗೇ ಸೇವೆಗಳನ್ನು ಒದಗಿಸಲು ಅನುವಾಗುವಂತೆ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.
UMANG ಡಿಜಿಟಲ್ ಇಂಡಿಯಾ ಅಡಿಯಲ್ಲಿ ಭಾರತದಲ್ಲಿ ಇ-ಆಡಳಿತವನ್ನು ಮತ್ತಷ್ಟು ಉತ್ತಮಪಡಿಸಲು ವಿನ್ಯಾಸಗೊಳಿಸಲಾದ ಮೊಬೈಲ್ ಆ್ಯಪ್ ಇದಾಗಿದೆ. ಅಪ್ಲಿಕೇಶನ್ ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗ ಅಭಿವೃದ್ಧಿಪಡಿಸಿದೆ.












Click it and Unblock the Notifications