ತೆಲಂಗಾಣ ಡಿಜಿಪಿಗೆ ಬಿಗ್ ರಿಲೀಫ್ ಕೊಟ್ಟ ಚುನಾವಣಾ ಆಯೋಗ!
ಹೈದರಾಬಾದ್, ಡಿಸೆಂಬರ್ 12; ತೆಲಂಗಾಣದ ಪೊಲೀಸ್ ಮಹಾ ನಿರ್ದೇಶಕ ಅಂಜನಿ ಕುಮಾರ್ ಅಮಾನತು ಆದೇಶವನ್ನು ಕೇಂದ್ರ ಚುನಾವಣಾ ಆಯೋಗ ವಾಪಸ್ ಪಡೆದಿದೆ. ಡಿಸೆಂಬರ್ 3ರಂದು ಅವರನ್ನು ಅಮಾನತುಗೊಳಿಸಿ ಆಯೋಗ ಆದೇಶ ಹೊರಡಿಸಿತ್ತು.
ಮಂಗಳವಾರ ಕೇಂದ್ರ ಚುನಾವಣಾ ಆಯೋಗ ಡಿಜಿಪಿ ಅಂಜನಿ ಕುಮಾರ್ ಅಮಾನತು ಆದೇಶ ವಾಪಸ್ ಪಡೆದಿದೆ. ತೆಲಂಗಾಣ ವಿಧಾನಸಭೆ ಚುನಾವಣೆ 2023ರ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಅಂಜನಿ ಕುಮಾರ್ ಅಮಾನತು ಮಾಡಲಾಗಿತ್ತು.

ತೆಲಂಗಾಣ ವಿಧಾನಸಭೆ ಚುನಾವಣೆ 2023ರ ಮತ ಎಣಿಕೆ ಡಿಸೆಂಬರ್ 3ರ ಭಾನುವಾರ ನಡೆಯುತ್ತಿತ್ತು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವಾಗಲೇ ಡಿಜಿಪಿ ಅಂಜನಿ ಕುಮಾರ್ ಕಾಂಗ್ರೆಸ್ ನಾಯಕ, ಪಕ್ಷದ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಭೇಟಿ ಮಾಡಿದ್ದರು.
ಚುನಾವಣೆಗೂ ಮೊದಲು ತೆಲಂಗಾಣದಲ್ಲಿ ಬಿಆರ್‌ಎಸ್ ಪಕ್ಷ ಆಡಳಿತದಲ್ಲಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಚುನಾವಣಾ ಮತ ಎಣಿಕೆ ನಡೆಯುವಾಗ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಇಂತಹ ಸಮಯದಲ್ಲಿಯೇ ಡಿಜಿಪಿ ಅಂಜನಿ ಕುಮಾರ್ ಕಾಂಗ್ರೆಸ್ ನಾಯಕ, ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿದ್ದ ರೇವಂತ್ ರೆಡ್ಡಿ ಭೇಟಿಯಾಗಿದ್ದರು. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಅಂಜನಿ ಕುಮಾರ್ ಅಮಾನತು ಮಾಡಲಾಗಿತ್ತು.
ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ, ಮತ ಎಣಿಕೆ ಪೂರ್ಣಗೊಳ್ಳುವ ತನಕ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇಂತಹ ಸಮಯದಲ್ಲಿಯೇ ಸರ್ಕಾರಿ ಅಧಿಕಾರಿ, ರಾಜ್ಯ ಪೊಲೀಸ್ ಮುಖ್ಯಸ್ಥರಾದ ಡಿಜಿಪಿ ಅಂಜನಿ ಕುಮಾರ್ ರೇವಂತ್ ರೆಡ್ಡಿ ಭೇಟಿ ಮಾಡಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು.
ಈಗ ತೆಲಂಗಾಣ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟಗೊಂಡು ಕಾಂಗ್ರೆಸ್ 64 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದೆ. ಪಕ್ಷದ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆಯೂ ಸಹ ತೆರವುಗೊಂಡಿದೆ.
ಈ ಹಿನ್ನಲೆಯಲ್ಲಿ ಡಿಸೆಂಬರ್ 3ರಂದು ರೇವಂತ್ ರೆಡ್ಡಿ ಭೇಟಿ ಮಾಡಿದ್ದ ಡಿಜಿಪಿ ಅಂಜನಿ ಕುಮಾರ್ ಅಮಾನತು ಆದೇಶವನ್ನು ಸಹ ಕೇಂದ್ರ ಚುನಾವಣಾ ಆಯೋಗ ತೆರವು ಮಾಡಿದೆ. ಈ ಮೂಲಕ ಐಪಿಎಸ್ ಅಧಿಕಾರಿಗೆ ಬಿಗ್ ರಿಲೀಫ್ ಸಿಕ್ಕಿದೆ.
1990ನೇ ಬ್ಯಾಚ್ ಐಪಿಎಸ್ ಅಧಿಕಾರಿ ಅಂಜನಿ ಕುಮಾರ್ ಒಂದು ವರ್ಷದ ಹಿಂದೆ ತೆಲಂಗಾಣ ರಾಜ್ಯದ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಮತ ಎಣಿಕೆ ನಡೆಯುತ್ತಿರುವಾಗ ಪಕ್ಷದ ನಾಯಕರೊಬ್ಬರನ್ನು ಭೇಟಿ ಮಾಡುವ ಮೂಲಕ ಸುದ್ದಿ ಮಾಡಿದ್ದರು.
ಅಂಜನಿ ಕುಮಾರ್ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ, ತೆಲಂಗಾಣ ಭ್ರಷ್ಟಾಚಾರ ವಿರೋಧಿ ಬ್ಯುರೋದ ಮುಖ್ಯಸ್ಥರಾಗಿ, ತೆಲಂತಾಣ ಎಡಿಜಿಪಿಯಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. ನಕ್ಸಲ್ ನಿಗ್ರಹಕ್ಕೆ ಆಂಧ್ರ ಪ್ರದೇಶ ಸರ್ಕಾರ ರಚನೆ ಮಾಡಿದ್ದ ವಿಶೇಷ ಕಾರ್ಯಪಡೆಗೆ ಅಂಜನಿ ಕುಮಾರ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಉತ್ತಮ ಕ್ರೀಡಾಪಟುವಾಗಿರುವ ಅಂಜನಿ ಕುಮಾರ್ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿನ ಸೇವೆಗಾಗಿ ವಿಶ್ವಸಂಸ್ಥೆಯ ಶಾಂತಿ ಪದಕವನ್ನು ಸಹ ಪಡೆದಿದ್ದಾರೆ. ಗಣ್ಯರು, ವಿಐಪಿಗಳ ಭದ್ರತೆಯ ಉಸ್ತುವಾರಿಯನ್ನು ಖಡಕ್ ಆಗಿ ನೋಡಿಕೊಳ್ಳುವ ಮೂಲಕ ಇಲಾಖೆಯಲ್ಲಿ ಉತ್ತಮ ಹೆಸರುಗಳಿಸಿದ್ದಾರೆ.
ಯಾವುದೇ ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಪೊಲೀಸರು, ಸರ್ಕಾರಿ ನೌಕರರು ಕಾರ್ಯ ನಿರ್ವಹಣೆ ಮಾಡಬೇಕಿದೆ. ಆದರೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಅಂಜನಿ ಕುಮಾರ್ ರಾಜಕೀಯ ಪಕ್ಷದ ಪ್ರಮುಖ ನಾಯಕನನ್ನು ಭೇಟಿಯಾಗಿದ್ದರು.












Click it and Unblock the Notifications